ಸಚಿವ ಸಂಪುಟ ಸಭೆ
– ಪ್ರಜಾವಾಣಿ ಚಿತ್ರ
ಬೆಂಗಳೂರು: ರಾಜ್ಯದ 13 ಕಿರು ಬಂದರುಗಳ ಮೂಲಕ ಕಬ್ಬಿಣದ ಅದಿರು ಅಕ್ರಮ ರಫ್ತು ತಡೆಯಲು ‘ಕರ್ನಾಟಕ ಕಿರು ಬಂದರುಗಳಲ್ಲಿ ಕಬ್ಬಿಣದ ಅದಿರು ನಿರ್ವಹಣಾ ನೀತಿ- 2025’ ಎಂಬ ಪ್ರಮಾಣಿತ ಕಾರ್ಯನಿರ್ವಹಣಾ ವಿಧಾನ (ಎಸ್‌ಒಪಿ) ಜಾರಿ ತರಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಗುರುವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ, ‘ರಾಜ್ಯದಿಂದ ಅಕ್ರಮವಾಗಿ ಅದಿರುಗಳ ಸಾಗಣೆ ಮತ್ತು ರಫ್ತು ತಡೆಯಲು ರೂಪುರೇಷೆ ಸಿದ್ಧಪಡಿಸುವ ಉದ್ದೇಶದಿಂದ 10 ಸಣ್ಣ ಬಂದರುಗಳಿಂದ ಕಬ್ಬಿಣದ ಅದಿರು ರಫ್ತು ನಿಷೇಧಿಸಿ 2010ರ ಜುಲೈ 26ರಂದು ಸರ್ಕಾರ ಆದೇಶ ಹೊರಡಿಸಿತ್ತು. ಆದರೂ, ಕೇಂದ್ರ ಸರ್ಕಾರದ ನೀತಿಯನ್ನು ಕಟ್ಟುನಿಟ್ಟಾಗಿ ಪಾಲಿಸಿ ಈ ಬಂದರುಗಳಿಂದ ಕಬ್ಬಿಣದ ಅದಿರು ರಫ್ತು ಮಾಡಲು ಸುಪ್ರೀಂ ಕೋರ್ಟ್ 2022ರಲ್ಲಿ ಅನುಮತಿ ನೀಡಿತ್ತು. ಹೊಸ ನೀತಿ ಜಾರಿಗೆ ಬರಲಿರುವ ಕಾರಣ ಈ ಆದೇಶವನ್ನು ಹಿಂಪಡೆಯಲಾಗುವುದು’ ಎಂದರು.
‘ಅದಿರು ಅಕ್ರಮ ಸಾಗಣೆಗೆ ಸಂಬಂಧಿಸಿದ ಹಲವು ಪ್ರಕರಣಗಳು ನ್ಯಾಯಾಲಯಗಳಲ್ಲಿ ಮತ್ತು ಲೋಕಾಯುಕ್ತದಲ್ಲಿ ವಿಚಾರಣೆ ಬಾಕಿಯಿದೆ. ಹೀಗಾಗಿ, ಹೊಸ ನೀತಿಯನ್ನು ಪೂರ್ವಾನ್ವಯವಾಗಿ ಜಾರಿಗೆ ತರಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಹೊಸ ನೀತಿ ಜಾರಿಗೆ ಬರಲಿದೆ’ ಎಂದು ಅವರು ವಿವರಿಸಿದರು.
‘ಕಾರವಾರ, ತದಡಿ, ಭಟ್ಕಳ, ಮಲ್ಪೆ, ಹಳೇ ಮಂಗಳೂರು, ಬೇಲೆಕೇರಿ, ಹೊನ್ನಾವರ, ಕುಂದಾಪುರ, ಹಂಗಾರಕಟ್ಟೆ ಮತ್ತು ಪಡುಬಿದ್ರಿ ಬಂದರುಗಳಿಂದ ಕಬ್ಬಿಣದ ಅದಿರು ರಫ್ತು ಮಾಡುವುದನ್ನು 2010ರ ಆದೇಶದಲ್ಲಿ ನಿಷೇಧಿಸಿತ್ತು. ರಾಜ್ಯದಲ್ಲಿ ಒಟ್ಟು 13 ಪ್ರಮುಖವಲ್ಲದ ಬಂದರುಗಳಿವೆ’ ಎಂದರು.
‘ಹೊಸ ನೀತಿಯಡಿ ನೋಂದಣಿ ಶುಲ್ಕ, ಕಬ್ಬಿಣದ ಅದಿರನ್ನು ನಿರ್ವಹಿಸಲು ಭೂಮಿ ಹಂಚಿಕೆಗಾಗಿ ಪರವಾನಗಿ ಶುಲ್ಕ, ಬಂದರಿನಲ್ಲಿ ಸರಕುಗಳ ಸಾಗಣೆ ಅಥವಾ ನಿರ್ವಹಣೆಯ ಸೇವೆಗಳಿಗೆ ವಿಧಿಸುವ ಶುಲ್ಕ, ಕನಿಷ್ಠ ಗ್ಯಾರಂಟಿ ಠೇವಣಿ, ಭದ್ರತಾ ಠೇವಣಿ, ನಿಯಮ ಪಾಲಿಸದಿದ್ದರೆ ದಂಡ ವಿಧಿಸಲಾಗುವುದು. ಮಾಲಿನ್ಯ ತಗ್ಗಿಸುವಿಕೆ, ಸುರಕ್ಷತೆ ಮತ್ತು ಮೇಲ್ವಿಚಾರಣೆ ಶುಲ್ಕದ ಮೂಲಕ ಸರ್ಕಾರಕ್ಕೆ ಪ್ರತಿ ಟನ್‌ಗೆ ₹ 13ರಂತೆ ಆದಾಯ ಬರಲಿದೆ’ ಎಂದು ಸಚಿವರು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.