ADVERTISEMENT

ಕೊರೊನಾ ವೈರಸ್‌ಗೆ ಮಲೇರಿಯಾ ಔಷಧ ಪರಿಣಾಮಕಾರಿ ಮದ್ದು?

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2020, 8:19 IST
Last Updated 29 ಮಾರ್ಚ್ 2020, 8:19 IST
   

ಮೈಸೂರು: ‘ಕೋವಿಡ್‌– 19’ಗೆ ಮದ್ದು ಕಂಡು ಹಿಡಿಯುವ ನಿಟ್ಟಿನಲ್ಲಿ ವಿಶ್ವವ್ಯಾಪಿ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿರುವ ಬೆನ್ನಿನಲ್ಲೇ, ಈಗಾಗಲೇ ಲಭ್ಯವಿರುವ ಔಷಧಗಳನ್ನು ಬಳಸುವ ಪ್ರಯತ್ನ ನಡೆದಿವೆ. ಮಲೇರಿಯಾ ಹಾಗೂ ಎಚ್‌ಐವಿಗೆ ಬಳಸುವ ಔಷಧಗಳನ್ನು ಕೋವಿಡ್‌–19ಗೂ ನೀಡುವ ಪ್ರಯತ್ನ ಪರಿಣಾಮಕಾರಿ ಎನ್ನುವ ವಾದವನ್ನೂ ವಿಜ್ಞಾನಿಗಳ ವಲಯ ಪ್ರತಿಪಾದಿಸುತ್ತಿದೆ.

ಮಲೇರಿಯಾ ಹಾಗೂ ಎಚ್‌ಐವಿಗಳು ವೈರಸ್‌ನಿಂದ ಬರುವ ಕಾಯಿಲೆಗಳಾಗಿವೆ. ಹಾಗಾಗಿ, ಈ ಕಾಯಿಲೆಗಳಿಗೆ ಬಳಸುವ ಆ್ಯಂಟಿ ವೈರಲ್ ಔಷಧಗಳನ್ನು ಕೋವಿಡ್‌–19ಗೂ ಬಳಸಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರತಿಪಾದಿಸಿದೆ. ‘ಕೋವಿಡ್‌–19’ನಲ್ಲಿ ಜ್ವರ, ಕೆಮ್ಮು, ನೆಗಡಿಯಂತಹ ಲಕ್ಷಣಗಳು ಪ್ರಧಾನವಾಗಿರುವ ಕಾರಣ, ಆ್ಯಂಟಿ ಬಯಾಟಿಕ್‌ (ಬ್ಯಾಕ್ಟೀರಿಯಾಗಳಿಗೆ ನೀಡುವ ಮದ್ದು) ಗಳನ್ನು ಆ್ಯಂಟಿ ವೈರಲ್‌ಗಳ ಜತೆ ನೀಡಿರುವುದು ಹಲವು ರೋಗಿಗಳಲ್ಲಿ ಉತ್ತಮ ಪರಿಣಾಮವನ್ನು ಬೀರಿದೆ.

ಮಲೇರಿಯಾಗೆ ನೀಡುವ ಹೈಡ್ರಾಕ್ಸಿಕ್ಲೋರೊಕ್ವಿನ್‌ (Hydroxychloroquine) ಆ್ಯಂಟಿ ವೈರಲ್‌ ಜತೆಗೆ, ಅಜಿತ್ರೋಮೈಸಿನ್ (Azithromycin) ಆ್ಯಂಟಿ ಬ್ಯಾಕ್ಟೀರಿಯಲ್ ಮಿಶ್ರಣ ಮಾಡಿ ನೀಡುವುದು ಹಲವು ರೋಗಿಗಳಲ್ಲಿ ಪರಿಣಾಮ ಬೀರಿದೆ. ಅಂತೆಯೇ, ಎಚ್‌ಐವಿಗೆ ನೀಡುವ ಲೋಪಿನವಿರ್‌ (Lopinavir) ಹಾಗೂ ರಿಟೋನವಿರ್ (Ritonavir) ಆಂಟಿ ವೈರಲ್‌ ಜತೆಗೆ, ಆಸೆಲ್ಟಾಮಿವಿರ್‌ (Oseltamivir) ಎಂಬ ಮತ್ತೊಂದು ಆ್ಯಂಟಿ ವೈರಲ್‌ ಔಷಧದ ಜತೆಗೆ ನೀಡಿರುವುದು ಹಲವು ರೋಗಿಗಳಲ್ಲಿ ಪರಿಣಾಮ ಬೀರಿದೆ.

ADVERTISEMENT

ಭಾರತದಲ್ಲೂ ಪ್ರಯತ್ನ? ಈ ನಿಟ್ಟಿನಲ್ಲಿ ಇದೇ ಔಷಧ ಮಿಶ್ರಣಗಳನ್ನು ಭಾರತದಲ್ಲೂ ‘ಕೋವಿಡ್‌ – 19’ ರೋಗಿಗಳಿಗೆ ನೀಡಬಹುದು ಎಂದು ರಸಾಯನವಿಜ್ಞಾನಿ ಪ್ರೊ.ಕೆ.ಎಸ್‌.ರಂಗಪ್ಪ ಪ್ರತಿಪಾದಿಸಿದ್ದಾರೆ. ‘ಹೊಸ ಔಷಧವನ್ನು ಕಂಡು ಹಿಡಿಯುವ ಪ್ರಯತ್ನ ವಿಶ್ವವ್ಯಾಪಿ ನಡೆಯುತ್ತಿದೆ. ಆದರೆ, ಅದಕ್ಕೆ ಮೂರು – ನಾಲ್ಕು ತಿಂಗಳುಗಳು ಹಿಡಿಯಬಹುದು. ಹಾಗಾಗಿ, ಲಭ್ಯವಿರುವ ಔಷಧಗಳನ್ನು ವಿವೇಚನೆಯಿಂದ ಪ್ರಯೋಗಿಸುವುದು ಅನಿವಾರ್ಯವಾಗಿದೆ. ಇದು ಹಲವರ ಪ್ರಾಣ ಉಳಿಸುವಲ್ಲಿ ಸಹಾಯ ಮಾಡಬಲ್ಲದು’ ಎಂದು ಪ್ರೊ.ರಂಗಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಎಲ್ಲ ರೋಗಿಗಳಲ್ಲೂ ಈ ಔಷಧ ಮಿಶ್ರಣ ಬೀರುತ್ತದೆ ಎಂದು ಹೇಳಲಾಗುವುದಿಲ್ಲ. ಪ್ರತಿಯೊಬ್ಬ ರೋಗಿಯ ದೇಹ ರಚನೆ ವಿಭಿನ್ನ. ಆದರೆ, ರೋಗ ವಾಸಿಮಾಡುವ ನಿಟ್ಟಿನಲ್ಲಿ ಇದು ದೊಡ್ಡ ಪ್ರಯತ್ನ ಎಂದು ಅವರು ತಿಳಿಸಿದರು.

ನಕಾರಾತ್ಮಕ ಪರಿಣಾಮ?: ‘ಮಲೇರಿಯಾಗೆ ನೀಡುವ ಹೈಡ್ರಾಕ್ಸಿಕ್ಲೋರೊಕ್ವಿನ್‌ (Hydroxychloroquine) ಔಷಧ ‘ಕೋವಿಡ್ –19’ ಉಳ್ಳ ರೋಗಿಗಳ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರಬಲ್ಲದು. ಸಾವು ಸಹ ಸಂಭವಿಸಬಹುದು’ ಎಂದು ಮತ್ತೊಬ್ಬ ಹಿರಿಯ ವಿಜ್ಞಾನಿ ಪ್ರೊ.ಜೆ.ಶಶಿಧರ ಪ್ರಸಾದ್ ಆತಂಕ ವ್ಯಕ್ತಪಡಿಸಿದ್ದಾರೆ. ‘ಈ ಔಷಧವನ್ನು ನಿಗದಿತ ಪ್ರಮಾಣದಲ್ಲಿ ನೀಡದೇ ಇದ್ದಲ್ಲಿ ಔಷಧವೇ ವಿಷವಾಗಿ ಸಾವಾಗಬಹುದು’ ಎಂದಿದ್ದಾರೆ.

(ವಿಶೇಷ ಸೂಚನೆ: ವೈದ್ಯರ ಸಲಹೆ ಇಲ್ಲದೆ ಯಾವುದೇ ಔಷಧ ಸೇವಿಸುವುದು ಅಪಾಯ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.