ADVERTISEMENT

ಬೆಂಗಳೂರಿನ ಎಂಬೆಸ್ಸಿ ಸಮೂಹದ ಮೇಲೆ ಐ.ಟಿ ದಾಳಿ

* ತೆರಿಗೆ ವಂಚನೆ ಆರೋಪ *30ಕ್ಕೂ ಹೆಚ್ಚು ಕಡೆ ಶೋಧ

​ಪ್ರಜಾವಾಣಿ ವಾರ್ತೆ
Published 1 ಜೂನ್ 2022, 19:30 IST
Last Updated 1 ಜೂನ್ 2022, 19:30 IST
   

ಬೆಂಗಳೂರು: ರಿಯಲ್‌ ಎಸ್ಟೇಟ್‌ ಮತ್ತು ಆತಿಥ್ಯ ಕ್ಷೇತ್ರದ ದೈತ್ಯ ಉದ್ಯಮ ಸಂಸ್ಥೆ ಎಂಬೆಸ್ಸಿ ಸಮೂಹದ ವ್ಯವಸ್ಥಾಪಕ ನಿರ್ದೇಶಕರು, ನಿರ್ದೇಶಕರ ಮನೆಗಳು, ಕಾರ್ಪೋರೇಟ್‌ ಕಚೇರಿಗಳು ಸೇರಿದಂತೆ 30ಕ್ಕೂ ಹೆಚ್ಚು ಸ್ಥಳಗಳ ಮೇಲೆ ಬುಧವಾರ ದಾಳಿ ಮಾಡಿರುವ ಆದಾಯ ತೆರಿಗೆ (ಐ.ಟಿ) ಇಲಾಖೆ ಅಧಿಕಾರಿಗಳು, ತೆರಿಗೆ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಶೋಧ ನಡೆಸಿದರು.

ಎಂಬೆಸ್ಸಿ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಜೀತು ವಿರ್ವಾನಿ, ನಿರ್ದೇಶಕ ನರಪತ್‌ ಸಿಂಗ್‌ ಚೋರಾರಿಯಾ, ಕಾರ್ಪೋರೇಟ್‌ ವ್ಯವಹಾರಗಳ ವಿಭಾಗದ ನಿರ್ದೇಶಕ ಅಶೋಕ್‌ ಬಜಾಜ್‌, ಸಮೂಹದ ಪ್ರಮುಖರ ನಿಕಟವರ್ತಿಯಾಗಿರುವ ದೌಲತ್‌ ಸಿಂಗ್‌ ಎಂಬುವವರ ಮನೆಗಳಲ್ಲಿ ಶೋಧ ನಡೆಸಲಾಗಿದೆ. ಜೀತು ವೀರ್ವಾನಿ ಮತ್ತು ನರಪತ್‌ ಸಿಂಗ್‌ ಅವರ ಬೆಂಗಳೂರಿನ ಮನೆಗಳಲ್ಲಿ ಇಡೀ ದಿನ ಶೋಧ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಎಂಬೆಸ್ಸಿ ಸಮೂಹದ ಎಂಟು ಕಾರ್ಪೋರೇಟ್‌ ಕಚೇರಿಗಳು, ಸಮೂಹದ ಜತೆ ಆರ್ಥಿಕ ವಹಿವಾಟು ನಡೆಸುತ್ತಿರುವ ವ್ಯಕ್ತಿಗಳಿಗೆ ಸಂಬಂಧಿಸಿದ ಸ್ಥಳಗಳಲ್ಲೂ ಶೋಧ ನಡೆಸಲಾಗಿದೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ಈ ಸಮೂಹ ನಡೆಸಿರುವ ವಹಿವಾಟು, ತೆರಿಗೆ ಪಾವತಿ, ಹೂಡಿಕೆ ಪ್ರಮಾಣ, ಹೂಡಿಕೆದಾರರ ವಿವರ, ತೆರಿಗೆ ವಂಚನೆ ಮತ್ತಿತರ ಅಂಶಗಳ ಕುರಿತು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ADVERTISEMENT

ಬೆಂಗಳೂರು, ದೆಹಲಿ, ಗುರುಗ್ರಾಮ, ಮುಂಬೈನ ಹಲವು ಸ್ಥಳಗಳಲ್ಲಿ ಬುಧವಾರ ನಸುಕಿನಿಂದಲೇ ಆರಂಭವಾದ ಶೋಧ, ತಡರಾತ್ರಿಯವರೆಗೂ ನಡೆಯಿತು. ಬಿಗಿ ಪೊಲೀಸ್‌ ಭದ್ರತೆಯಲ್ಲಿ ಕಾರ್ಯಾಚರಣೆ ನಡೆಸಿರುವ ಆದಾಯ ತೆರಿಗೆ ಇಲಾಖೆಯ ಕರ್ನಾಟಕ ಮತ್ತು ಗೋವಾ ವಿಭಾಗದ ಅಧಿಕಾರಿಗಳು, ಬೃಹತ್‌ ಪ್ರಮಾಣದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

‘ಯಾವುದೇ ತಪ್ಪೆಸಗಿಲ್ಲ’: ಐ.ಟಿ ದಾಳಿ ಕುರಿತು ಪ್ರತಿಕ್ರಿಯೆ ನೀಡಿರುವ ಎಂಬೆಸ್ಸಿ ಸಮೂಹ, ‘ಇದು ಆದಾಯ ತೆರಿಗೆ ಪಾವತಿಗೆ ಸಂಬಂಧಿಸಿದ ಸಾಮಾನ್ಯ ಪರಿಶೀಲನೆ. ಎಂಬೆಸ್ಸಿ ಸಮೂಹವು ಕಾರ್ಪೋರೇಟ್‌ ಆಡಳಿತ ಅತ್ಯುತ್ತಮ ಗುಣಮಟ್ಟವನ್ನು ಕಾಯ್ದುಕೊಂಡಿದ್ದು, ಕಾನೂನಿನ ವ್ಯಾಪ್ತಿಯಲ್ಲೇ ವ್ಯವಹಾರ ನಡೆಸುತ್ತಿದೆ. ಸಂಬಂಧಿಸಿದ ಎಲ್ಲ ಪ್ರಾಧಿಕಾರಗಳ ಸೂಚನೆಯನ್ನು ಸಂಪೂರ್ಣವಾಗಿ ಪಾಲಿಸುತ್ತಿದ್ದು, ತೆರಿಗೆ ಪಾವತಿಯಲ್ಲೂ ಲೋಪ ಆಗಿಲ್ಲ. ಸಮೂಹದ ವಹಿವಾಟು ಎಂದಿನಂತೆ ಮುಂದುವರಿಯಲಿದ್ದು, ಪಾಲುದಾರರು ಆತಂಕಪಡುವ ಅಗತ್ಯವಿಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.