ADVERTISEMENT

ಕನ್ನಡ ಚೆಕ್ ಅಮಾನ್ಯ: ಎಸ್‌ಬಿಐಗೆ ₹85 ಸಾವಿರ ದಂಡ

ಉತ್ತರ ಕನ್ನಡ ಜಿಲ್ಲೆ ಹಳಿಯಾಳದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2022, 18:33 IST
Last Updated 7 ಸೆಪ್ಟೆಂಬರ್ 2022, 18:33 IST
   

ಧಾರವಾಡ: ಚೆಕ್‌ನಲ್ಲಿದ್ದ ಕನ್ನಡ ಅಂಕಿಯನ್ನು ತಪ್ಪಾಗಿ ಅರ್ಥೈಸಿ ಕೊಂಡ ಉತ್ತರ ಕನ್ನಡ ಜಿಲ್ಲೆ ಹಳಿಯಾಳ ಶಾಖೆಯ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾಗೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ₹85,177 ದಂಡ ಪಾವತಿಸುವಂತೆ ಬ್ಯಾಂಕಿಗೆ ಬುಧವಾರ ಆದೇಶಿಸಿದೆ.

ಇಲ್ಲಿನ ಕಲ್ಯಾಣ ನಗರ ನಿವಾಸಿ ವಾದಿರಾಜಾಚಾರ್ಯ ಇನಾಂದಾರ ಅವರು ವಿದ್ಯುತ್ ಶುಲ್ಕ ಪಾವತಿಸಲು ಹೆಸ್ಕಾಂಗೆ ₹ 6 ಸಾವಿರ ಮೊತ್ತದ ಚೆಕ್‌ ನೀಡಿ ದ್ದರು. ಚೆಕ್‌ ಅನ್ನು 2020ರ ಸೆ. 3ರಂದು ನೀಡಲಾಗಿತ್ತು. ಹೆಸ್ಕಾಂನ ಖಾತೆ ಕೆನರಾ ಬ್ಯಾಂಕ್‌ ನಲ್ಲಿದ್ದುದರಿಂದ ಅಲ್ಲಿಂದ ಚೆಕ್‌ ನಗದೀಕರಣಕ್ಕೆ ಎಸ್‌ಬಿಐಗೆ ಕಳಿಸಲಾಗಿತ್ತು. ದಿನಾಂಕ ನಮೂದಿಸುವಾಗ ಸೆಪ್ಟೆಂಬರ್‌ ತಿಂಗಳನ್ನು ಕನ್ನಡದ ಅಂಕಿ 9 ಎಂಬುದಾಗಿ ಬರೆದಿದ್ದದ್ದನ್ನು ತಪ್ಪಾಗಿ 6 ಎಂದು ಬ್ಯಾಂಕ್ ಅಧಿಕಾರಿ ಅರ್ಥೈಸಿಕೊಂಡಿದ್ದರು.ಚೆಕ್ ಅವಧಿ ಮೀರಿದೆ ಎಂದು ಬ್ಯಾಂಕ್ ಅಧಿಕಾರಿ ₹177 ದಂಡ ವಿಧಿಸಿದ್ದರು. ಇದನ್ನು ವಾದಿರಾಜಾಚಾರ್ಯ ಅವರು ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಪ್ರಶ್ನಿಸಿದರು. ಅರ್ಜಿದಾರರ ಪರ ಬಸವಪ್ರಭು ಹೊಸಕೇರಿ ವಕಾಲತ್ತು ಹಾಕಿದ್ದರು.

ಪ್ರಕರಣದ ವಿಚಾರಣೆ ನಡೆಸಿದಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರಾದ ವಿ.ಅ.ಬೋಳಶೆಟ್ಟಿ, ಪಿ.ಸಿ.ಹಿರೇಮಠ ಅವರು, ‘ಇದು ಬ್ಯಾಂಕಿನವರ ನಿರ್ಲಕ್ಷ್ಯದಿಂದ ಆಗಿರುವ ಹಾನಿ. ಅರ್ಜಿದಾರರು ಕೇಳಿರುವಂತೆ ಎಸ್‌ಬಿಐ ಬ್ಯಾಂಕ್‌ ₹50,177 ನೀಡಬೇಕು. ₹ 25ಸಾವಿರ ದಂಡ, ಜತೆಗೆ ನ್ಯಾಯಾಲಯದ ವೆಚ್ಚ₹ 10ಸಾವಿರ ಭರಿಸಬೇಕು’ ಎಂದು ಆದೇಶಿಸಿದ್ದಾರೆ.

ADVERTISEMENT

ಈ ಕುರಿತು ಪ್ರತಿಕ್ರಿಯಿಸಿದ ವಾದಿರಾಜಾಚಾರ್ಯ, ‘ನಾನು ಕನ್ನಡದ ಅಭಿಮಾನಿ. ಬ್ಯಾಂಕಿನ ತ್ರಿಭಾಷಾ ಸೂತ್ರದಂತೆ ಕನ್ನಡದಲ್ಲಿ ಚೆಕ್‌ ನೀಡಿದ್ದೆ. ಆದರೆ ಅಂಕಿಯನ್ನು ತಪ್ಪಾಗಿ ಅರ್ಥೈಸಿ ನನಗೆ ದಂಡ ಹಾಕಿದ್ದರು. ನನ್ನ ದೂರನ್ನು ಪುರಸ್ಕರಿಸಿ, ಆಯೋಗವು ನ್ಯಾಯ ದೊರಕಿಸಿದೆ. ಜತೆಗೆ ಆದೇಶವನ್ನೂ ಕನ್ನಡದಲ್ಲೇ ನೀಡುವಂತೆ ತಿಳಿಸಿದೆ’ ಎಂದಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ, ‘ಕನ್ನಡ ಮಾಯವಾಗುತ್ತಿರುವ ಸಂದರ್ಭದಲ್ಲಿ ಆಮ್ಲಜನಕದಂತೆ ಈ ಆದೇಶ ಹೊರಬಿದ್ದಿದೆ. ಇದಕ್ಕಾಗಿ ವಾದಿರಾಜಾಚಾರ್ಯ ಅವರಿಗೆ ಅಭಿನಂದನೆಗಳು. ಈ ಆದೇಶದ ಅನ್ವಯ ಬ್ಯಾಂಕ್‌ಗಳಲ್ಲಿ ಕನ್ನಡವನ್ನು ಕಡ್ಡಾಯಗೊಳಿಸುವ ಒತ್ತಡವನ್ನು ಇನ್ನಷ್ಟು ಹೆಚ್ಚಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.