ರಾಮನಗರ: ‘ತಂತ್ರಜ್ಞಾನದಲ್ಲಿ ಪ್ರಗತಿ ಸಾಧಿಸುವ ಜತೆಗೆ ಮಾನವೀಯ ಮೌಲ್ಯಗಳನ್ನು ಕಾಪಾಡಿಕೊಳ್ಳುವುದಕ್ಕೂ ಒತ್ತು ನೀಡಬೇಕು. ದಯೆ ಮತ್ತು ಕನಿಕರದಿಂದ ಮುನ್ನಡೆಯುವ ಮಹಿಳೆಯರ ಪಾತ್ರ ಇದರಲ್ಲಿ ಅತ್ಯಂತ ಪ್ರಮುಖವಾಗಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಾನವೀಯ ಮೌಲ್ಯಗಳು ಅಖಂಡವಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು’ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅಭಿಪ್ರಾಯಪಟ್ಟರು.
ಬೆಂಗಳೂರು–ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಅಂತರರಾಷ್ಟ್ರೀಯ ಕೇಂದ್ರದಲ್ಲಿ ಶುಕ್ರವಾರದಿಂದ ನಡೆಯುತ್ತಿರುವ ಮೂರು ದಿನಗಳ 10ನೇ ಅಂತರರಾಷ್ಟ್ರೀಯ ಮಹಿಳಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
‘ನಾವು ತಾಂತ್ರಿಕ ಅಡಚಣೆಗಳ ಯುಗದಲ್ಲಿದ್ದೇವೆ. ತಂತ್ರಜ್ಞಾನದ ಪ್ರಗತಿಯು ಕೆಲವು ರೀತಿಯಲ್ಲಿ ಉತ್ತಮ ಗುಣಮಟ್ಟದ ಜೀವನ ನೀಡಿದೆ. ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ಸಹಾನುಭೂತಿ, ಪ್ರೀತಿ, ಏಕತೆ ಹಾಗೂ ಮಾನವೀಯ ಮೌಲ್ಯಗಳನ್ನು ಉತ್ತೇಜಿಸಲು ಪ್ರಜ್ಞಾಪೂರ್ವಕವಾಗಿ ಪ್ರಯತ್ನಿಸಬೇಕಾಗಿದೆ’ ಎಂದು ಕಿವಿಮಾತು ಹೇಳಿದರು.
ರವಿಶಂಕರ್ ಗುರೂಜಿ ನೇತೃತ್ವದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಜನರಿಗೆ ಧ್ಯಾನ ಹಾಗೂ ಮಾನವೀಯ ಸೇವೆಗಳ ಮೂಲಕ ಶಾಂತಿ ಮಾರ್ಗ ತೋರಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀ ಶ್ರೀ ರವಿಶಂಕರ್ ಗುರೂಜಿ ಮಾತನಾಡಿ, ‘ಮಹಿಳೆಯರು ಕಣ್ಣೀರು ಹಾಕಲು ಬಿಡಬಾರದು. ಮಹಿಳೆಯರು ನಾಯಕರಾದರೆ ಜಗತ್ತಿನಲ್ಲಿ ನಡೆಯುವ ಸಂಘರ್ಷ, ಯುದ್ಧ ಹಾಗೂ ಸಾಮಾಜಿಕ ಅಸ್ಥಿರತೆ ಕಡಿಮೆಯಾಗಬಹುದು’ ಎಂದು ಅಭಿಪ್ರಾಯಪಟ್ಟರು.
ಅಂತರರಾಷ್ಟ್ರೀಯ ಮಹಿಳಾ ಪರಿಷತ್ತಿನ ಅಧ್ಯಕ್ಷೆ ಭಾನುಮತಿ ನರಸಿಂಹನ್, ‘ಜಸ್ಟ್ ಬೀ ಎಂಬ ಘೋಷಣೆ ಮೂಲಕ ನಾವು ಆತ್ಮಾನುಸಂಧಾನ ಮಾಡಬೇಕು. ನಮ್ಮೊಳಗಿನ ಶಕ್ತಿ ಅರಿತು ಸಮತೋಲನ ಸಾಧಿಸಬೇಕು’ ಎಂದು ಹೇಳಿದರು.
ರಾಜ್ಯಪಾಲ ಥಾವರಚಂದ್ ಗೆಹಲೋತ್, ವಿದೇಶಾಂಗ ಮತ್ತು ಸಂಸ್ಕೃತಿ ಖಾತೆ ಮಾಜಿ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ, ಕಾಮನ್‌ವೆಲ್ತ್ ಸಂಸ್ಥೆ ಮಹಾಸಚಿವರಾದ ರೈಟ್‌ಹಾನ್ ಪ್ಯಾಟ್ರಿಷಿಯಾ ಸ್ಕಾಟ್‌ಲ್ಯಾಂಡ್, ಸಂಸದೆ ಹೇಮಾಮಾಲಿನಿ ಹಾಗೂ 50ಕ್ಕೂ ಹೆಚ್ಚು ದೇಶಗಳಿಂದ ಬಂದಿದ್ದ 500ಕ್ಕೂ ಹೆಚ್ಚು ಪ್ರತಿನಿಧಿಗಳು ಇದ್ದರು.
ವಿಶಾಲಾಕ್ಷಿ ಪ್ರಶಸ್ತಿ...
* ಅನ್ನಪೂರ್ಣ ದೇವಿ (ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ)
* ಹೇಮಾ ಮಾಲಿನಿ (ಸಿನಿಮಾ ಮತ್ತು ಸಾರ್ವಜನಿಕ ಸೇವೆ)
* ಪ್ಯಾಟ್ರಿಷಿಯಾ ಸ್ಕಾಟ್‌ಲ್ಯಾಂಡ್ (ಸಾಮಾಜಿಕ ನ್ಯಾಯ ಮತ್ತು ಸಮಾನತೆ)
* ಅಮ್ಲಾ ರೂಯಾ (ಗ್ರಾಮೀಣ ಅಭಿವೃದ್ಧಿ)
* ಡಾ.ಭಾಗ್ಯಶ್ರೀ ಪ್ರಸಾದ್ ಪಾಟೀಲ (ಕೃಷಿ ಸಂಶೋಧನೆ ಮತ್ತು ಗ್ರಾಮೀಣ ಅಭಿವೃದ್ಧಿ)
* ಕ್ಯಾಥರಿನ್ ವಿಂಟರ್ ಸೆಲ್ಲೇರಿ (ಸೂಕ್ಷ್ಮ ಪೋಷಣಾ ನಿಲುವು)
* ಆರ್.ಪದ್ಮಾವತಿ (ಭಾರತದ ಶಿಲ್ಪಕಲೆ ಸಂರಕ್ಷಣೆ)
* ಸಂಗೀತಾ ಜಿಂದಾಲ್ (ಭಾರತೀಯ ಸಂಸ್ಕೃತಿ ಸಂರಕ್ಷಣೆ)
* ಸ್ಮಿತಾ ಪ್ರಕಾಶ್ (ಪತ್ರಿಕೋದ್ಯಮ)
* ಸುಮಲತಾ ಅಂಬರೀಶ್ (ಸಾರ್ವಜನಿಕ ಸೇವೆ).
ಆಚಾರ್ಯ ರತ್ನಾನಂದ ಪ್ರಶಸ್ತಿ...
* ಲೆಫ್ಟಿನೆಂಟ್ ಕರ್ನಲ್ ಅನಿಷ್ ಮೋಹನ್ (ಶೌರ್ಯ ಮತ್ತು ಸೇವಾ ದೃಷ್ಟಿಕೋನ)
* ಅರ್ನಬ್ ಗೋಸ್ವಾಮಿ (ಪತ್ರಿಕೋದ್ಯಮ)
‘ಜಸ್ಟ್ ಬೀ’ ಮಂತ್ರ ನಾವು ಸಹಜವಾಗಿರಲು ಪ್ರೇರೇಪಿಸುತ್ತದೆ. ಧ್ಯಾನ ಹಾಗೂ ಯೋಗದಿಂದ ಸಮತೋಲನ ಕಂಡುಕೊಳ್ಳಬಹುದು. ಮಹಿಳೆ ತನ್ನನ್ನು ತಾನು ಪೂರ್ಣವಾಗಿ ಸ್ವೀಕರಿಸಿದಾಗ ಅವಳಲ್ಲಿ ಆತ್ಮವಿಶ್ವಾಸ ಹಾಗೂ ಸ್ವಾತಂತ್ರ್ಯ ಮೂಡುತ್ತದೆಅನ್ನಪೂರ್ಣ ದೇವಿ ಕೇಂದ್ರ ಸಚಿವೆ
ಮಹಿಳಾ ಕೇಂದ್ರಿತ ಅಭಿವೃದ್ಧಿಗೆ ಇತ್ತೀಚೆಗೆ ಒತ್ತು ಸಿಗುತ್ತಿದೆ. ಆಡಳಿತ ವ್ಯವಹಾರ ವಿಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಮುನ್ನಡೆ ಸಾಧಿಸುತ್ತಿದ್ದಾರೆ. ಮಾನವೀಯ ಮೌಲ್ಯಗಳೊಂದಿಗೆ ಮಹಿಳೆ ಹೀಗೆಯೇ ಮುಂದುವರಿಯಬೇಕುಶೋಭಾ ಕರಂದ್ಲಾಜೆ ಕೇಂದ್ರ ಸಚಿವೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.