ADVERTISEMENT

ಆಸ್ತಿ ನೋಂದಣಿಗೆ ಕಾಡುವ 'ಸರ್ವರ್' ಭೂತ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2021, 19:31 IST
Last Updated 10 ಮಾರ್ಚ್ 2021, 19:31 IST
ರಾಜಾಜಿನಗರದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಆಸ್ತಿ ನೋಂದಣಿಗೆ ಮುಗಿ ಬಿದ್ದಿರುವ ಜನ –ಪ್ರಜಾವಾಣಿ ಚಿತ್ರ
ರಾಜಾಜಿನಗರದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಆಸ್ತಿ ನೋಂದಣಿಗೆ ಮುಗಿ ಬಿದ್ದಿರುವ ಜನ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಉಪನೋಂದಣಾಧಿಕಾರಿ ಕಚೇರಿಗಳಲ್ಲಿ ಸರ್ವರ್‌ ಸಮಸ್ಯೆ ಎಂಬ ಭೂತ ಎಡಬಿಡದೇ ಕಂಟಕವಾಗಿ ಕಾಡುತ್ತಿದೆ. ಆಗಾಗ ಸ್ಥಗಿತಗೊಳ್ಳುವ ಸರ್ವರ್‌ನಿಂದ ಈ ಕಚೇರಿಗೆ ಹೋಗಲು ಜನ ಭಯಪಡುವಂತಾಗಿದೆ.

ಸರ್ವರ್ ಒಮ್ಮೆ ಸ್ಥಗಿತಗೊಂಡರೆ ಸರಿಪಡಿಸಲು ಎರಡು ಮೂರು ದಿನಗಳೇ ಬೇಕಾಗುತ್ತದೆ. ಎಲ್ಲವೂ ಸರಿಯಾಗಿದೆ ಎಂದು ಕಾರ್ಯನಿರ್ವಹಿಸುವ ವೇಳೆ ದಿಢೀರ್ ದೋಷ ಕಾಣಿಸಿಕೊಂಡು ಸಾಫ್ಟ್‌ವೇರ್ ಕಾರ್ಯನಿರ್ವಹಿಸದಂತೆ ಮಾಡುತ್ತದೆ. ರಿಪೇರಿಯಾದರೂ ಯಾವಾಗ ಕೈಕೊಡುವುದೋ ಎಂಬ ಭಯದಲ್ಲೇ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

ಫೆಬ್ರುವರಿ ಮೊದಲ ವಾರದಲ್ಲಿ ಕಾಣಿಸಿಕೊಂಡ ಸರ್ವರ್ ದೋಷದಿಂದ ಎರಡು ದಿನ ಕಾರ್ಯನಿರ್ವಹಣೆ ಸ್ಥಗಿತಗೊಂಡಿತ್ತು. ಈಗ ಕಳೆದ ಎರಡು ದಿನ (ಸೋಮವಾರ ಮತ್ತು ಮಂಗಳವಾರ) ಇದೇ ರೀತಿಯ ಸಮಸ್ಯೆ ಅಲ್ಲದಿದ್ದರೂ ಒಟಿಪಿ ಸಂಖ್ಯೆ ಇರುವ ಎಸ್‌ಎಂಎಸ್‌ ಬಾರದೆ ನೋಂದಣಿ ಕಾರ್ಯ ಸ್ಥಗಿತಗೊಂಡಿತ್ತು. ನೋಂದಣಿ ಪ್ರಕ್ರಿಯೆಯಲ್ಲಿ ಒಳಪಟ್ವವರ ದೂರವಾಣಿ ಸಂಖ್ಯೆ ಪಡೆದು ಒಟಿಪಿ ಕಳಿಸಲಾಗುತ್ತದೆ. ಆದರೆ, ಎರಡು ದಿನ ಯಾರ ದೂರವಾಣಿ ಸಂಖ್ಯೆಗೂ ಒಟಿಪಿ ಎಸ್‌ಎಂಎಸ್‌ ಬರಲೇ ಇಲ್ಲ.

ADVERTISEMENT

ಬೆಂಗಳೂರಿನ 43 ಸೇರಿ ರಾಜ್ಯದ ಒಟ್ಟು 282 ಉಪನೋಂದಣಾಧಿಕಾರಿ ಕಚೇರಿಗಳಲ್ಲಿ ಆಸ್ತಿ ನೋಂದಣಿ ಕೆಲಸ ಸ್ಥಗಿತಗೊಂಡು ಜನ ಪರದಾಡಿದರು. ಬುಧವಾರ ಸ್ವಲ್ಪ ಸುಧಾರಿಸಿದ್ದರೂ, ಇ.ಸಿ(ಋಣಭಾರ ಪ್ರಮಾಣಪತ್ರ) ಪಡೆಯಲು ಆಗಲಿಲ್ಲ. ಯಾವುದೇ ನೋಂದಣಿಗೂ ಇ.ಸಿ ಮುಖ್ಯವಾಗಿ ಬೇಕು. ಅದನ್ನೇ ಪಡೆಯಲಾಗದಿದ್ದರೆ ಉಳಿದ ಕೆಲಸವೆಲ್ಲವೂ ನಿಲ್ಲಲಿದೆ. ಈ ಹಿಂದೆಯೇ ಇ.ಸಿ ಪಡೆದಿದ್ದವರು ಮಾತ್ರ ನೋಂದಣಿ ಮಾಡಿಸಿಕೊಳ್ಳಲು ಸಾಧ್ಯವಾಯಿತು.

ಎರಡು ದಿನ ಕಾರ್ಯನಿರ್ವಹಣೆ ಸ್ಥಗಿತಗೊಂಡಿದ್ದ ಕಾರಣ ಬುಧವಾರ ಎಲ್ಲಾ ಉಪನೋಂದಣಾಧಿಕಾರಿ ಕಚೇರಿಗಳೂ ತುಂಬಿ ತುಳುಕಿದವು.

ವಿಜಯನಗರ ಕಚೇರಿಯಲ್ಲಿ ‘ಸರ್ವರ್ ತಾಂತ್ರಿಕ ತೊಂದರೆಯಿಂದಾಗಿ ಇ.ಸಿ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿಲ್ಲ’ ಎಂದು ಫಲಕವನ್ನೇ ಅಂಟಿಸಲಾಗಿದೆ.

‘ಸರ್ವರ್ ಸರಿಯಾಗಲಿದೆ ಎಂದು ಎರಡು ದಿನಗಳ ಕಾಲ ಕಚೇರಿ ಬಳಿಯೇ ನಿಂತು ವಾಪಸ್ ಹೋಗಿದ್ದೇವೆ. ಬುಧವಾರ ಸ್ವಲ್ಪ ಸುಧಾರಿಸಿದ್ದು, ಮತ್ತೆ ಯಾವಾಗ ಕಾರ್ಯ ನಿಲ್ಲಿಸಲಿದೆಯೋ ಗೊತ್ತಿಲ್’ ಎಂದು ರಾಜಾಜಿನಗರ ಕಚೇರಿಯಲ್ಲಿ ಆಸ್ತಿ ನೋಂದಣಿಗೆ ಬಂದಿದ್ದ ಕೃಷ್ಣಕುಮಾರ್ ಹೇಳಿದರು.

‘ಮೂರು ದಿನಗಳಿಂದ ಈ ಕಚೇರಿ ಮೆಟ್ಟಿಲು ಸವೆಸಿ ಸಾಕಾಗಿ ಹೋಗಿದೆ. ಆಸ್ತಿ ನೋಂದಣಿಗೆ ಹಾಜರಿರಲೇಬೇಕು ಎಂದು ಕರೆದುಕೊಂಡು ಬಂದಿದ್ದಾರೆ. ಕುಳಿತುಕೊಳ್ಳಲು ಆಗದ ಸ್ಥಿತಿಯಲ್ಲಿದ್ದೇನೆ’ ಎಂದು 87 ವರ್ಷದ ಪಾರ್ವತಮ್ಮ ಬೇಸರ ವ್ಯಕ್ತಪಡಿಸಿದರು.

‘ಆಸ್ತಿ ನೋಂದಣಿಗೆ ಸದ್ಯ ಬಳಕೆಯಾಗುತ್ತಿರುವ ಕಾವೇರಿ ತಂತ್ರಾಂಶದ ನಿರ್ವಹಣೆಯ ಹೊಣೆಯನ್ನು ಕಂಪನಿಯೊಂದಕ್ಕೆ ನೀಡಲಾಗಿದೆ. ನಿರ್ವಹಣೆ ಸಮರ್ಪಕವಾಗಿ ಇಲ್ಲದಿದ್ದರೂ ಬದಲಾವಣೆ ಮಾಡಲು ಸಾಧ್ಯವಾಗದ ಸ್ಥಿತಿಯಲ್ಲಿ ಸರ್ಕಾರ ಇದೆ. ಕೇಂದ್ರ ಸಚಿವರೊಬ್ಬರ ಆಪ್ತರು ತಾತ್ರಾಂಶ ನಿರ್ವಹಣೆ ಹೊಣೆ ಹೊತ್ತಿದ್ದಾರೆ. ಹೀಗಾಗಿಯೇ ಬದಲಾವಣೆ ಮಾಡಲು ಸರ್ಕಾರ ಮನಸ್ಸು ಮಾಡುತ್ತಿಲ್ಲ’ ಎನ್ನುವುದು ನೋಂದಣಿ ಇಲಾಖೆಯ ಮೂಲಗಳ ಅಹವಾಲು.

ಸರ್ವರ್ ಅಲ್ಲ, ಒಟಿಪಿ ಸಮಸ್ಯೆ
ಸೋಮವಾರ ವಾರ ಮಾತ್ರ ನೋಂದಣಿ ಸ್ಥಗಿತವಾಗಿತ್ತು. ಅದಕ್ಕೆ ಸರ್ವರ್ ಸಮಸ್ಯೆ ಕಾರಣವಲ್ಲ. ಒಟಿಪಿ ಸಂಖ್ಯೆ ಇರುವ ಎಸ್‌ಎಂಎಸ್ ಬಾರದಿರುವುದು ಕಾರಣ ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತ ಕೆ.ಪಿ.ಮೋಹನ್‌ರಾಜ್ ಸ್ಪಷ್ಟಪಡಿಸಿದರು.

ಈ ಬಗ್ಗೆ ಇ–ಗೌರ್ನೆನ್ಸ್ ಇಲಾಖೆಯನ್ನು ಸಂಪರ್ಕಿಸಿದರೆ ಎಲ್ಲಾ ಇಲಾಖೆಗಳಿಗೂ ಸಮಸ್ಯೆಯಾಗಿದೆ. ಬೇರೆ ರಾಜ್ಯಗಳಲ್ಲೂ ಈ ಸಮಸ್ಯೆ ಆಗಿದೆ ಎಂಬ ಉತ್ತರ ಬಂದಿದೆ ಎಂದು ಹೇಳಿದರು.

ಕಾವೇರಿ ತಂತ್ರಾಂಶ ಬೇರೆ ಬೇರೆ ತಂತ್ರಾಂಶಗಳ ಜತೆ ಜೋಡಣೆ ಆಗಿದೆ. ಬೇರೆ ತಂತ್ರಾಂಶದಲ್ಲಿ ದೋಷ ಕಾಣಿಸಿಕೊಂಡರೂ, ನಮ್ಮ ಕಾವೇರಿ ತಂತ್ರಾಂಶವೂ ಸ್ಥಗಿತಗೊಳ್ಳುತ್ತದೆ ಎಂದರು.

‘ಸಮಸ್ಯೆ ಬುಧವಾರ ಇತ್ಯರ್ಥವಾಗಿದ್ದು, ರಾಜ್ಯದಲ್ಲೇ ಹಿಂದೆಂದಿಗಿಂತ ಅತೀ ಹೆಚ್ಚು 11,900 ಆಸ್ತಿಗಳ ನೋಂದಣಿಯಾಗಿದೆ. ಬೇರೆ ದಿನಗಳಲ್ಲಿ 7 ಸಾವಿರದಿಂದ 9 ಸಾವಿರ ನೋಂದಣಿ ಆಗುತ್ತಿತ್ತು’ ಎಂದು ವಿವರಿಸಿದರು.

ತಾಂತ್ರಿಕ ದೋಷ: ಅಡಚಣೆಗೆ ಕ್ಷಮಿಸಿ
ಬೆಂಗಳೂರು ಗ್ರಾಮಾಂತರ: ತುಮಕೂರು ಜಿಲ್ಲೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ ತಾಲ್ಲೂಕಿನ ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ದಾಖಲೆಗಳನ್ನು ಅಪ್‌ಲೋಡ್ ಮಾಡುವ ಸಮಯದಲ್ಲಿ ಒಟಿಪಿ ಬರುತ್ತಿಲ್ಲ. ಮೂರು ದಿನಗಳಿಂದ ಒಟಿಪಿ ಬರುವುದು ಸ್ಥಗಿತಗೊಂಡಿದೆ.

ದೇವನಹಳ್ಳಿಯ ಉಪ ನೋಂದಣಿ ಕಚೇರಿಯ ನಾಮಫಲಕದ ಜಾಗದಲ್ಲೇ ‘ತಾಂತ್ರಿಕ ದೋಷ: ಅಡಚಣೆಗೆ ಕ್ಷಮಿಸಿ’ ಎಂದು ಬರೆದು ಅಂಟಿಸಲಾಗಿದೆ. ನೋಂದಣಿ ಪ್ರಕ್ರಿಯೆಯು ಕೇಸ್ವಾನ್(ಕರ್ನಾಟಕ ಸ್ಟೇಟ್ ವೈಡ್ ಏರಿಯಾ ನೆಟ್‌ವರ್ಕ್) ಮೇಲೆ ಅವಲಂಬಿತವಾಗಿದೆ. ಈ ಸಮಸ್ಯೆ ಸರಿಯಾಗಬೇಕೆಂದರೆ ಕೇಸ್ವಾನ್ ನೆಟ್‌ವರ್ಕ್ ಲಭ್ಯತೆ ಹಾಗೂ ಗುಣಮಟ್ಟ ಸುಧಾರಣೆಯಾಗಬೇಕಿದೆ.

ಕರಾವಳಿಯಲ್ಲಿ ಸಮಸ್ಯೆ: ಚಿಕ್ಕಮಗಳೂರಿನಲ್ಲಿ ತೊಂದರೆ ಇಲ್ಲ
ಮಂಗಳೂರು:
ಕರಾವಳಿಯ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಆಗಾಗ ಸರ್ವರ್‌ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಯಾವುದೇ ತೊಂದರೆ ಇಲ್ಲ.

ಉಡುಪಿಯಲ್ಲಿ ಸೋಮವಾರದಿಂದ ಮಂಗಳವಾರ ಮಧ್ಯಾಹ್ನದವರೆಗೆ ಸರ್ವರ್‌ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಆಸ್ತಿ ನೋಂದಣಿ ಸ್ಥಗಿತವಾಗಿತ್ತು. ಮಂಗಳವಾರ ಮಧ್ಯಾಹ್ನದಿಂದ ಸಮಸ್ಯೆ ಬಗೆಹರಿದಿದ್ದು, ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ. ಆಗಾಗ ಸಮಸ್ಯೆ ಎದುರಾಗುತ್ತಿದೆ ಎಂದು ಜಿಲ್ಲಾ ನೋಂದಣಾಧಿಕಾರಿ ರವೀಂದ್ರ ಪೂಜಾರ್ ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ವರ್‌ ಸಮಸ್ಯೆ ಹಾಗೂ ಒಟಿಪಿ ಸಮಸ್ಯೆ ಮುಂದುವರಿದಿದೆ. ಇದರಿಂದ ನೋಂದಣಿ ಪ್ರಕ್ರಿಯೆಗೆ ಹಿನ್ನಡೆಯಾಗುತ್ತಿದೆ ಎಂದು ನೋಂದಣಾಧಿಕಾರಿ ಕಚೇರಿ ಅಧಿಕಾರಿಗಳು ತಿಳಿಸಿದರು.

ಸದ್ಯಕ್ಕೆ ಸಮಸ್ಯೆ ಸರಿಯಾಗಿದೆ
ದಾವಣಗೆರೆ:
ಆಸ್ತಿ ನೋಂದಣಿಗೆ ಕಾವೇರಿ ಸಾಫ್ಟ್‌ವೇರ್‌ಗೆ ನೋಂದಣಿದಾರರ ಮೊಬೈಲ್‌ ನಂಬರ್‌ ನಮೂದಿಸಿದಾಗ ವನ್‌ ಟೈಮ್‌ ಪಾಸ್‌ವರ್ಡ್‌ (ಒಟಿಪಿ) ಬಾರದೇ ಸೋಮವಾರ ಮತ್ತು ಮಂಗಳವಾರ ಸಮಸ್ಯೆಯಾಗಿತ್ತು.

ಮಂಗಳವಾರ ಮಧ್ಯಾಹ್ನದ ಬಳಿಕ ಈ ಸಮಸ್ಯೆ ಬಗೆಹರಿದಿದೆ. ಹಾಗಾಗಿ ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಗಳ ಎಲ್ಲ ಉಪನೋಂದಣಾಧಿಕಾರಿ ಕಚೇರಿಗಳಲ್ಲಿ ಬುಧವಾರ ಭಾರಿ ಸಂಖ್ಯೆಯಲ್ಲಿ ನೋಂದಣಿದಾರರು ಬಂದು ಸರತಿಯಲ್ಲಿ ನಿಂತಿದ್ದರು. ಇದು ದೇಶದಾದ್ಯಂತ ಉಂಟಾಗಿರುವ ಸಮಸ್ಯೆ ಆಗಿತ್ತು. ಈಗ ಸರಿಯಾಗಿದೆ ಎಂದು ನೋಂದಣಾಧಿಕಾರಿಗಳು ತಿಳಿಸಿದ್ದಾರೆ.

ಸರ್ವರ್ ಸಮಸ್ಯೆ: ಆಸ್ತಿ ನೋಂದಣಿ ಪ್ರಮಾಣ ಇಳಿಕೆ
ಕಲಬುರ್ಗಿ:
ಜಿಲ್ಲೆಯ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಬಹುತೇಕ ನಿತ್ಯವೂ ಸರ್ವರ್ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು, ನೋಂದಣಿಗಾಗಿ ಬಂದವರು ಗಂಟೆಗಟ್ಟಲೇ ಕಾಯುವ ಸ್ಥಿತಿ ನಿರ್ಮಾಣವಾಗಿದೆ.

ಬುಧವಾರವೂ ಒಂದು ಗಂಟೆ ಸರ್ವರ್‌ ಸ್ಥಗಿತಗೊಂಡಿತ್ತು. ಮಾರ್ಚ್‌ 8–9ರಂದು ಇಡೀ ದಿನ ಸರ್ವರ್‌ ಸ್ಥಗಿತಗೊಂಡು ನೋಂದಣಿ ಕೆಲಸಗಳು ಸ್ಥಗಿತಗೊಂಡಿದ್ದವು. ನಿತ್ಯ ಸರಾಸರಿ 80 ಆಸ್ತಿಗಳನ್ನು ನೋಂದಣಿ ಮಾಡಲಾಗುತ್ತದೆ ಎನ್ನುತ್ತಾರೆ ಇಲಾಖೆ ಸಿಬ್ಬಂದಿ.

‘ಸರ್ವರ್‌ ಸಮಸ್ಯೆ ಬಗ್ಗೆ ಕೇಂದ್ರ ಕಚೇರಿಗೆ ಮಾಹಿತಿ ನೀಡಿದ್ದೇವೆ. ಸರಿಪಡಿಸುವ ಭರವಸೆ ನೀಡಿದ್ದಾರೆ’ ಎನ್ನುತ್ತಾರೆ ಕಲಬುರ್ಗಿ ಉಪನೋಂದಣಾಧಿಕಾರಿ ಬಿ.ಶ್ರೀಕಾಂತ.

ಸರ್ವರ್ ಸಮಸ್ಯೆಯಿದೆ ಎಂಬ ಫಲಕ
ಹುಬ್ಬಳ್ಳಿ
: ಧಾರವಾಡ ಜಿಲ್ಲೆಯ ಉಪನೋಂದಣಾಧಿಕಾರಿ ಕಚೇರಿಗಳಲ್ಲಿ ಸರ್ವರ್‌ ಸಮಸ್ಯೆ ಹೆಚ್ಚಾಗಿದೆ. ಬೆಳಗಾವಿ, ಹಾವೇರಿ, ವಿಜಯಪುರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿಯೂ ಇದೇ ಸಮಸ್ಯೆಯಿದೆ. ಆದರೆ, ಕೆಲ ತಿಂಗಳ ಹಿಂದೆ ಉತ್ತರ ಕನ್ನಡ ಹಾಗೂ ಗದಗ ಜಿಲ್ಲೆಗಳಲ್ಲಿ ಹೆಚ್ಚಾಗಿದ್ದ ಈ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗಿದೆ.

ಜನರು ನಿತ್ಯ ಸರ್ವರ್ ಬಗ್ಗೆ ವಿಚಾರಿಸುವುದರಿಂದ ಹುಬ್ಬಳ್ಳಿ ಉತ್ತರ ಉಪನೋಂದಣಾಧಿಕಾರಿ ಕಚೇರಿಯಲ್ಲಿ ‘ಸರ್ವರ್‌ ಸಮಸ್ಯೆಯಿದೆ’ ಎಂಬ ಫಲಕವನ್ನೇ ಅಂಟಿಸಲಾಗಿದೆ.

ತಪ್ಪದ ಸರ್ವರ್‌ ಸಮಸ್ಯೆ
ಮೈಸೂರು:
ಜಿಲ್ಲೆಯ ಉಪನೋಂದಣಾಧಿಕಾರಿ ಕಚೇರಿಗಳಲ್ಲೂ ಸರ್ವರ್ ಸಮಸ್ಯೆ ಕಾಡುತ್ತಿದೆ. ಮೂರು ದಿನದಿಂದ ಖರೀದಿದಾರರು, ಮಾರಾಟಗಾರರ ಮೊಬೈಲ್‌ಗೆ ಒಟಿಪಿ ಸಕಾಲಕ್ಕೆ ಬರುತ್ತಿಲ್ಲ. ಸೋಮವಾರ, ಮಂಗಳವಾರ ಮಧ್ಯಾಹ್ನ 3 ಗಂಟೆ ನಂತರ ಬಂದಿದೆ. ಬುಧವಾರವೂ ಸಮಸ್ಯೆ ಪರಿಹಾರವಾಗದಿದ್ದರಿಂದ ಜನರು ಪರದಾಡಿದ್ದು ಗೋಚರಿಸಿತು. ಗುರುವಾರ ರಜೆ ಇರುವುದರಿಂದ ಜನದಟ್ಟಣೆಯೂ ಹೆಚ್ಚಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.