ADVERTISEMENT

Invest Karnataka: ₹10.27 ಲಕ್ಷ ಕೋಟಿ ಹೂಡಿಕೆ ಒಪ್ಪಂದ: 6 ಲಕ್ಷ ಉದ್ಯೋಗ ಖಾತ್ರಿ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2025, 19:46 IST
Last Updated 14 ಫೆಬ್ರುವರಿ 2025, 19:46 IST
<div class="paragraphs"><p>ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯುತ್ತಿರುವ 'ಇನ್ವೆಸ್ಟ್ ಕರ್ನಾಟಕ' ಜಾಗೃತಿ ಬಂಡವಾಳ ಹೂಡಿಕೆದಾರರ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಅಧ್ಯಕ್ಷ ಬಸವರಾಜ ಹೊರಟ್ಟಿ, ಗ್ರೀಸ್‌ನ ಮಾಜಿ ಪ್ರಧಾನಿ ಜಾರ್ಜ್ ಪಾಪಂಡ್ರೂ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಂಸದ ಶಶಿ ತರೂರ್, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಸಂಭ್ರಮಿಸಿದ ಕ್ಷಣ </p></div>

ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯುತ್ತಿರುವ 'ಇನ್ವೆಸ್ಟ್ ಕರ್ನಾಟಕ' ಜಾಗೃತಿ ಬಂಡವಾಳ ಹೂಡಿಕೆದಾರರ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಅಧ್ಯಕ್ಷ ಬಸವರಾಜ ಹೊರಟ್ಟಿ, ಗ್ರೀಸ್‌ನ ಮಾಜಿ ಪ್ರಧಾನಿ ಜಾರ್ಜ್ ಪಾಪಂಡ್ರೂ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಂಸದ ಶಶಿ ತರೂರ್, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಸಂಭ್ರಮಿಸಿದ ಕ್ಷಣ

   

ಪ್ರಜಾವಾಣಿ ಚಿತ್ರ: ಎಂ.ಎಸ್.ಮಂಜುನಾಥ್

ಬೆಂಗಳೂರು: ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ನಾಲ್ಕು ದಿನಗಳ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಶುಕ್ರವಾರ ತೆರೆ ಬಿದ್ದಿದ್ದು, ₹10.27 ಲಕ್ಷ ಕೋಟಿ ಬಂಡವಾಳ ಸೆಳೆಯುವಲ್ಲಿ ರಾಜ್ಯ ಯಶಸ್ವಿಯಾಗಿದೆ. 6 ಲಕ್ಷ ಉದ್ಯೋಗ ಸೃಜನೆಯ ಖಾತ್ರಿಯೂ ದಕ್ಕಿದೆ.

ADVERTISEMENT

ಭವಿಷ್ಯದ ಕರ್ನಾಟಕ ಮುನ್ನೋಟ ಇಟ್ಟುಕೊಂಡು ರೂಪಿಸಿದ್ದ ‘ಇನ್ವೆಸ್ಟ್ ಕರ್ನಾಟಕ–2025’ರ ಮೂಲಕ  ₹10 ಲಕ್ಷ ಕೋಟಿ ಹೂಡಿಕೆಯ ಒಪ್ಪಂದಗಳನ್ನು ಮಾಡಿಕೊಳ್ಳುವ ಗುರಿ ಇಟ್ಟುಕೊಳ್ಳಲಾಗಿತ್ತು. ದೇಶ–ವಿದೇಶದ ಕಂಪನಿಗಳಿಂದ ನಿರೀಕ್ಷೆಗೂ ಮೀರಿ ಹೂಡಿಕೆಯ ಒಪ್ಪಂದ, ಭರವಸೆ ದೊರೆತಿದೆ. ಬೆಂಗಳೂರು ಹೊರಗೆ ಕೈಗಾರಿಕಾ ಪ್ರಗತಿಗೆ ಒತ್ತು ನೀಡಬೇಕು ಎಂಬ ಸರ್ಕಾರದ ಆಶಯವೂ ಈಡೇರಿದೆ. ಸಂಭಾವ್ಯ ಹೂಡಿಕೆಯ ಮೊತ್ತದಲ್ಲಿ ಉತ್ತರ ಕರ್ನಾಟಕಕ್ಕೆ ಶೇ 45ರಷ್ಟು ಸೇರಿದಂತೆ ರಾಜಧಾನಿ ಹೊರಗಿನ ಪ್ರದೇಶಗಳಿಗೆ ಶೇ 75ರಷ್ಟು ಬಳಕೆಯಾಗಲಿದೆ.

19 ದೇಶಗಳು, ಐದು ಸಾವಿರಕ್ಕೂ ಹೆಚ್ಚು ಉದ್ಯಮ ಪ್ರತಿನಿಧಿಗಳು, ಕೈಗಾರಿಕಾ ಪರಿಣತರು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ನೀತಿ ನಿರೂಪಕರು ಭಾಗವಹಿಸಿದ್ದ ಸಮಾವೇಶದ ಯಶಸ್ಸು, ಹೂಡಿಕೆಯ ಒಪ್ಪಂದಗಳ ಕುರಿತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಬಂಡವಾಳ ಹರಿವಿನ ಕುರಿತು ಮಾತನಾಡಿದ ಎಂ.ಬಿ. ಪಾಟೀಲ ಅವರು, ‘₹6.23 ಲಕ್ಷ ಕೋಟಿ ಹೂಡಿಕೆಯ ಒಪ್ಪಂದಗಳಾಗಿವೆ. ₹4.03 ಲಕ್ಷ ಕೋಟಿ ಹೂಡಿಕೆ ಮಾಡುವುದಾಗಿ ಹೆಸರಾಂತ ಕಂಪನಿಗಳು ಘೋಷಣೆ ಮಾಡಿದ್ದು, ಒಂದೆರಡು ದಿನಗಳಲ್ಲಿ ಒಪ್ಪಂದಕ್ಕೆ ಸಹಿ ಬೀಳಲಿವೆ’ ಎಂದು ವಿವರ ನೀಡಿದರು.

ಕರ್ನಾಟಕದ ಕೈಗಾರಿಕಾ ಇತಿಹಾಸ, ಪರಿಸರ ಸ್ನೇಹಿ ವಾತಾವರಣ, ಸ್ಥಳೀಯ ಪ್ರತಿಭೆ, ಮೂಲಸೌಕರ್ಯ, ಸರ್ಕಾರದ ನೀತಿಗಳು ಹೂಡಿಕೆದಾರರಿಗೆ ಉತ್ತೇಜನ ನೀಡಿವೆ. ಹೊಸ ಕೈಗಾರಿಕಾ ನೀತಿ ಉದ್ಯಮ ಕ್ಷೇತ್ರದ ಹಿತರಕ್ಷಣೆಯ ಭರವಸೆ ಮೂಡಿಸಿದೆ. ಏಕಗವಾಕ್ಷಿ ಯೋಜನೆ ಅನುಷ್ಠಾನದಲ್ಲಿನ ವಿಳಂಬ ತೊಡೆದು ಹಾಕಲು ಸಹಕಾರಿಯಾಗಿದೆ. ಈ ಎಲ್ಲ ಅಂಶಗಳಿಂದಾಗಿ ಈ ಬಾರಿ ನಿರೀಕ್ಷೆಗೂ ಮೀರಿ ಸ್ಪಂದನೆ ದೊರೆತಿದೆ ಎಂದರು.

ಡಿ.ಕೆ. ಶಿವಕುಮಾರ್ ಮಾತನಾಡಿ, ಬೆಂಗಳೂರಿನ ಜನಸಂಖ್ಯೆ 1.40 ಕೋಟಿ ತಲುಪಿದೆ. 1.10 ಕೋಟಿ ವಾಹನಗಳಿವೆ. ಜನಸಂಖ್ಯೆ ಒತ್ತಡ ಕಡಿಮೆ ಮಾಡಲು ‘ಬಿಯಾಂಡ್‌ ಬೆಂಗಳೂರು’ ಯೋಜನೆ ರೂಪಿಸಲಾಗಿದೆ. ಬೇರೆ ರಾಜ್ಯಗಳಿಗಿಂತ ಕರ್ನಾಟಕದ ಭೂಮಿಯ ಬೇಡಿಕೆ ಹೆಚ್ಚಿದೆ. ಹಾಗಾಗಿ, ಬೆಂಗಳೂರಿನ ಹೊರಗೆ ಉದ್ಯಮ ಆರಂಭಿಸಲು ಬಹುತೇಕ ಉದ್ಯಮಿಗಳು, ತಂತ್ರಜ್ಞರು ಒಪ್ಪಿದ್ದಾರೆ ಎಂದು ಹೇಳಿದರು.

ನಂಜುಂಡಪ್ಪ ವರದಿ ಆಧಾರದ ಮೇಲೆ ಬಂಡವಾಳ ಹೂಡಿಕೆಗೆ ಪ್ರೋತ್ಸಾಹ ಧನ, ಕಾರ್ಯಕ್ಷಮತೆ ಆಧಾರದಲ್ಲಿ ಆರ್ಥಿಕ ನೆರವು ನೀಡಲು ಮುಂದಾಗಿದ್ದೇವೆ. ಮಹಿಳಾ ಉದ್ಯಮಿಗಳಿಗೆ, ಹಸಿರು ಇಂಧನಕ್ಕೆ ಶೇ 5ರಷ್ಟು ಪ್ರೋತ್ಸಾಹ ಧನ, ಸಂಶೋಧನೆ ಹಾಗೂ ಅಭಿವೃದ್ಧಿಗೆ ಶೇ 10ರಷ್ಟು ಪ್ರೋತ್ಸಾಹ ಧನ ನೀಡಲಾಗುತ್ತದೆ ಎಂದು ಹೇಳಿದರು.

ಆ್ಯಪಲ್ ಮೊಬೈಲ್ ತಯಾರಿಕಾ ಕಂಪನಿ ‘ಫಾಕ್ಸ್‌ಕಾನ್‌’ ದೊಡ್ಡಬಳ್ಳಾಪುರದ ಬಳಿ ಉತ್ಪಾದನೆ ಆರಂಭಿಸುತ್ತಿದ್ದು, 40 ಸಾವಿರ ಜನರಿಗೆ ಉದ್ಯೋಗ ನೀಡುವ ಭರವಸೆ ನೀಡಿದೆ
ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ

‘ವೆಂಚುರೈಸ್‌’ ಪ್ರಶಸ್ತಿ ಪುರಸ್ಕೃತರು

ಏರೋಸ್ಪೇಸ್‌ ಆ್ಯಂಡ್‌ ಡಿಫೆನ್ಸ್‌: ನಾಟಿಕಲ್‌ ವಿಂಗ್ಸ್‌ ಏರೊಸ್ಪೇಸ್‌ (ಪ್ರಥಮ), ಸಿರಿನೊರ್‌ ಟೆಕ್ನಾಲಜೀಸ್‌ ಇಂಡಿಯಾ ( ದ್ವಿತೀಯ), ನಭದ್ರಿಷ್ಟಿ ಏರೊಸ್ಪೇಸ್‌ (ತೃತೀಯ)  

ಎಲೆಕ್ಟ್ರಾನಿಕ್ಸ್‌ ಸಿಸ್ಟಮ್ಸ್‌ ಡಿಸೈನ್‌ ಆ್ಯಂಡ್‌ ಮ್ಯಾನುಫ್ಯಾಕ್ಚರಿಂಗ್‌: ಜೆಪ್ಕೊ ಟೆಕ್ನಾಲಜೀಸ್‌ (ಪ್ರಥಮ),  
ಮೆಡ್‌ಬ್ಲ್ಯೂ ಇನ್ನೋವೇಷನ್ಸ್‌ (ದ್ವಿತೀಯ), ವ್ಯೂಹಾ ಮೆಡ್‌ ಡೇಟಾ (ತೃತೀಯ)

ವಿದ್ಯುತ್‌ಚಾಲಿತ ವಾಹನ ಮತ್ತು ಕ್ಲೀಮ್‌ ಮೊಬಿಲಿಟಿ: ಇನ್ಫಿನಿಟಿಎಕ್ಸ್‌ ಇನ್ನೋವೇಷನ್ಸ್‌ (ಪ್ರಥಮ), ಲಿ- ಸರ್ಕಲ್‌ (ದ್ವಿತೀಯ), ಇ2ಎಸ್‌ವಿಡಿ (ತೃತೀಯ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.