ADVERTISEMENT

ಅದಿರು ಅಕ್ರಮ ರಫ್ತಿಗೆ ₹89 ಲಕ್ಷ ದಂಡ: ನಾಲ್ವರಿಗೆ ಮೂರು ವರ್ಷ ಜೈಲು

ರಾಯಧನ ವಂಚಿಸಿ ಸಾಗಿಸಿದ್ದ ನಾಲ್ವರಿಗೆ ಮೂರು ವರ್ಷ ಜೈಲು

​ಪ್ರಜಾವಾಣಿ ವಾರ್ತೆ
Published 7 ಮೇ 2025, 15:42 IST
Last Updated 7 ಮೇ 2025, 15:42 IST
<div class="paragraphs"><p>ಅದಿರು ಅಕ್ರಮ ಸಾಗಣೆ:</p></div>

ಅದಿರು ಅಕ್ರಮ ಸಾಗಣೆ:

   

ಬೆಂಗಳೂರು: ಹೊಸಪೇಟೆಯಿಂದ ಕಬ್ಬಿಣದ ಅದಿರನ್ನು ಕಾನೂನುಬಾಹಿರವಾಗಿ ಸಾಗಿಸಿ, ಬೇಲೇಕೇರಿ ಬಂದರಿನ ಮೂಲಕ ಅಕ್ರಮವಾಗಿ ರಫ್ತು ಮಾಡಿದ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳಿಗೆ ಇಲ್ಲಿನ ಲೋಕಾಯುಕ್ತ ವಿಶೇಷ ನ್ಯಾಯಾಲಯವು, ಮೂರು ವರ್ಷ ಜೈಲು ಮತ್ತು ಒಟ್ಟು ₹89.05 ಲಕ್ಷ ದಂಡ ವಿಧಿಸಿದೆ.

ಬೇಲೇಕೇರಿ ಬಂದರಿನಲ್ಲಿ ಕಬ್ಬಿಣದ ಅದಿರು ಕಳ್ಳತನ ಪ್ರಕರಣದ ತನಿಖೆಯ ವೇಳೆ ರಾಜ್‌ದೇವ್‌ ಟ್ರಾನ್ಸ್‌ಪೋರ್ಟ್‌ ಎಂಬ ಕಂಪನಿಯು ಹೊಸಪೇಟೆಯಿಂದ ಸಾಗಿಸಿದ ಅದಿರು ಮತ್ತು ರಫ್ತು ಮಾಡಿದ ಪ್ರಮಾಣಕ್ಕೂ ತಾಳೆ ಇಲ್ಲದಿರುವ ಅಂಶ ಪತ್ತೆಯಾಗಿತ್ತು. 

ADVERTISEMENT

ಈ ಸಂಬಂಧ ಲೋಕಾಯುಕ್ತ ವಿಶೇಷ ತನಿಖಾ ತಂಡವು ರಾಜ್‌ದೇವ್‌ ಟ್ರಾನ್ಸ್‌ಪೋರ್ಟ್‌ನ ಮಾಲೀಕ ಡಿ.ಸುಖದೇವ್‌ ಸಿಂಗ್, ಮೈನ್‌ಕೋರ್‌ ರಿಸೋರ್ಸ್‌ ಲಿಮಿಟೆಡ್‌ನ ಸಾಥಕ್‌ ಅಬ್ದುಲ್‌ ಖಾದರ್, ಅಬ್ದುಲ್ ರಾಝಿಕ್‌ ಮತ್ತು ಎಸ್‌.ಸೈಯದ್ ಇಬೂನು ಮೌಲಾನಾ ವಿರುದ್ಧ ಗಣಿ ಮತ್ತು ಖನಿಜ ಅಭಿವೃದ್ಧಿ ಮತ್ತು ನಿಯಂತ್ರಣ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿತ್ತು. ರಾಜ್‌ದೇವ್‌ ಟ್ರಾನ್ಸ್‌ಪೋರ್ಟ್‌ ಮತ್ತು ನಾಲ್ವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಕಳ್ಳತನ, ವಂಚನೆ, ಕಳ್ಳಸಾಗಣೆ ಆರೋಪ ಹೊರಿಸಿತ್ತು.

2009ರಿಂದ 2010ರ ನಡುವೆ ಈ ನಾಲ್ವರು, ರಾಜ್‌ದೇವ್‌ ಟ್ರಾನ್ಸ್‌ಪೋರ್ಟ್‌ ಕಂಪನಿಯ ಮೂಲಕ ಸುಮಾರು 1 ಲಕ್ಷ ಟನ್‌ಗಳಷ್ಟು ಅದಿರನ್ನು ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಹುಲುಕುಂಟೆ ಸ್ಟಾಕ್‌ಯಾರ್ಡ್‌ನಿಂದ ಬೇಲೇಕೇರಿ ಬಂದರಿಗೆ ಕಾನೂನುಬದ್ಧವಾಗಿ ಸಾಗಿಸಿದ್ದಾರೆ. ಕಾನೂನುಬದ್ಧವಾಗಿಯೇ ರಫ್ತು ಮಾಡಿದ್ದಾರೆ. ಇದರ ಮಧ್ಯೆ 1,850 ಟನ್‌ ಅದಿರನ್ನು ರಾಯಧನ ಪಾವತಿಸದೇ ಸಾಗಿಸಿ, ರಫ್ತು ಮಾಡಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರಕ್ಕೆ ₹58 ಲಕ್ಷ ನಷ್ಟ ಉಂಟುಮಾಡಿದ್ದಾರೆ ಎಂದು ತನಿಖಾ ತಂಡ ತಿಳಿಸಿತ್ತು.

ಈ ಪ್ರಕರಣದ ವಿಚಾರಣೆ ನಡೆಸಿದ್ದ ಲೋಕಾಯುಕ್ತ ವಿಶೇಷ ನ್ಯಾಯಾಲಯವು ಇದೇ ಏಪ್ರಿಲ್‌ 29ರಂದು ತೀರ್ಪು ನೀಡಿದ್ದು, ನಾಲ್ವರೂ ತಪ್ಪೆಸಗಿದ್ದಾರೆ ಎಂದಿದೆ. ನಾಲ್ವರಿಗೂ ನಾಲ್ಕು ವಿವಿಧ ಆರೋಪಗಳ ಅಡಿಯಲ್ಲಿ ಪ್ರತ್ಯೇಕವಾಗಿ 6 ತಿಂಗಳು, ಮೂರು ವರ್ಷ, ಮೂರು ವರ್ಷ ಮತ್ತು ಎರಡು ವರ್ಷಗಳ ಸೆರೆವಾಸ ವಿಧಿಸಿದ್ದು, ಅಷ್ಟೂ ಶಿಕ್ಷೆಯನ್ನು ಏಕಕಾಲದಲ್ಲಿ ಜಾರಿ ಮಾಡಬೇಕು ಎಂದು ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.