ADVERTISEMENT

ಆಗಸ್ಟ್‌ ಅಂತ್ಯದೊಳಗೆ ಒಳಮೀಸಲಾತಿ ಜಾರಿ: ಆಂಜನೇಯ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2025, 16:20 IST
Last Updated 7 ಆಗಸ್ಟ್ 2025, 16:20 IST
ಎಚ್. ಆಂಜನೇಯ
ಎಚ್. ಆಂಜನೇಯ   

ಬೆಂಗಳೂರು: ಆಗಸ್ಟ್‌ ತಿಂಗಳ ಅಂತ್ಯದೊಳಗೆ ರಾಜ್ಯ ಸರ್ಕಾರವು ಒಳಮೀಸಲಾತಿ ಜಾರಿಗೆ ತರಲಿದೆ ಎಂದು ಮಾಜಿ ಸಚಿವ, ಕಾಂಗ್ರೆಸ್‌ನ ಎಚ್‌.ಆಂಜನೇಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಸರ್ವರ ಅಭಿಪ್ರಾಯ ಪಡೆದು ಒಳಮೀಸಲಾತಿ ಜಾರಿಗೆ ತರುವ ನಿರ್ಧಾರವನ್ನು ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡಿರುವುದು ಸ್ವಾಗತಾರ್ಹ. ಹೀಗಾಗಿ, ಈ ವಿಚಾರದಲ್ಲಿ ಚಾಲ್ತಿಯಲ್ಲಿದ್ದ ಊಹಾಪೋಹಗಳಿಗೆ ಈಗ ತೆರೆಬಿದ್ದಿದೆ’ ಎಂದು ಹೇಳಿದ್ದಾರೆ.

‘ಆಯೋಗವು 1.07 ಕೋಟಿ ಜನರನ್ನು ಸಮೀಕ್ಷೆ ನಡೆಸಿ, ಮಾಹಿತಿ ಕಲೆಹಾಕಿದೆ. ಜನಸಂಖ್ಯೆ, ಸಾಮಾಜಿಕ–ಶೈಕ್ಷಣಿಕ–ಆರ್ಥಿಕ ಹಿಂದುಳಿದಿರುವಿಕೆಯನ್ನು ವೈಜ್ಞಾನಿಕವಾಗಿ ದಾಖಲಿಸಲಾಗಿದೆ. 60 ದಿನಗಳಲ್ಲಿ ಇದನ್ನು ಸಾಧಿಸಿದೆ. ಇದೊಂದು ಮೈಲುಗಲ್ಲು’ ಎಂದಿದ್ದಾರೆ.

ADVERTISEMENT

‘ಆಗಸ್ಟ್‌ 16ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ವರದಿಗೆ ಅಧಿಕೃತ ಒಪ್ಪಿಗೆ ನೀಡಿ, ಅಧಿವೇಶನದಲ್ಲಿ ಮಂಡಿಸಲಾಗುತ್ತದೆ. ನಂತರ ಮಸೂದೆ ಪಾಸು ಮಾಡಿ, ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗುತ್ತದೆ. ಇವೆಲ್ಲವೂ ಆಗಸ್ಟ್‌ ತಿಂಗಳಲ್ಲೇ ನಡೆಯುತ್ತದೆ’ ಎಂದಿದ್ದಾರೆ.

‘ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಕ್ರಮ’

‘ನಾಗಮೋಹನದಾಸ್‌ ನೇತೃತ್ವದ ವಿಚಾರಣಾ ಆಯೋಗವು ಸಮಗ್ರ ಸಮೀಕ್ಷೆ ನಡೆಸಿ ವರದಿ ಸಲ್ಲಿಸಿದೆ. ಈ ಸಂಬಂಧ ಆಗಸ್ಟ್‌ 16 ಶನಿವಾರ ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಯಲಿದೆ’ ಎಂದು ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಹೇಳಿದ್ದಾರೆ. ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂದಿನ ಸಭೆಯಲ್ಲಿ ವರದಿಯ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಆನಂತರ ಅಗತ್ಯ ಕ್ರಮ ತೆಗೆದುಕೊಳ್ಳಲಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.