ADVERTISEMENT

ದೂರು ಸಲ್ಲಿಸಲು ಹೂಡಿಕೆದಾರರ ಸಿದ್ಧತೆ

ಬೆಂಗಳೂರಿನ ‘ಐಎಂಎ’ ಮಾದರಿ ವಂಚನೆ ಪ್ರಕರಣ; ತುಮಕೂರಿನ ಈಜಿಮೈಂಡ್ ಮಾರ್ಕೆಟಿಂಗ್ ಇಂಡಿಯಾ ಕಂಪನಿ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 15 ಜೂನ್ 2019, 16:13 IST
Last Updated 15 ಜೂನ್ 2019, 16:13 IST
ಈಜಿಮೈಂಡ್ ಮಾರ್ಕೆಟಿಂಗ್ ಇಂಡಿಯಾ ಪ್ರೈ.ಲಿ ಕಂಪನಿ ಕಚೇರಿಗೆ ಶನಿವಾರ ಬೀಗ ಹಾಕಲಾಗಿತ್ತು
ಈಜಿಮೈಂಡ್ ಮಾರ್ಕೆಟಿಂಗ್ ಇಂಡಿಯಾ ಪ್ರೈ.ಲಿ ಕಂಪನಿ ಕಚೇರಿಗೆ ಶನಿವಾರ ಬೀಗ ಹಾಕಲಾಗಿತ್ತು   

ತುಮಕೂರು: ಬೆಂಗಳೂರಿನ ಐಎಂಎ (ಐ ಮಾನಿಟರಿ ಅಡ್ವೈಸರಿ) ಕಂಪನಿ ಮಾದರಿಯಲ್ಲಿ ಜನರಿಂದ ₹ 500 ಕೋಟಿಗೂ ಅಧಿಕ ಹಣ ಹೂಡಿಕೆ ಮಾಡಿಸಿಕೊಂಡು ವಂಚಿಸಿದೆ ಎಂಬ ಆರೋಪಕ್ಕೆ ಗುರಿಯಾಗಿರುವನಗರದ ಈಜಿಮೈಂಡ್ ಮಾರ್ಕೆಟಿಂಗ್ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಹೆಸರಿನ ಕಂಪನಿ ವಿರುದ್ಧಪೊಲೀಸರಿಗೆ ದೂರು ನೀಡಲು ಕೆಲ ಹೂಡಿಕೆದಾರರು ಮುಂದಾಗಿದ್ದಾರೆ.

‘ಶುಕ್ರವಾರ ರಾತ್ರಿ ಪೊಲೀಸರು ಹೂಡಿಕೆದಾರರಿಂದ ಮಾಹಿತಿ ಪಡೆದಿದ್ದರು. ದೂರು ನೀಡಿದರೆ ಮುಂದಿನ ಕ್ರಮ ಜರುಗಿಸುವುದಾಗಿ ಹೇಳಿದ್ದರು. ಹೀಗಾಗಿ, ದೂರು ನೀಡಲು ದಾಖಲೆ ಸಿದ್ಧಪಡಿಸಿಕೊಳ್ಳಲಾಗಿದೆ. ಅಂದಾಜು 50 ಹೂಡಿಕೆದಾರರು ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ’ ಎಂದು ಮುಸ್ಲಿಂ ಸಮುದಾಯದ ಮುಖಂಡ ನಿಸಾರ್ ಅಹಮ್ಮದ್ ‘ಪ್ರಜಾವಾಣಿ’ಗೆ ತಿಳಿಸಿದರು.

ಡಿವೈಎಸ್ಪಿ ಹೇಳಿಕೆ: ‘ಶುಕ್ರವಾರ ಹೂಡಿಕೆದಾರರೊಂದಿಗೆ ಪ್ರಕರಣ ಕುರಿತು ಚರ್ಚಿಸಲಾಗಿತ್ತು. ಶನಿವಾರ ದೂರು ನೀಡುವುದಾಗಿ ಹೇಳಿದ್ದರು. ಆದರೆ, ಸಂಜೆಯವರೆಗೂ ದೂರು ದಾಖಲಾಗಿಲ್ಲ’ ಎಂದು ತುಮಕೂರು ನಗರ ಡಿವೈಎಸ್ಪಿ ತಿಪ್ಪೇಸ್ವಾಮಿ ಹೇಳಿದರು.

ADVERTISEMENT

ತೆರೆಯದ ಕಚೇರಿ: ಶುಕ್ರವಾರ ಸಂಜೆ ಕಂಪನಿ ಮುಂದೆ ಜಮಾಯಿಸಿದ್ದ ಹೂಡಿಕೆದಾರರು ಅಳಲು ತೋಡಿಕೊಂಡಿದ್ದರು. ಶನಿವಾರ ಈ ಕಂಪನಿ ಕಚೇರಿ ಬಳಿ ಯಾವೊಬ್ಬ ಹೂಡಿಕೆದಾರರು ಬಂದಿರಲಿಲ್ಲ. ಕಚೇರಿಗೆ ಬೀಗ ಹಾಕಲಾಗಿತ್ತು. ಪೊಲೀಸರೂ ಕಚೇರಿ ಬಳಿ ತೆರಳಿ ಮತ್ತೆ ಯಾರಾದರೂ ಹೂಡಿಕೆದಾರರು ಬಂದಿದ್ದಾರಾ ಎಂಬುದನ್ನು ಪರಿಶೀಲಿಸಿದರು.

ಮತ್ತೊಂದೆಡೆ ಹೂಡಿಕೆದಾರರು ಪೊಲೀಸರಿಗೆ ದೂರು ಸಲ್ಲಿಸದಂತೆ ಕಂಪನಿಯ ಪರವಾಗಿರುವವರ ಒಂದು ಗುಂಪು ಮನವೊಲಿಸುವ ಯತ್ನ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.