ADVERTISEMENT

ಮಾಂಸ-ಫ್ರೆಂಚ್ ಫ್ರೈಸ್ ತಿನ್ನಲು ನಿರ್ಬಂಧ ಆರೋಪ: ಪತಿಯ ವಿರುದ್ಧದ ಪ್ರಕರಣ ರದ್ದು

​ಪ್ರಜಾವಾಣಿ ವಾರ್ತೆ
Published 10 ಜನವರಿ 2026, 14:48 IST
Last Updated 10 ಜನವರಿ 2026, 14:48 IST
<div class="paragraphs"><p>ಹೈಕೋರ್ಟ್ ಹಾಗೂ ನ್ಯಾ. ನಾಗಪ್ರಸನ್ನ</p></div>

ಹೈಕೋರ್ಟ್ ಹಾಗೂ ನ್ಯಾ. ನಾಗಪ್ರಸನ್ನ

   

ಬೆಂಗಳೂರು:"ಮಗುವಿಗೆ ಜನ್ಮ ನೀಡಿದ ನಂತರ ನನ್ನ ಪತಿ ನನಗೆ ಅನ್ನ, ಮಾಂಸ ಮತ್ತು ಫ್ರೆಂಚ್ ಫ್ರೈಸ್‌ ತಿನ್ನಲು ನಿರ್ಬಂಧ ವಿಧಿಸಿದ್ದಾರೆ" ಎಂಬ ಕಾರಣಕ್ಕೆ ಪತಿ ಮತ್ತು ಪತಿಯ ಕುಟುಂಬದ ಸದಸ್ಯರ ವಿರುದ್ಧ ಮಹಿಳೆಯೊಬ್ಬರು ದಾಖಲಿಸಿದ್ದ ಕೌಟುಂಬಿಕ ಕ್ರೌರ್ಯ ಆರೋಪದ ಪ್ರಕರಣವನ್ನು ಹೈಕೋರ್ಟ್‌ ರದ್ದುಪಡಿಸಿದೆ.

"ಭಾರತೀಯ ದಂಡ ಸಂಹಿತೆ-1860ರ (ಐಪಿಸಿ) ಕಲಂ 498-ಎ ಅಡಿಯಲ್ಲಿ ಕ್ರೌರ್ಯದ (ಪತಿ ಮತ್ತು ಸಂಬಂಧಿಕರಿಂದ ಮಹಿಳೆಗೆ ಹಿಂಸೆ) ಅಪರಾಧಕ್ಕೆ ಸಂಬಂಧಿಸಿದಂತೆ ನಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಪಡಿಸಬೇಕು" ಎಂದು ಕೋರಿ ನಗರದ ಅಬುಝರ್‌ ಅಹಮದ್‌ (36), ಅವರ ತಾಯಿ, ತಂದೆ ಹಾಗೂ ಸಹೋದರ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.

ADVERTISEMENT

"ಇಂತಹ ದೂರುಗಳು ಬಂದಾಗ ಪೊಲೀಸರು ಸುಪ್ರೀಂ ಕೋರ್ಟ್‌ ಮಾರ್ಗಸೂಚಿಗಳ ಅನ್ವಯ ಪ್ರಾಥಮಿಕ ತನಿಖೆ ನಡೆಸದೆ ಹೇಗೆ ಎಫ್‌ಐಆರ್‌ ದಾಖಲಿಸುತ್ತಾರೆ" ಎಂದು ಪ್ರಶ್ನಿಸಿರುವ ನ್ಯಾಯಪೀಠ "ಈ ಪ್ರಕರಣದಲ್ಲಿ ಅಬುಝರ್‌ ಅಮೆರಿಕಕ್ಕೆ ಹಿಂತಿರುಗಿ ತಮ್ಮ ಉದ್ಯೋಗಕ್ಕೆ ಮರಳುವುದನ್ನು ತಡೆಯಲು ಪೊಲೀಸರು ಲುಕ್-ಔಟ್ ಸುತ್ತೋಲೆ ಹೊರಡಿಸುವ ಹಂತಕ್ಕೆ ಹೋಗಿರುವುದು ಆಶ್ಚರ್ಯಕರ" ಎಂದು ತೀವ್ರ ಕಳವಳ ವ್ಯಕ್ತಪಡಿಸಿದೆ.

"ಪತ್ನಿ ತಮಗಿರುವ ಆಹಾರದ ನಿರ್ಬಂಧಗಳು, ಉಡುಪಿನ ಬಗೆಗಿನ ನಿರೀಕ್ಷೆಗಳು, ಮನೆಯ ಜವಾಬ್ದಾರಿಗಳ ಹಂಚಿಕೆ, ದೂರದರ್ಶನ ವೀಕ್ಷಣೆಯ ಆದ್ಯತೆಗಳ ಬಗೆಗಿನ ಭಿನ್ನಾಭಿಪ್ರಾಯಗಳನ್ನು ದೂರಿನಲ್ಲಿ ವಿವರಿಸಿದ್ದಾರೆ. ಹಾಗೆಯೇ, ಪತಿ ನನ್ನನ್ನು ಸೇವಕಿಯಂತೆ ನಡೆಸಿಕೊಂಡಿರುವುದಾಗಿ ದೂರಿದ್ದಾರೆ. ಈ ಆರೋಪಗಳು ವೈವಾಹಿಕ ಕಲಹವನ್ನು ಬಿಂಬಿಸುತ್ತವೆಯೇ ವಿನಃ ಕ್ರೌರ್ಯದ ಅಪರಾಧವನ್ನು ಚಿತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿವೆ" ಎಂದು ನ್ಯಾಯಪೀಠ ತೀರ್ಪಿನಲ್ಲಿ ವಿವರಿಸಿದೆ.

"ಅರ್ಜಿದಾರ ಪತಿ ಮತ್ತು ದೂರುದಾರ ಪತ್ನಿ ಭಾರತದಲ್ಲಿ ವಾಸಿಸುತ್ತಿದ್ದರೂ, ಅವರು ತಮ್ಮ ದಾಂಪತ್ಯ ಜೀವನವನ್ನು ಹೆಚ್ಚಾಗಿ ವಿದೇಶದಲ್ಲಿಯೇ ಕಳೆದಿದ್ದಾರೆ. ದೂರುದಾರೆ ತಮ್ಮ ಅತ್ತೆ-ಮಾವ ಮತ್ತು ಭಾವ ಅವರನ್ನು ವಿವೇಚನಾ ರಹಿತವಾಗಿ ಈ ಪ್ರಕರಣದಲ್ಲಿ ಎಳೆದು ತಂದಿದ್ದಾರೆ. ಇದು ತೀವ್ರ ಕಳವಳಕಾರಿ ಸಂಗತಿ. ಆದ್ದರಿಂದ, ಈ ಪ್ರಕರಣದ ತನಿಖೆ ಮತ್ತು ನ್ಯಾಯಿಕ ವಿಚಾರಣೆ ಮುಂದುವರಿಯಲು ಅವಕಾಶ ನೀಡಿದರೆ ಅದು ಕಾನೂನಿನ ದುರುಪಯೋಗ ಎನಿಸುತ್ತದೆ. ತನಿಖೆಯು ಅರ್ಜಿದಾರರಿಗೆ ಕಿರುಕುಳ ಹೆಚ್ಚಿಸುವುದರ ಜೊತೆಗೆ ಕಳಂಕವನ್ನೂ ತರುತ್ತದೆ. ಅಂತೆಯೇ, ಕೋರ್ಟ್‌ಗಳ ಅಮೂಲ್ಯ ಸಮಯವನ್ನು ಹಾಳು ಮಾಡುತ್ತದೆ. ಆದ್ದರಿಂದ, ಅರ್ಜಿದಾರರ ವಿರುದ್ಧದ ಎಫ್‌ಐಆರ್‌ ಮತ್ತು ಅಧೀನ ನ್ಯಾಯಾಲಯದ ವಿಚಾರಣೆಯನ್ನು ರದ್ದುಪಡಿಸಲಾಗುತ್ತಿದೆ" ಎಂದು ತೀರ್ಪಿನಲ್ಲಿ ವಿವರಿಸಲಾಗಿದೆ.

ಪ್ರಕರಣವೇನು?

ದೂರುದಾರೆ (29) ಮತ್ತು ಅಬಝರ್‌ 2017ರಲ್ಲಿ ಮದುವೆಯಾಗಿದ್ದರು. ನಂತರ ಅಮೆರಿಕಕ್ಕೆ ತೆರಳಿ ಅಲ್ಲಿಯೇ ನೆಲೆಸಿದ್ದರು. ವಿದೇಶದಲ್ಲಿ ಆರು ವರ್ಷಗಳ ಕಾಲ ಚೆನ್ನಾಗಿದ್ದ ವೈವಾಹಿಕ ಜೀವನ ಮಗುವಿನ ಜನನದ ನಂತರದಲ್ಲಿ ಹದಗೆಟ್ಟಿತ್ತು. 2023ರ ಜನವರಿಯಲ್ಲಿ ಭಾರತಕ್ಕೆ ಬಂದಿದ್ದ ದೂರುದಾರೆ, 2024ರಲ್ಲಿ ಬಸವನಗುಡಿ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪತಿ, ಅತ್ತೆ-ಮಾವ ಮತ್ತು ಭಾವ ವಿರುದ್ಧ ದೂರು ದಾಖಲಿಸಿದ್ದರು.

"ಫ್ರೆಂಚ್‌ ಫ್ರೈಸ್‌, ಅನ್ನ ಮತ್ತು ಮಾಂಸವನ್ನು ತಿಂದರೆ ತೂಕ ಹೆಚ್ಚಿಸಿಕೊಳ್ಳುತ್ತೀಯ ಎಂದು ಪತಿ ನನಗೆ ನಿರ್ಬಂಧ ಹೇರುತ್ತಿದ್ದರು. ಬಾಣಂತಿಯಾಗಿದ್ದ ಸಮಯದಲ್ಲಿ ನನಗೆ ಬಟ್ಟೆ ಖರೀದಿಸುವುದನ್ನೇ ಕೈಬಿಟ್ಟರು. ಮನೆಯ ಎಲ್ಲಾ ಕೆಲಸಗಳನ್ನೂ ನಿರ್ವಹಿಸುವಂತೆ ಒತ್ತಾಯಿಸುವ ಮೂಲಕ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದಾರೆ" ಎಂದು ಆರೋಪಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.