ADVERTISEMENT

ಕೆಐಒಸಿಎಲ್‌ ಖಾಸಗೀಕರಣ?

ಅದಿರು ಕಂಪನಿ–ಎನ್‌ಎಂಡಿಸಿ ವಿಲೀನಕ್ಕೆ ಒಪ್ಪದ ಹಣಕಾಸು ಸಚಿವಾಲಯ

ಮಂಜುನಾಥ್ ಹೆಬ್ಬಾರ್‌
Published 30 ಜೂನ್ 2025, 22:42 IST
Last Updated 30 ಜೂನ್ 2025, 22:42 IST
   

ನವದೆಹಲಿ: ಅದಿರಿನ ಕೊರತೆಯಿಂದ ಬಳಲಿ ನಷ್ಟದ ಸುಳಿಗೆ ಸಿಕ್ಕಿ ನಲುಗುತ್ತಿರುವ ಕುದುರೆಮುಖ ಕಬ್ಬಿಣದ ಅದಿರು ಕಂಪನಿ (ಕೆಐಒಸಿಎಲ್‌) ಹಾಗೂ ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (ಎನ್‌ಎಂಡಿಸಿ) ವಿಲೀನಕ್ಕೆ ಕೇಂದ್ರ ಹಣಕಾಸು ಸಚಿವಾಲಯ ಸಮ್ಮತಿ ಸೂಚಿಸಿಲ್ಲ. ಕೆಐಒಸಿಎಲ್‌ ಖಾಸಗೀಕರಣ ಮಾಡಲು ಕೇಂದ್ರ ಸರ್ಕಾರ ಉತ್ಸುಕತೆ ತೋರಿದೆ. 

ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಸ್ವಾಮಿಮಲೈ ಬ್ಲಾಕಿನ ದೇವದಾರಿಯಲ್ಲಿ 401.57 ಹೆಕ್ಟೇರ್ ಅರಣ್ಯ ಭೂಮಿಯಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆಗೆ ಕೆಐಒಸಿಎಲ್‌ ಅರಣ್ಯ ತೀರುವಳಿ ಪಡೆದಿದೆ. ಇಲ್ಲಿ ಕಬ್ಬಿಣದ ಅದಿರು ಗಣಿ ಕಾರ್ಯಾಚರಣೆಗೆ ಸಂಬಂಧಿಸಿದ ಕೆಐಒಸಿಎಲ್‌ ಕಡತಕ್ಕೆ ಕೇಂದ್ರ ಉಕ್ಕು ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು 2024ರ ಜೂನ್‌ 12ರಂದು ಸಹಿ ಹಾಕಿದ್ದರು. 2024–2025ನೇ ಸಾಲಿನಲ್ಲಿ ದೇವದಾರಿಯಲ್ಲಿ 3 ಲಕ್ಷ ಟನ್‌ಗಳಷ್ಟು ಅದಿರು ಹೊರತೆಗೆಯುವ ಯೋಜನೆಯನ್ನು ಕೆಐಒಸಿಎಲ್‌ ಹೊಂದಿತ್ತು. ಆದರೆ, ಅರಣ್ಯ ಇಲಾಖೆಯು ‘ಅರಣ್ಯ ತೀರುವಳಿ ಗುತ್ತಿಗೆ ಪತ್ರ’ವೂ ಸೇರಿದಂತೆ ಜಮೀನು ಹಸ್ತಾಂತರಕ್ಕೆ ಒಪ್ಪಿಗೆ ಕೊಟ್ಟಿರಲಿಲ್ಲ. ಈ ವಿಷಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಸಂಘರ್ಷ ಏರ್ಪಟ್ಟಿತ್ತು. 

ಸುಪ್ರೀಂ ಕೋರ್ಟ್‌ ಆದೇಶದ ಕಾರಣದಿಂದ ಕಂಪನಿಯು 2006ರಲ್ಲಿ ಕುದುರೆಮುಖದಲ್ಲಿ ಗಣಿಗಾರಿಕೆ ಸ್ಥಗಿತಗೊಳಿಸಿತ್ತು. ಪೆಲ್ಲೆಟ್‌ಗಳನ್ನು (ಸಣ್ಣ ಗುಂಡುಗಳು) ಉತ್ಪಾದಿಸುತ್ತಿರುವ ಮಂಗಳೂರಿನ ಕೆಐಒಸಿಎಲ್ ಘಟಕದಲ್ಲಿ 433 ಕಾಯಂ ಸಿಬ್ಬಂದಿ, 52 ಗುತ್ತಿಗೆ ಎಂಜಿನಿಯರ್‌ಗಳು, 400 ಗುತ್ತಿಗೆ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ತನ್ನ ಮಂಗಳೂರಿನಲ್ಲಿರುವ ಸ್ಥಾವರಕ್ಕಾಗಿ ಛತ್ತೀಸಗಢದ ಸ್ಥಾವರಗಳ ಅದಿರನ್ನು ಅವಲಂಬಿಸಿದೆ. ನಷ್ಟದ ಕಾರಣ 300 ಗುತ್ತಿಗೆ ನೌಕರರನ್ನು ವಜಾ ಮಾಡಲು ಅದಿರು ಕಂಪನಿ ಮುಂದಾಗಿತ್ತು. 

ADVERTISEMENT

ಈ ನಡುವೆ, ನವದೆಹಲಿ ಹಾಗೂ ಚನ್ನರಾಯಪಟ್ಟಣದಲ್ಲಿ ಮಾತನಾಡಿದ್ದ ಕುಮಾರಸ್ವಾಮಿ, ‘ಎರಡು ಸಂಸ್ಥೆಗಳ ವಿಲೀನಕ್ಕೆ ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ’ ಎಂದು ಹೇಳಿಕೆ ನೀಡಿದ್ದರು. ಆ ಬಳಿಕ, ವಿಲೀನದ ಸಾಧಕ–ಬಾಧಕಗಳ ಬಗ್ಗೆ ಇಲಾಖೆಯ ಉನ್ನತ ಅಧಿಕಾರಿಗಳ ಜತೆಗೆ ಸುದೀರ್ಘ ಚರ್ಚೆ ನಡೆಸಿದ್ದರು. ಈ ಪ್ರಸ್ತಾವಕ್ಕೆ ಎನ್‌ಡಿಎಂಸಿ ಸಕಾರಾತ್ಮಕವಾಗಿ ಸ್ಪಂದಿಸಿತ್ತು. ಉಭಯ ಸಂಸ್ಥೆಗಳ ವಿಲೀನದ ಪ್ರಸ್ತಾವವನ್ನು ಹಣಕಾಸು ಸಚಿವಾಲಯದ ಅಧೀನದ ಸಾರ್ವಜನಿಕ ಉದ್ಯಮ ಇಲಾಖೆಗೆ ಉಕ್ಕು ಸಚಿವಾಲಯವು ಡಿಸೆಂಬರ್‌ನಲ್ಲಿ ಸಲ್ಲಿಸಿತ್ತು. 

ಬಜೆಟ್‌ ಅಧಿವೇಶನದಲ್ಲಿ ಸಂಸದ ಬ್ರಿಜೇಶ್‌ ಚೌಟ ಪ್ರಶ್ನೆಗೆ ಉತ್ತರಿಸಿದ್ದ ಉಕ್ಕು ಖಾತೆ ರಾಜ್ಯ ಸಚಿವ ಶ್ರೀನಿವಾಸ ವರ್ಮ, ‘ಎರಡು ಸಂಸ್ಥೆಗಳ ವಿಲೀನದ ಬಗ್ಗೆ ಸರ್ಕಾರ ಈವರೆಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ’ ಎಂದು ಸ್ಪಷ್ಟಪಡಿಸಿದ್ದರು. 

‘ವಿಲೀನಕ್ಕೆ ಹಣಕಾಸು ಸಚಿವಾಲಯದಿಂದ ಸಮ್ಮತಿ ಸಿಕ್ಕಿಲ್ಲ. ವಿಲೀನದ ಬದಲು ಕೆಐಒಸಿಎಲ್‌ ಖಾಸಗೀಕರಣ ಮಾಡುವುದು ಸೂಕ್ತ. ಈ ಮೂಲಕ ಸಂಸ್ಥೆಯನ್ನು ಲಾಭದ ಹಳಿಗೆ ತರಬಹುದು ಎಂಬುದು ಹಣಕಾಸು ಸಚಿವಾಲಯದ ಅಭಿಮತ’ ಎಂದು ಉಕ್ಕು ಸಚಿವಾಲಯದ ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.  

‘ರಾಜ್ಯವೇ ಅಡ್ಡಿ’

ಕೆಐಒಸಿಎಲ್ ಕಾರ್ಯಾಚರಣೆಗೆ ಸಣ್ಣ ವಿಚಾರಗಳನ್ನು ಮುಂದಿಟ್ಟುಕೊಂಡು ರಾಜ್ಯ ಕಾಂಗ್ರೆಸ್‌ ಸರ್ಕಾರ ಅಡ್ಡಿಪಡಿಸುತ್ತಿದೆ. ಇದರಿಂದ ಸಂಸ್ಥೆ ಪ್ರತಿ ತಿಂಗಳು ಭಾರಿ ನಷ್ಟ ಅನುಭವಿಸುತ್ತಿದೆ. ನನ್ನ ಮೇಲಿನ ವೈಯಕ್ತಿಕ ದ್ವೇಷದಿಂದ ರಾಜ್ಯ ಸರ್ಕಾರ ತೋರುತ್ತಿರುವ ಅಸಹಕಾರದಿಂದ ಸಂಸ್ಥೆಯ ಪುನರುಜ್ಜೀವನಕ್ಕೆ ಭಾರಿ ಹಿನ್ನಡೆಯಾಗಿದೆ. 

-ಎಚ್‌.ಡಿ.ಕುಮಾರಸ್ವಾಮಿ, ಕೇಂದ್ರ ಉಕ್ಕು ಸಚಿವ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.