ಸಿದ್ದರಾಮಯ್ಯ
ಬೆಂಗಳೂರು: ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಕಲ್ಪಿಸುವ ಐತಿಹಾಸಿಕ ತೀರ್ಮಾನವನ್ನು ವಿಧಾನಮಂಡಲದ ಉಭಯ ಸದನಗಳಲ್ಲಿ ಬುಧವಾರ ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಪರಿಶಿಷ್ಟ ಜಾತಿಗಳ ಶಾಶ್ವತ ಆಯೋಗ’ ರಚಿಸಲಾಗುವುದು ಎಂದೂ ಪ್ರಕಟಿಸಿದರು.
ಮಂಗಳವಾರ ರಾತ್ರಿ ನಡೆದ ಸಚಿವ ಸಂಪುಟದ ವಿಶೇಷ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳ ಕುರಿತು ಸದನದಲ್ಲಿ ಮುಖ್ಯಮಂತ್ರಿ ಹೇಳಿಕೆ ನೀಡಿದರು.
‘101 ಪರಿಶಿಷ್ಟ ಜಾತಿಗಳನ್ನು ‘ಎ’, ‘ಬಿ’, ‘ಸಿ’ ಎಂದು ಮೂರು ಪ್ರವರ್ಗಗಳಾಗಿ ವಿಂಗಡಿಸಲು ತೀರ್ಮಾನಿಸಿದ್ದೇವೆ. ಎಡಗೈ ಸಂಬಂಧಿತ ಜಾತಿಗಳಿರುವ ‘ಎ’ ಪ್ರವರ್ಗಕ್ಕೆ ಶೇ 6, ಬಲಗೈ ಸಂಬಂಧಿತ ಜಾತಿಗಳಿರುವ ‘ಬಿ’ ಪ್ರವರ್ಗಕ್ಕೆ ಶೇ 6 ಹಾಗೂ ‘ಸಿ’ ಪ್ರವರ್ಗಕ್ಕೆ ಶೇ 5ರಷ್ಟು ಒಳ ಮೀಸಲಾತಿ ನೀಡಲು ನಿರ್ಣಯಿಸಿದ್ದೇವೆ’ ಎಂದರು.
‘ಪರಿಶಿಷ್ಟ ಜಾತಿಗಳಲ್ಲಿನ ಚಲನಶೀಲತೆ ಹಾಗೂ ಲಭ್ಯವಾಗುವ ದತ್ತಾಂಶಗಳನ್ನು ಪರಿಶೀಲಿಸಿ, ಕಾಲಕಾಲಕ್ಕೆ ಈ ಜಾತಿಗಳನ್ನು ಅಧ್ಯಯನ ಮಾಡಿ ವರದಿ ನೀಡಲು ಪರಿಶಿಷ್ಟ ಜಾತಿಗಳ ಶಾಶ್ವತ ಆಯೋಗ ರಚಿಸಲಾಗುವುದು. ಒಳ ಮೀಸಲಾತಿಯ ಕುರಿತಂತೆ ಆದೇಶ ಹೊರಡಿಸಿದ ಕೂಡಲೇ ನೇಮಕಾತಿ ಪ್ರಕ್ರಿಯೆಗಳನ್ನು ಆರಂಭಿಸಲಾಗುವುದು. ಅಲ್ಲದೆ, ಒಂದು ಬಾರಿಗೆ ವಯೋಮಿತಿ ಸಡಿಲಿಸಲಾಗುವುದು. ಒಳ ಮೀಸಲಾತಿ ಹೋರಾಟಗಾರರ ಮೇಲಿನ ಮೊಕದ್ದಮೆ ಹಿಂಪಡೆಯಲಾಗುವುದು’ ಎಂದೂ ತಿಳಿಸಿದರು.
‘ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸಲು ಸರ್ಕಾರ ರಚಿಸಿದ್ದ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ನೇತೃತ್ವದ ಆಯೋಗವು, ಪರಿಶಿಷ್ಟ ಜಾತಿಗಳನ್ನು ‘ಎ’, ‘ಬಿ’, ‘ಸಿ’, ‘ಡಿ’, ‘ಇ’ ಎಂದು ಐದು ಪ್ರವರ್ಗಗಳಾಗಿ ವಿಂಗಡಿಸಿ ಶಿಫಾರಸು ಮಾಡಿತ್ತು. ಸುಪ್ರೀಂ ಕೋರ್ಟ್ ತೀರ್ಪಿನಲ್ಲಿದ್ದ ತತ್ವಗಳನ್ನು ಗಮನದಲ್ಲಿ ಇಟ್ಟುಕೊಂಡು ಕೆಲವು ಮಾರ್ಪಾಡುಗಳೊಂದಿಗೆ ಈ ಶಿಫಾರಸುಗಳನ್ನು ಅಂಗೀಕರಿಸಲಾಗಿದೆ’ ಎಂದರು.
‘ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಎಲ್ಲ ಜಾತಿಗಳಿಗೆ ಶಿಕ್ಷಣ, ಉದ್ಯೋಗ ಮತ್ತು ಇತರೆ ವಿಷಯಗಳಲ್ಲಿ ಅವಕಾಶಗಳನ್ನು ಒದಗಿಸುವಾಗ ಸಮಾನತೆ ಮತ್ತು ನ್ಯಾಯ ಸಮ್ಮತಿಯನ್ನು ಖಚಿತಪಡಿಸಿಕೊಳ್ಳುವ ದೃಷ್ಟಿಯಿಂದ ಈ ಮಾರ್ಪಾಡುಗಳನ್ನು ಮಾಡಲಾಗಿದೆ’ ಎಂದು ಮುಖ್ಯಮಂತ್ರಿ ಸಮರ್ಥನೆ ನೀಡಿದರು.
‘ಸದ್ಯ ತೆಗೆದುಕೊಂಡಿರುವ ತೀರ್ಮಾನದಲ್ಲಿ ಯಾವುದಾದರೂ ಬದಲಾವಣೆಯ ಅಗತ್ಯ ಕಂಡುಬಂದರೆ ಮುಂದೆ ನಡೆಯಲಿರುವ ರಾಷ್ಟ್ರೀಯ ಜನಗಣತಿಯಲ್ಲಿನ ಅಂಕಿ-ಅಂಶಗಳನ್ನು ಆಧರಿಸಿ ಬದಲಾವಣೆಗೆ ಒಳಪಡಿಸುವ ಷರತ್ತಿಗೆ ಸರ್ಕಾರ ಬದ್ಧವಾಗಿದೆ’ ಎಂದೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.