ADVERTISEMENT

Invest Karnataka 2025 | ₹4 ಲಕ್ಷ ಕೋಟಿ ಹೂಡಿಕೆಗೆ ಒಲವು

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2025, 16:13 IST
Last Updated 12 ಫೆಬ್ರುವರಿ 2025, 16:13 IST
<div class="paragraphs"><p>ಸಮಾವೇಶದಲ್ಲಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್</p></div>

ಸಮಾವೇಶದಲ್ಲಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್

   

ಬೆಂಗಳೂರು: ಎರಡನೇ ದಿನವೂ ನಿರೀಕ್ಷೆ ಮೀರಿ ಬಂಡವಾಳ ಹೂಡಿಕೆಯ ಪ್ರಸ್ತಾವಗಳು ಹರಿದು ಬರುವ ಮುಖೇನ ಸಂಶೋಧನೆ, ತಯಾರಿಕೆಯಲ್ಲಿ ಕರ್ನಾಟಕವನ್ನು ಶಕ್ತಿ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ರಾಜ್ಯ ಸರ್ಕಾರದ ಸಂಕಲ್ಪಕ್ಕೆ ಜಾಗತಿಕ ಹೂಡಿಕೆದಾರರ ಸಮಾವೇಶ ವೇದಿಕೆ ಕಲ್ಪಿಸಿಕೊಟ್ಟಿತು.

ವಿದೇಶದ ಕಂಪನಿಗಳ ಜತೆಗೆ, ಭಾರತ ಹಾಗೂ ಕರ್ನಾಟಕದ ಹಲವು ಹೆಸರಾಂತ ಕಂಪನಿಗಳು ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ಸರ್ಕಾರದ ಜತೆ ಸುಮಾರು ₹4 ಲಕ್ಷ ಕೋಟಿ ಮೊತ್ತದ ಒ‍ಪ್ಪಂದ ಮಾಡಿಕೊಂಡವು. ಮೊದಲ ದಿನ ₹3 ಲಕ್ಷ ಕೋಟಿಗೂ ಹೆಚ್ಚು ಮೊತ್ತದ ಹೂಡಿಕೆಯ ಒಪ್ಪಂದಗಳು ಏರ್ಪಟ್ಟಿದ್ದವು.

ADVERTISEMENT

‘ವರ್ಲ್ಡ್ ಎಕನಾಮಿಕ್‌ ಫೋರಂ, ಸ್ವಿಸ್‌ ಇಂಡಿಯಾ ಚೇಂಬರ್‌ ಆಫ್‌ ಕಾಮರ್ಸ್, ಜಪಾನ್‌, ಸಿಂಗಪುರದ ಪ್ರಮುಖ ಕಂಪನಿಗಳು ಮೂಲಸೌಕರ್ಯ, ಮರುಬಳಕೆ ಇಂಧನ, ತಯಾರಿಕೆ, ‘ಕ್ವಿನ್‌ಸಿಟಿ’ ಪ್ರಗತಿಯಲ್ಲಿ ಕೈಜೋಡಿಸಲು ಸಮ್ಮತಿಸಿದವು. ಜಪಾನಿನ ಸಣ್ಣ ಮತ್ತು ಮಧ್ಯಮ‌ ಕೈಗಾರಿಕೆಗಳ ಸಂಘಟನೆ ಜತೆಗಿನ ಒಪ್ಪಂದ ಕರ್ನಾಟಕದ ಸಣ್ಣ ಕೈಗಾರಿಕೆಗಳ ಉತ್ತೇಜನದ ಆಶಯಕ್ಕೆ ನಾಂದಿ ಹಾಡಿತು.

ಬಹರೇನ್‌, ಕ್ಯೂಬಾ, ಇಟಲಿ, ನೇಪಾಳ, ಪೋಲೆಂಡ್‌, ಮಲೇಷ್ಯಾ, ಜಪಾನ್‌, ಕಾಂಗೋ, ಜಮೈಕಾ, ಫಿಜಿ, ಕಝಕಿಸ್ತಾನ, ಮೊರಾಕ್ಕೊ, ಜಿಂಬಾಬ್ವೆ, ತೈವಾನ್‌ ಸೇರಿದಂತೆ ಹಲವು ದೇಶಗಳ ರಾಯಭಾರಿಗಳು, ವಿವಿಧ ದೇಶಗಳ ಪ್ರತಿನಿಧಿಗಳು ಕರ್ನಾಟಕದ ಹೂಡಿಕೆಯ ಸೆಳೆತಕ್ಕೆ ಮಾರುಹೋದರು. ಸ್ಥಳೀಯ ಹೂಡಿಕೆದಾರರು, ದೇಸಿ ಉತ್ಪನ್ನಗಳ ತಯಾರಕರು, ತಂತ್ರಜ್ಞರು, ಇತರೆ ಪ್ರತಿನಿಧಿಗಳು ಸಮಾವೇಶಕ್ಕೆ ರಂಗು ತಂದರು.

‘ಕ್ವಿನ್‌ಸಿಟಿ’ ಯೋಜನೆಗೆ ಅತ್ಯುತ್ತಮ ಆರೋಗ್ಯ ಮತ್ತು ವೈದ್ಯಕೀಯ ಸಂಸ್ಥೆಗಳನ್ನು ಆಕರ್ಷಿಸಲು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ನೇತೃತ್ವದಲ್ಲಿ ನಡೆದ ಪ್ರಮುಖ ದುಂಡು ಮೇಜಿನ ಸಭೆ, ರಾಜ್ಯದ ಆರೋಗ್ಯ ಕ್ಷೇತ್ರವನ್ನು ತಂತ್ರಜ್ಞಾನದ ಜತೆ ಬೆಸೆದು, ವಿಶ್ವ ದರ್ಜೆಯ ಆರೋಗ್ಯ ಸೌಲಭ್ಯಗಳನ್ನು ರಾಜ್ಯದ ಜನರಿಗೆ ದೊರಕಿಸುವ ಭರವಸೆ ಮೂಡಿಸಿದವು. 

3 ಸಾವಿರ ಮೆಗಾವಾಟ್‌ ಪವನ ವಿದ್ಯುತ್‌:

ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಆಕರ್ಷಿಸುವಲ್ಲಿ ವಿಜಯಪುರ ಜಿಲ್ಲೆಯು ಯಶಸ್ವಿಯಾಯಿತು. ಅತ್ಯಾಧುನಿಕ ವಿಂಡ್‌ ಟರ್ಬೈನ್‌ ಬ್ಲೇಡ್‌ ತಯಾರಿಕಾ ಘಟಕ ಸ್ಥಾಪಿಸಲು ಸುಜ್ಲಾನ್‌ ಕಂಪನಿ ರಾಜ್ಯ ಸರ್ಕಾರದ ಜತೆ ಒಪ್ಪಂದ ಮಾಡಿಕೊಂಡಿತು. ನವೀಕರಿಸಬಹುದಾದ ಇಂಧನ ಹಾಗೂ ಕೃಷಿ ಉತ್ಪನ್ನಗಳ ಸಂಸ್ಕರಣೆ ವಲಯದಲ್ಲಿನ ಎರಡು ಪ್ರಮುಖ ಯೋಜನೆಗಳು ವಿಜಯಪುರ ಜಿಲ್ಲೆಯಲ್ಲಿ ಕಾರ್ಯಗತಗೊಳ್ಳುವ ಮೂಲಕ ಆ ಭಾಗದ ಜಿಲ್ಲೆಗಳ ವಿದ್ಯುತ್‌ ಕೊರತೆಗೆ ಶಾಶ್ವತ ಪರಿಹಾರ ಕಲ್ಪಿಸುವ ದಾರಿಯನ್ನು ತೆರೆದವು.

ವಿಜಯಪುರ, ಕಲಬುರಗಿಯಲ್ಲಿ ಪ್ರತಿದಿನ 800 ಟನ್‌ ಸಾಮರ್ಥ್ಯದ ಬಹುಬಗೆಯ ಬೇಳೆಕಾಳು ಸಂಸ್ಕರಣಾ ಘಟಕ ಸ್ಥಾಪಿಸಲು ವಿಂಗ್ಸ್‌- ವಿಟೆರಾ ಕಂಪನಿಯು ₹250 ಕೋಟಿ ಬಂಡವಾಳ ತೊಡಗಿಸಲಿದೆ. 2ನೇ ವರ್ಷದಿಂದ ₹800 ಕೋಟಿ ವಾರ್ಷಿಕ ವಹಿವಾಟು ನಡೆಸಲಿದೆ. ದಕ್ಷಿಣ ಭಾರತದಲ್ಲಿನ ಬೇಳೆಕಾಳುಗಳ ಅತಿದೊಡ್ಡ ಸಂಸ್ಕರಣಾ ಘಟಕ ಇದಾಗಲಿದ್ದು, ಕಲ್ಯಾಣ ಕರ್ನಾಟಕದ ರೈತರ ಭವಿಷ್ಯ ಉಜ್ವಲಗೊಳ್ಳಲಿದೆ ಎಂದು ಸಚಿವ ಎಂ.ಬಿ. ಪಾಟೀಲ ಹೇಳಿದ್ದಾರೆ.

ಭಾರತದ ಪ್ರಗತಿಯಲ್ಲಿ ಕರ್ನಾಟಕ ಕೊಡುಗೆ ದೊಡ್ಡದು: ‍ಪೀಯೂಷ್

‘ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ರೂಪಿಸುವಲ್ಲಿ ಕರ್ನಾಟಕವು ಮಹತ್ವದ ಪಾತ್ರ ವಹಿಸಲಿದೆ. ಇದಕ್ಕಾಗಿ ರಾಜ್ಯಕ್ಕೆ ಅಗತ್ಯವಿರುವ ಎಲ್ಲ ರೀತಿಯ ಸಹಕಾರವನ್ನು ಕೇಂದ್ರ ಸರ್ಕಾರ ಒದಗಿಸಲಿದೆ’ ಎಂದು ಕೇಂದ್ರ ವಾಣಿಜ್ಯ ಸಚಿವ ಪೀಯೂಷ್‌ ಗೋಯಲ್‌ ಅವರು ಹೇಳಿದರು.

ಕರ್ನಾಟಕದ ಆರ್ಥಿಕತೆ ಮತ್ತು ಕೈಗಾರಿಕಾ ರಂಗದ ಬೆಳವಣಿಗೆಗೆ ಮಹತ್ತರ ಕೊಡುಗೆ ನೀಡುತ್ತಿರುವ 15 ಉದ್ಯಮಗಳಿಗೆ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಬುಧವಾರದ ಕಾರ್ಯಕ್ರಮದಲ್ಲಿ, ‘ಇನ್ವೆಸ್ಟ್ ಕರ್ನಾಟಕ’ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

‘2047ರ ವೇಳೆಗೆ ಭಾರತದ ಆರ್ಥಿಕತೆಯನ್ನು ₹2,600 ಲಕ್ಷ ಕೋಟಿಗೆ ಹೆಚ್ಚಿಸಬೇಕಿದೆ. ಇದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವ ಹಾಗೂ ಸಹಕಾರ ಅತ್ಯಗತ್ಯ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ರಾಜ್ಯಕ್ಕೆ ಸಂಪೂರ್ಣ ಸಹಕಾರ ನೀಡಲಿದೆ. ರಾಜ್ಯದಲ್ಲಿ  ಡೀಪ್-ಟೆಕ್, ಫಿನ್-ಟೆಕ್, ಫ್ಯೂಚರ್ ಇಂಡಸ್ಟ್ರಿಗಳಿಗೆ ಸಮೃದ್ಧ ಅವಕಾಶಗಳಿದ್ದು, ಕರ್ನಾಟಕವು ದೇಶವನ್ನು ಮುನ್ನಡೆಸಲಿದೆ’ ಎಂದು
ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.