ADVERTISEMENT

ಒಳಮೀಸಲಾತಿ ಸಮೀಕ್ಷೆ: 25ರವರೆಗೆ ವಿಸ್ತರಣೆ

ರಾಜ್ಯವ್ಯಾಪಿ ಶೇ 73, ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ 36ರಷ್ಟು ಪ್ರಗತಿ: ನ್ಯಾ. ನಾಗಮೋಹನ ದಾಸ್

​ಪ್ರಜಾವಾಣಿ ವಾರ್ತೆ
Published 17 ಮೇ 2025, 0:30 IST
Last Updated 17 ಮೇ 2025, 0:30 IST
ಎಚ್.ಎನ್.ನಾಗಮೋಹನ್ ದಾಸ್ 
ಎಚ್.ಎನ್.ನಾಗಮೋಹನ್ ದಾಸ್    

ಬೆಂಗಳೂರು: ಒಳಮೀಸಲಾತಿ ಕಲ್ಪಿಸುವ ಉದ್ದೇಶದಿಂದ ಪರಿಶಿಷ್ಟ ಜಾತಿಯಲ್ಲಿನ 101 ಜಾತಿಗಳ ದತ್ತಾಂಶ ಸಂಗ್ರಹಕ್ಕೆ ನಡೆದಿರುವ ಸಮೀಕ್ಷೆಯ ಅವಧಿಯನ್ನು ಇದೇ 25ರವರೆಗೆ ವಿಸ್ತರಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಒಳ ಮೀಸಲಾತಿ ಕುರಿತ ಏಕಸದಸ್ಯ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ ದಾಸ್‌ ಅವರು ಈ ವಿಷಯ ತಿಳಿಸಿದರು.

ಮೇ 16ರವರೆಗೆ ಪರಿಶಿಷ್ಟ ಜಾತಿಯ ಸುಮಾರು 20 ಲಕ್ಷ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಾಗಿದೆ. ರಾಜ್ಯವ್ಯಾಪಿ ಶೇ 73.22 ರಷ್ಟು ಮತ್ತು ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ 36 ರಷ್ಟು ಮಾತ್ರ ಪ್ರಗತಿ ಸಾಧಿಸಲಾಗಿದೆ ಎಂದು ಅವರು ಹೇಳಿದರು. 

ADVERTISEMENT

ಸಮೀಕ್ಷೆ ವೇಳೆ ಉದ್ಭವಿಸಿರುವ ಕೆಲವು ಸಮಸ್ಯೆಗಳನ್ನು ಸರಿಪಡಿಸಲು ಜನಪ್ರತಿನಿಧಿಗಳು ಮತ್ತು ಸಂಘ ಸಂಸ್ಥೆಗಳು ಸಮೀಕ್ಷೆಯ ದಿನಾಂಕ ವಿಸ್ತರಿಸಬೇಕು ಎಂದು ಮನವಿ ಸಲ್ಲಿಸಿದ್ದಾರೆ. ಇದಕ್ಕೆ ಸ್ಪಂದಿಸಿದ್ದು, ಮನೆ–ಮನೆ ಸಮೀಕ್ಷೆ ದಿನಾಂಕವನ್ನು ಇದೇ 25 ರವರೆಗೆ ವಿಸ್ತರಿಸಲಾಗಿದೆ. ಅಲ್ಲದೇ, ವಿಶೇಷ ಶಿಬಿರಗಳನ್ನು (ಸಮೀಕ್ಷಾ ಬ್ಲಾಕ್‌ ವ್ಯಾಪ್ತಿಯಲ್ಲಿ) ಇದೇ 26ರಿಂದ 28ರವರೆಗೆ ಮರುನಿಗದಿ ಮಾಡಲಾಗಿದೆ. ಆನ್‌ಲೈನ್‌ ಮೂಲಕ ಸ್ವಯಂ ಘೋಷಣೆ ಇದೇ 19ರಿಂದ 28ಕ್ಕೆ ನಿಗದಿ ಮಾಡಲಾಗಿದೆ ಎಂದು ತಿಳಿಸಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕುಂಠಿತ:

ವಿವಿಧ ಕಾರಣಗಳಿಂದಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಸಮೀಕ್ಷೆಯ ಪ್ರಗತಿ ಕುಂಠಿತವಾಗಿದೆ. ಈ ಸಂಬಂಧ ಬಿಬಿಎಂಪಿ ಮುಖ್ಯ ಆಯುಕ್ತರು ಮತ್ತು ವಲಯ ಆಯುಕ್ತರೊಂದಿಗೆ ಸಭೆ ನಡೆಸಲಾಗಿದೆ. ಇಲ್ಲಿ ಸರ್ಕಾರಿ ಶಿಕ್ಷಕರ ಕೊರತೆ ಇದೆ. ಇದರಿಂದಾಗಿ ಸಮೀಕ್ಷೆಯನ್ನು ಸಮರ್ಪಕವಾಗಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದರು.

ಈ ಸಮಸ್ಯೆಯನ್ನು ಬಗೆಹರಿಸಲು ಇಂಗ್ಲಿಷ್‌ ಜ್ಞಾನ ಹೊಂದಿರುವ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಖಾಸಗಿ ಶಾಲಾ ಶಿಕ್ಷಕರನ್ನು ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ. ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ 2ನೇ ಹಂತದ ತರಬೇತಿಯನ್ನು ಈಗಾಗಲೇ ನೀಡಲಾಗಿದೆ. ಸಮೀಕ್ಷೆ ನಡೆಸುವವರಿಗೆ ₹5,000 ಭತ್ಯೆ, ಜತೆಗೆ ಪ್ರತಿ ಒಂದು ಪರಿಶಿಷ್ಟರ ಮನೆ ಸಮೀಕ್ಷೆಗೆ ತಲಾ ₹100 ನೀಡಲಾಗುವುದು ಎಂದರು.

ನಿಗದಿತ ಸಮಯಕ್ಕೆ ವರದಿ:

‘ದತ್ತಾಂಶ ಸಂಗ್ರಹದ ಬಳಿಕ, ವೈಜ್ಞಾನಿಕವಾಗಿ ವಿಶ್ಲೇಷಣೆ ನಡೆಸಿ ಸಮಯ ವ್ಯರ್ಥ ಮಾಡದೇ ಸಕಾಲದಲ್ಲಿಯೇ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಸುಪ್ರೀಂ ಕೋರ್ಟ್‌ ತೀರ್ಪಿಗೆ ಅನುಗುಣವಾಗಿಯೇ ಜಾತಿಗಳ ವರ್ಗೀಕರಣ ಮಾಡಲಾಗುವುದು’ ಎಂದೂ ನಾಗಮೋಹನ ದಾಸ್ ಹೇಳಿದರು.

‘101 ಜಾತಿಗಳ ಪಟ್ಟಿಯಲ್ಲಿ ಇಲ್ಲದ ಮೇರ, ಮನ್ಸ, ಕೆಂಬಟ್ಟಿ ಮತ್ತು ಮಾದಿಗ ದಾಸರಿ ಜಾತಿಗಳನ್ನು ಎಲ್ಲಿಗೆ ಸೇರಿಸಬೇಕು ಎಂಬ ಬಗ್ಗೆ ಕಾನೂನಿನಲ್ಲಿರುವ ಅವಕಾಶಗಳನ್ನು ನೋಡಿ ಯಾವ ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ತೀರ್ಮಾನಿಸಲಾಗುವುದು. ಇವರು ಆದಿ ದ್ರಾವಿಡ, ಆದಿ ಕರ್ನಾಟಕ ಎಂದು ಬರೆಸುತ್ತಾ ಬಂದಿದ್ದು, ಮೂಲ ಜಾತಿಯನ್ನು ಬರೆಸಿಲ್ಲ’ ಎಂದರು.

ವಿಶಿಷ್ಟ ಆ್ಯಪ್‌:

‘ಸಮೀಕ್ಷೆಗೆ ಬಳಸುತ್ತಿರುವ ಆ್ಯಪ್‌ ಇಡೀ ದೇಶದಲ್ಲೇ ವಿಶಿಷ್ಟವಾದುದು. ಈ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿಯನ್ನು ಕೇಳಿದೆ. ಅದಕ್ಕೆ ನಾವು ಉತ್ತರ ಸಿದ್ಧ ಮಾಡಿದ್ದೇವೆ’ ಎಂದು ನಾಗಮೋಹನ ದಾಸ್‌ ಹೇಳಿದರು.

‘43 ವಿವಿಧ ಇಲಾಖೆಗಳಲ್ಲಿರುವ ಪರಿಶಿಷ್ಟ ನೌಕರರ ಮಾಹಿತಿ ಕೇಳಿದ್ದು, 40 ಇಲಾಖೆಗಳ ಮಾಹಿತಿ ಬಂದಿದೆ. ರಾಜಕೀಯ ಪ್ರಾತಿನಿಧ್ಯದ ಬಗ್ಗೆ ರಾಜ್ಯ ಮತ್ತು ಕೇಂದ್ರ ಚುನಾವಣಾ ಆಯೋಗಳು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಇಲಾಖೆಯಿಂದ ಮಾಹಿತಿ ಕೇಳಿದ್ದೇವೆ. ನಿಗಮ, ಮಂಡಳಿಗಳ ಮೂಲಕ ಎಷ್ಟು ಮಂದಿಗೆ ಸೌಲಭ್ಯವನ್ನು ನೀಡಲಾಗಿದೆ ಎಂಬ ಮಾಹಿತಿ ನೀಡುವಂತೆ ಕೋರಿಕೆ ಸಲ್ಲಿಸಲಾಗಿದೆ’ ಎಂದು ಅವರು ತಿಳಿಸಿದರು.

ನಗರ ಪ್ರದೇಶಗಳಲ್ಲಿ ಪರಿಶಿಷ್ಟರು ಮತ್ತು ಇತರ ಸಮುದಾಯದವರು ಸಹಜೀವನ ನಡೆಸುತ್ತಿದ್ದಾರೆ. ಇದೊಂದು ಉತ್ತಮ ಅಂಶ. ಆದರೆ ಅಸ್ಪೃಶ್ಯತೆ ಸಂಪೂರ್ಣ ನಿವಾರಣೆ ಆಗಿದೆ ಎನ್ನಲಾಗದು
ನ್ಯಾ. ಎಚ್‌.ಎನ್‌. ನಾಗಮೋಹನ ದಾಸ್‌

ಸಮೀಕ್ಷೆಗೆ ಅಡ್ಡಿಪಡಿಸಿದರೆ ಕ್ರಮ

ಬಿಬಿಎಂಪಿ ವ್ಯಾಪ್ತಿಯ ಅಪಾರ್ಟ್‌ಮೆಂಟ್‌ಗಳಲ್ಲಿ ಸಮೀಕ್ಷೆಗೆ ಹೋದವರಿಗೆ ಮಾಹಿತಿ ನೀಡಲು ನಿರಾಕರಿಸಿದರೆ ಅಥವಾ ಸಮೀಕ್ಷೆಗೆ ಅಡ್ಡಿಪಡಿಸಿದರೆ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ ಎಂದು ನಾಗಮೋಹನ ದಾಸ್‌ ತಿಳಿಸಿದರು. ಅಗತ್ಯ  ಬಿದ್ದರೆ ಅಂತಹ ಅಪಾರ್ಟ್‌ಮೆಂಟ್‌ಗಳ ವಿದ್ಯುತ್‌ ಮತ್ತು ಕುಡಿಯುವ ನೀರಿನ ಸಂಪರ್ಕವನ್ನು ಕಡಿತಗೊಳಿಸಲೂ ಸೂಚಿಸಲಾಗಿದೆ. ಆದ್ದರಿಂದ ಎಲ್ಲ ನಾಗರಿಕರು ಸಮೀಕ್ಷೆಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.