ADVERTISEMENT

ಪ‍ರಮೇಶ್ವರ, ಜಾಲಪ್ಪಗೆ ಐ.ಟಿ ಬಿಸಿ

ವೈದ್ಯಕೀಯ ಸೀಟುಗಳ ಅಕ್ರಮ ಮಾರಾಟ ಆರೋಪ; ಆಡಿಯೊ ರೆಕಾರ್ಡ್‌ಗಳ ವಶ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2019, 20:08 IST
Last Updated 10 ಅಕ್ಟೋಬರ್ 2019, 20:08 IST
ಐಟಿ ದಾಳಿ ನಡೆದ ಕಾಂಗ್ರೆಸ್‌ ಶಾಸಕ ಡಾ. ಜಿ. ಪರಮೇಶ್ವರ ಅವರ ಬೆಂಗಳೂರಿನ ಮನೆ   – ಪ್ರಜಾವಾಣಿ ಚಿತ್ರ
ಐಟಿ ದಾಳಿ ನಡೆದ ಕಾಂಗ್ರೆಸ್‌ ಶಾಸಕ ಡಾ. ಜಿ. ಪರಮೇಶ್ವರ ಅವರ ಬೆಂಗಳೂರಿನ ಮನೆ   – ಪ್ರಜಾವಾಣಿ ಚಿತ್ರ   

ಬೆಂಗಳೂರು: ಅಖಿಲ ಭಾರತ ಕೋಟಾದಡಿ ಹಂಚಿಕೆಯಾಗಬೇಕಿದ್ದ ವೈದ್ಯಕೀಯ ಸೀಟುಗಳನ್ನು ಅಕ್ರಮವಾಗಿ ಭಾರಿ ಹಣಕ್ಕೆ ಮಾರಾಟ ಮಾಡುತ್ತಿದ್ದ ಆರೋಪ ಸಂಬಂಧ ಕಾಂಗ್ರೆಸ್‌ ಮುಖಂಡರಾದ ಡಾ. ಜಿ. ಪರಮೇಶ್ವರ ಮತ್ತು ಆರ್‌.ಎಲ್‌. ಜಾಲಪ್ಪ ಅವರ ಶಿಕ್ಷಣ ಟ್ರಸ್ಟ್‌ಗಳ ಮೇಲೆ ಗುರುವಾರ ಬೆಳಿಗ್ಗೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ.

ಏಕಕಾಲಕ್ಕೆ ಹಲವೆಡೆ ದಾಳಿಗಳಾಗಿದ್ದು ಇಬ್ಬರೂ ಮುಖಂಡರ ಸಂಬಂಧಿಕರು ಹಾಗೂ ಆಪ್ತರ ಮನೆಗಳನ್ನು ಶೋಧಿಸಲಾಗಿದೆ. ಈ ದಾಳಿ ಬಗ್ಗೆ ರಾಜಕೀಯ ವಲಯದಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.

ತಮ್ಮ ಪಕ್ಷದ ಮುಖಂಡರನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸುವ ಮೂಲಕ ಸೇಡಿನ ರಾಜಕಾರಣ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್‌, ಜೆಡಿಎಸ್‌ ಮುಖಂಡರು ಕಿಡಿ ಕಾರಿದ್ದಾರೆ. ಕೇಂದ್ರ ಸರ್ಕಾರ ಐ.ಟಿ, ಇ.ಡಿ ಹಾಗೂ ಸಿಬಿಐ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದೂ ದೂರಿದ್ದಾರೆ.

ADVERTISEMENT

ರಾಷ್ಟ್ರೀಯ ಕೋಟಾದಡಿಯ ಸೀಟುಗಳನ್ನು ಕಾಲೇಜು ಸೀಟುಗಳಾಗಿ ಪರಿವರ್ತಿಸಿ, ಭಾರಿ ಮೊತ್ತಕ್ಕೆ ಮಾರಲಾಗುತ್ತಿದೆ. ಇದರಿಂದ ದೊಡ್ಡ ಪ್ರಮಾಣದಲ್ಲಿ ಕಪ್ಪು ಹಣ ಸಂಪಾದಿಸಲಾಗುತ್ತಿದೆ. ಟ್ರಸ್ಟಿಗಳು ಈ ಹಣವನ್ನು ವರ್ಗಾವಣೆ ಮಾಡಿಕೊಂಡು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಈ ಸಂಬಂಧ ಆಡಿಯೊ ರೆಕಾರ್ಡ್‌ಗಳು, ಡಿಜಿಟಲ್‌ ಸಾಕ್ಷ್ಯಾಧಾರಗಳು ಹಾಗೂ ಕೆಲವು ಟಿಪ್ಪಣಿಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಶಿಕ್ಷಣ ಟ್ರಸ್ಟ್‌ವೊಂದು ನೆಲಮಂಗಲದಲ್ಲಿ ಜಮೀನು ಸ್ವಾಧೀನಪಡಿಸಿಕೊಂಡಿತ್ತು. ಇದಕ್ಕಾಗಿ ಭೂ ಮಾಲೀಕರಿಗೆ ಹಣವನ್ನೂ ಪಾವತಿ ಮಾಡಿದ ದಾಖಲೆಗಳೂ ಸಿಕ್ಕಿವೆ. ಜಮೀನು ಮಾಲೀಕರ ಮನೆಯಿಂದ ₹ 1.6 ಕೋಟಿ ಜಪ್ತಿ ಮಾಡಲಾಗಿದೆ. ಇದಲ್ಲದೆ, ಕಾಲೇಜಿನ ಕ್ಯಾಷಿಯರ್‌ ಬಳಿ ₹ 32 ಲಕ್ಷ ಹಾಗೂ ಸೀಟುಗಳ ಮಾರಾಟಕ್ಕೆ ನೆರವಾಗುತ್ತಿದ್ದ ಮಧ್ಯವರ್ತಿಯಿಂದ ₹ 1 ಕೋಟಿ ವಶಪಡಿಸಿಕೊಳ್ಳಲಾಗಿದೆ ಎಂದೂ ಐ.ಟಿ ಮೂಲಗಳು ತಿಳಿಸಿವೆ.

ಏಕಕಾಲಕ್ಕೆ ದಾಳಿ: (ತುಮಕೂರು ವರದಿ)12 ಅಧಿಕಾರಿಗಳ 4 ತಂಡ ಬೆಳಿಗ್ಗೆ 9ರಿಂದ ನಗರದ ಮರಳೂರಿನಲ್ಲಿರುವ ಸಿದ್ಧಾರ್ಥ ಎಂಜಿನಿಯರಿಂಗ್ ಕಾಲೇಜು, ಹೆಗ್ಗೆರೆ ಸಿದ್ಧಾರ್ಥ ವೈದ್ಯಕೀಯ ಕಾಲೇಜು, ಸರಸ್ವತಿಪುರದ ಸಿದ್ಧಾರ್ಥ ಪದವಿ ಕಾಲೇಜು ಮತ್ತುಸಿದ್ಧಾರ್ಥ ನಗರದ ಪರಮೇಶ್ವರ ಅವರ ಮನೆ ಮೇಲೆ ಏಕಕಾಲಕ್ಕೆ ದಾಳಿ ನಡೆಯಿತು. ಬೆಂಗಳೂರಿನ ಸದಾಶಿವ ನಗರದಲ್ಲಿರುವ ಅವರ ಮನೆಯನ್ನೂ ಶೋಧಿಸಲಾಯಿತು.

ವೈದ್ಯಕೀಯ ಕಾಲೇಜಿನ ಬೋಧಕ ಸಿಬ್ಬಂದಿ ವೇತನ ದಾಖಲಾತಿಗಳನ್ನು ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದೆ. ಸಿದ್ಧಾರ್ಥ ಸ್ವಾಯತ್ತ ಶಿಕ್ಷಣ ಸಂಸ್ಥೆಯ (ಡೀಮ್ಡ್ ವಿವಿ) ಕುಲಸಚಿವ ಕುರಿಯನ್, ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಶ್ರೀನಿವಾಸಮೂರ್ತಿ ಅವರನ್ನೂ ವಿಚಾರಣೆಗೆ ಒಳಪಡಿಸಲಾಗಿತ್ತು.

ಕೋಲಾರ ವರದಿ: ನಗರದ ಹೊರವಲಯದ ಟಮಕ ಬಳಿಯಿರುವ ಕೇಂದ್ರದ ಮಾಜಿ ಸಚಿವ ಆರ್.ಎಲ್.ಜಾಲಪ್ಪ ಅವರ ಒಡೆತನದ ಆಸ್ಪತ್ರೆ, ವೈದ್ಯಕೀಯ ಕಾಲೇಜು ಹಾಗೂ ಶಿಕ್ಷಣ ಸಂಸ್ಥೆಗಳ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಪತ್ರಗಳನ್ನು ಆದಾಯ ತೆರಿಗೆ ಅಧಿಕಾರಿಗಳು ಪರಿಶೀಲಿಸಿದರು.

ಬೆಳಗಿನ ಜಾವ 5 ಗಂಟೆ ಸುಮಾರಿಗೆ ಖಾಸಗಿ ಕಾರುಗಳಲ್ಲಿ ಬೆಂಗಳೂರಿನಿಂದ ಬಂದ 10ಕ್ಕೂ ಹೆಚ್ಚು ಅಧಿಕಾರಿಗಳು ಇಡೀ ದಿನ ಪರಿಶೀಲನೆ ಮಾಡಿದರು. ಇದೇ ವೇಳೆಸಂಸ್ಥೆಯ ಕೆಲ ಸಿಬ್ಬಂದಿಯ ವಿಚಾರಣೆ ನಡೆಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿರುವ ಜಾಲಪ್ಪ ಅವರ ಪುತ್ರ ರಾಜೇಂದ್ರ ಅವರ ನಿವಾಸ ಮತ್ತು ಕಚೇರಿ ಮೇಲೂ ಐ.ಟಿ ದಾಳಿ ನಡೆಯಿತು. ರಾಜೇಂದ್ರ ಅವರ ನಿವಾಸದಲ್ಲಿ ಪತ್ತೆಯಾದ ಕೋಲಾರ ಅತಿಥಿ ಗೃಹದಲ್ಲಿನ ಲಾಕರ್‌ಗಳ ಕೀಗಳನ್ನು ಅಧಿಕಾರಿಗಳು ವಶಕ್ಕೆ ತೆಗೆದುಕೊಂಡರು. ಆನಂತರ, ಆ ಕೀಗಳೊಂದಿಗೆ ಕೋಲಾರಕ್ಕೆ ಬಂದ ಅಧಿಕಾರಿಗಳು ಅತಿಥಿಗೃಹದಲ್ಲಿನ ಲಾಕರ್‌ಗಳನ್ನು ತೆರೆದು ಪರಿಶೀಲಿಸಿದರು.

ಚಿಕ್ಕಬಳ್ಳಾಪುರ ವರದಿ: ಇಲ್ಲಿನ ಪ್ರಶಾಂತ್ ನಗರದಲ್ಲಿರುವ ಜಾಲಪ್ಪ ಅವರ ಸೋದರಳಿಯ, ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಯ ಕಾರ್ಯದರ್ಶಿಯೂ ಆಗಿರುವ ಜಿ.ಎಚ್.ನಾಗರಾಜ್ ಅವರ ಮನೆಯನ್ನೂ ಶೋಧಿಸಲಾಯಿತು.

ಮೂರು ವಾಹನಗಳಲ್ಲಿ ಬಂದಿದ್ದ ಅಧಿಕಾರಿಗಳ ತಂಡ ಸಂಜೆವರೆಗೂಹಣಕಾಸು ವ್ಯವಹಾರ, ಆಸ್ತಿ, ಆದಾಯ, ತೆರಿಗೆ ಪಾವತಿಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಕಲೆ ಹಾಕುವ ಕಾರ್ಯ ಮುಂದುವರಿಸಿತ್ತು.

ನಾಗರಾಜ್ ಕುಟುಂಬದವರು ಮನೆಯಲ್ಲಿದ್ದ ಬೀರು, ಲಾಕರ್‌ಗಳನ್ನು ತೆರೆಯಲು ಸಹಕಾರ ನೀಡದಿದ್ದಾಗ ಮಧ್ಯಾಹ್ನ 12.15ರ ಸುಮಾರಿಗೆ ಅಧಿಕಾರಿಗಳು ಬೀಗ ರಿಪೇರಿ ಮಾಡುವ ವ್ಯಕ್ತಿಯೊಬ್ಬನನ್ನು ಮನೆಗೆ ಕರೆಸಿ ಬೀಗ ತೆಗೆಸಿದರು ಎನ್ನಲಾಗಿದೆ.

ಸೀಟು ಮಾರಾಟ ದಂಧೆ ಹೇಗೆ?
ರಾಜ್ಯದ ಕೆಲವು ಖಾಸಗಿ ವೈದ್ಯಕೀಯ ಕಾಲೇಜುಗಳು ಸರ್ಕಾರಿ ಕೋಟಾದ ಸೀಟುಗಳನ್ನು ಜಾಣತನದಿಂದ ತಡೆಹಿಡಿದು, ಬಳಿಕ ಅವುಗಳನ್ನು ಕೋಟಿಗಟ್ಟಲೆ ಹಣಕ್ಕೆಮಾರಾಟ ಮಾಡುತ್ತಿರುವ ಜಾಲದ ಕುರಿತಂತೆ ಈಗಾಗಲೇ ಶಂಕೆಗಳಿದ್ದವು. ಐ.ಟಿ ದಾಳಿ ಇದನ್ನು ಪುಷ್ಟೀಕರಿಸಿದೆ.

‘ನೀಟ್‌’ನಲ್ಲಿ ಉತ್ತಮ ರ‍್ಯಾಂಕ್‌ ಗಳಿಸಿದ ವಿದ್ಯಾರ್ಥಿಯೊಬ್ಬ ಯಾವುದೋ ರಾಜ್ಯದಸರ್ಕಾರಿ ಕಾಲೇಜಿಗೆ ಸೇರಿರುತ್ತಾನೆ. ದಲ್ಲಾಳಿ ಆತನ ನಕಲಿ ದಾಖಲೆ ಬಳಸಿಕೊಂಡು ರಾಜ್ಯದ ಖಾಸಗಿ ವೈದ್ಯಕೀಯ ಕಾಲೇಜಿನಲ್ಲೂ ಸೀಟಿಗಾಗಿ ಅರ್ಜಿ ಸಲ್ಲಿಸುವಂತೆ ನೋಡಿಕೊಳ್ಳುತ್ತಾನೆ.

ಭಾರತೀಯ ವೈದ್ಯಕೀಯ ಮಂಡಳಿಗೆ (ಎಂಸಿಐ) ಅಥವಾ ವಿಶ್ವವಿದ್ಯಾಲಯಕ್ಕೆ ಅಂತಿಮ ಪಟ್ಟಿ ಸಲ್ಲಿಸುವ ದಿನ ವಿದ್ಯಾರ್ಥಿ ಯಾವುದೋ ಕಾರಣಕ್ಕೆ ತನಗೆ ಈ ಸೀಟು ಬೇಡ ಎಂದು ಕಾಲೇಜು ಆಡಳಿತ ಮಂಡಳಿಗೆ ಲಿಖಿತವಾಗಿ ತಿಳಿಸುತ್ತಾನೆ. ಆ ಹಂತದಲ್ಲಿ ರಾಜ್ಯ ಸರ್ಕಾರಕ್ಕೆ ಕೌನ್ಸೆಲಿಂಗ್‌ ನಡೆಸಿ ಬದಲಿ ವಿದ್ಯಾರ್ಥಿಗೆ ಸೀಟು ಕೊಡಲು ಸಾಧ್ಯವೇ ಇಲ್ಲ. ಹೀಗೆ ಉಳಿಯುವ ಸೀಟನ್ನು ಕಾಲೇಜು ಆಡಳಿತ ಮಂಡಳಿ ₹1.30 ಕೋಟಿಯಿಂದ ₹ 1.50 ಕೋಟಿಗೆ ಬೇರೊಬ್ಬ ವಿದ್ಯಾರ್ಥಿಗೆ ಮಾರಾಟ ಮಾಡುತ್ತದೆ ಎಂದು ಹೇಳಲಾಗುತ್ತದೆ.

*
ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳುಡಾ. ಜಿ. ಪರಮೇಶ್ವರ ಅವರ ಮನೆ, ಕಾಲೇಜುಗಳ ಮೇಲೆ ದಾಳಿ ನಡೆಸಿದ್ದು ಖಂಡನೀಯ
-ಎಚ್‌. ಡಿ. ದೇವೇಗೌಡ, ಜೆಡಿಎಸ್‌ ವರಿಷ್ಠ

*
ಕಾಂಗ್ರೆಸ್ ನಾಯಕರನ್ನೇ ಗುರಿಯಾಗಿಟ್ಟು ಐಟಿ ಇಲಾಖೆ ನಡೆಸುತ್ತಿರುವ ದಾಳಿಗಳ ಹಿಂದೆ ರಾಜಕೀಯ ದುರುದ್ದೇಶ ಇದೆ. ಇದಕ್ಕೆ ನಾವು ಜಗ್ಗುವುದಿಲ್ಲ.
-ಸಿದ್ದರಾಮಯ್ಯ, ವಿಧಾನಸಭೆ ವಿರೋಧ ಪಕ್ಷದ ನಾಯಕ

*
ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ದಾಳಿ ನಡೆಸಿದರೆ ಯಾವುದೇ ತೊಂದರೆ ಇಲ್ಲ. ಎಲ್ಲಾ ದಾಖಲೆ ಪರಿಶೀಲಿಸಲಿ, ಅವರ ಸಲಹೆಯಂತೆ ನಡೆದುಕೊಳ್ಳುತ್ತೇವೆ.
-ಡಾ. ಜಿ. ಪರಮೇಶ್ವರ, ಕಾಂಗ್ರೆಸ್‌ ಶಾಸಕ

*
ನಿರ್ದಿಷ್ಟ ಪಕ್ಷ, ನಾಯಕರ ವಿರುದ್ಧ ರಾಜಕೀಯ ದುರುದ್ದೇಶದಿಂದ ಐಟಿ, ಇ.ಡಿಯಂತಹ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ.
-ಮಲ್ಲಿಕಾರ್ಜುನ ಖರ್ಗೆ, ಹಿರಿಯ ಕಾಂಗ್ರೆಸ್‌ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.