ADVERTISEMENT

ಮಲೆನಾಡು ಗೋವಧೆ ಸ್ಥಳವಾಯಿತೇ?

ತೀರ್ಥಹಳ್ಳಿ: ಗೋಮಾಂಸ ಸಿದ್ಧಪಡಿಸುವ ಜಾಲ ಬೆಳಕಿಗೆ

ಶಿವಾನಂದ ಕರ್ಕಿ
Published 26 ಜುಲೈ 2020, 4:57 IST
Last Updated 26 ಜುಲೈ 2020, 4:57 IST
ತೀರ್ಥಹಳ್ಳಿ ತಾಲ್ಲೂಕಿನ ಬೆಜ್ಜವಳ್ಳಿ ಸಮೀಪ ಸಮಕಾನಿ ಕಾಡಿನಲ್ಲಿ ಗೋವಧೆ ನಡೆಸಿದ ಸ್ಥಳವನ್ನು ಪೊಲೀಸರು ಪರಿಶೀಲಿಸುತ್ತಿರುವುದು.
ತೀರ್ಥಹಳ್ಳಿ ತಾಲ್ಲೂಕಿನ ಬೆಜ್ಜವಳ್ಳಿ ಸಮೀಪ ಸಮಕಾನಿ ಕಾಡಿನಲ್ಲಿ ಗೋವಧೆ ನಡೆಸಿದ ಸ್ಥಳವನ್ನು ಪೊಲೀಸರು ಪರಿಶೀಲಿಸುತ್ತಿರುವುದು.   

ತೀರ್ಥಹಳ್ಳಿ: ಜಾನುವಾರು ಕಳವು ಮಾಡಿ ಮಲೆನಾಡಿನ ಕಾಡನ್ನು ಗೋವಧಾ ಕೇಂದ್ರನ್ನಾಗಿಸಿಕೊಂಡು ಗೋಮಾಂಸ ಸಿದ್ಧಪಡಿಸಿ ಮಾರಾಟ ಮಾಡುವ ಜಾಲ ಬೆಳಕಿಗೆ ಬಂದಿದೆ.

ತಾಲ್ಲೂಕಿನ ಬೆಜ್ಜವಳ್ಳಿ ಸಮೀಪ ಸಾಲೇಜನಗಲ್ಲು, ಸಮಕಾನಿ ನಡುವಿನ ಕಾಡಿನಲ್ಲಿ ಕಳವು ಮಾಡಿದ ಜಾನುವಾರು ತಂದು ಕೊಂದು ಗೋಮಾಂಸ ಸಿದ್ಧಪಡಿಸಿರುವುದನ್ನು ಗ್ರಾಮಸ್ಥರು ಪತ್ತೆ ಹಚ್ಚಿದ್ದಾರೆ.

ಕಾಡಿನಿಂದ ಊರಿಗೆ ಬರುತ್ತಿದ್ದ ಆಮ್ನಿ ಕಾರನ್ನು ನೋಡಿ ಅನುಮಾನಗೊಂಡ ಗ್ರಾಮಸ್ಥರು ಕಾಡಿಗೆ ತೆರಳಿ ತಪಾಸಣೆ ನಡೆಸಿದಾಗ, ಹತ್ತಾರು ಜಾನುವಾರಿನ ತಲೆ ಬುರುಡೆ, ಕೋಡು, ಮೂಳೆ, ಕಾಲಿನ ಗೊರಸು, ಹಸಿ ತ್ಯಾಜ್ಯ ಕಂಡುಬಂದಿದೆ. ಈ ಕುರಿತು ಮಾಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ADVERTISEMENT

ಮಲೆನಾಡಿನಲ್ಲಿ ಜಾನುವಾರು ಕಳವು ಪ್ರಕರಣ ಹೆಚ್ಚಿದ್ದು ಪದೇ ಪದೇ ಜಾನುವಾರು ಕಳವು ನಡೆಯುತ್ತಲೇ ಇದೆ. ಬೆಜ್ಜವಳ್ಳಿ ಭಾಗದ ಸಾಲೇಜನಗಲ್ಲು, ಸಮಕಾನಿ, ಹೊಸಬೀಡು, ದಾನಸಾಲೆ, ಸಿಕೆ ರಸ್ತೆ, ಮೇಲಿನಕೊಪ್ಪ, ಕುಡುಮಲ್ಲಿಗೆ ಬಾಂಡ್ಯ, ಕುಕ್ಕೆ ಸುತ್ತಮುತ್ತ ಜಾನುವಾರು ಕಳವು ಪ್ರಕರಣ ಹೆಚ್ಚಾಗಿದೆ.

ಕುಡುಮಲ್ಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಕ್ಸೆ, ಕೆಂಜಿಗುಡ್ಡೆ ಗ್ರಾಮದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನಕ್ಕೆ ಬಿಟ್ಟ ಬಸವ ಒಂದು ತಿಂಗಳ ಹಿಂದೆ ಕಣ್ಮರೆಯಾಗಿದ್ದು, ಇಂದಿಗೂ ಪತ್ತೆಯಾಗಿಲ್ಲ.

ಮಲೆನಾಡಿನಲ್ಲಿ ಜಾನುವಾರನ್ನು ಮೇವಿಗಾಗಿ ಬಯಲಿಗೆ ಬಿಡುವ ಪದ್ಧತಿ ಚಾಲ್ತಿಯಲ್ಲಿದ್ದು, ಮನೆಯಿಂದ ಮೇವಿಗಾಗಿ ಬಿಟ್ಟ ಜಾನುವಾರು ಕಳೆದುಹೋಗುತ್ತಿವೆ. ಸಾಕು ನಾಯಿಗಳು ಜಾನುವಾರಿನ ತ್ಯಾಜ್ಯ ತಿನ್ನಲು ಹೋಗುತ್ತಿರುವುದರ ಬೆನ್ನು ಬಿದ್ದ ಸ್ಥಳೀಯರಿಗೆ ಗೋವಧಾ ಸ್ಥಳ ಪತ್ತೆಯಾಗಿದೆ.

‘ನಮ್ಮ ತಾಲ್ಲೂಕಿನಲ್ಲಿ ಗೋವಿನ ಕಳವು ಜಾಲ ವ್ಯಾಪಕವಾಗಿದೆ. ನಗರ ಹೋಬಳಿ ಸಮೀಪ ಜಾನುವಾರು ಕಳವು ಮಾಡುವವರು ಸಿಕ್ಕಿಬಿದ್ದಿದ್ದಾರೆ. ಪಟ್ಟಣದ ಬಾಳೇಬೈಲು ಬಡಾವಣೆಯಲ್ಲಿ ಕೆಲ ದಿನಗಳ ಹಿಂದೆ ಗಬ್ಬದ ಹಸುವನ್ನು ಕಾಲು ಕಡಿದ ಪ್ರಕರಣ ಬಯಲಾಗಿದೆ. ಕಳವು ಮಾಡುವವರು ತಾಲ್ಲೂಕಿನಲ್ಲಿಯೇ ಇದ್ದಾರೆ. ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಜಾನುವಾರು ಕಳವು ನಡೆಯದಂತೆ ಪೊಲೀಸರು ಹೆಚ್ಚಿನ ನಿಗಾವಹಿಸಬೇಕು’ ಎನ್ನುತ್ತಾರೆ ಶಾಸಕ ಆರಗ ಜ್ಞಾನೇಂದ್ರ.

***

ಹಸು ಕಡಿಯುವವರು ಎರಡು ಸಮುದಾಯದ ನಡುವೆ ದೊಡ್ಡ ಕಂದಕ ನಿರ್ಮಾಣ ಮಾಡುತ್ತಿದ್ದಾರೆ. ಗೋಕಳ್ಳರನ್ನು ಪೊಲೀಸರು ಸೆದೆ ಬಡಿಯಬೇಕು.
– ಆರಗ ಜ್ಞಾನೇಂದ್ರ, ಶಾಸಕ, ತೀರ್ಥಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.