ADVERTISEMENT

ರಿಜ್ವಾನ್‌ ಆಪ್ತರ ಮನೆ ಮೇಲೆ ಐ.ಟಿ ದಾಳಿ

ಸಚಿವ ಪುಟ್ಟರಾಜು ಅವರ ಮೈಸೂರು ಮನೆಯಲ್ಲೂ ಶೋಧ

​ಪ್ರಜಾವಾಣಿ ವಾರ್ತೆ
Published 3 ಮೇ 2019, 14:11 IST
Last Updated 3 ಮೇ 2019, 14:11 IST
ರಿಜ್ವಾನ್‌ ಅರ್ಷದ್‌
ರಿಜ್ವಾನ್‌ ಅರ್ಷದ್‌   

ಬೆಂಗಳೂರು/ ಮೈಸೂರು: ರಾಜ್ಯದಲ್ಲಿ ಆದಾಯ ತೆರಿಗೆ (ಐ.ಟಿ) ಇಲಾಖೆ ದಾಳಿಗಳು ಮುಂದುವರಿದಿದ್ದು, ಸಣ್ಣ ನೀರಾವರಿ ಸಚಿವ ಸಿ.ಎಸ್‌. ಪುಟ್ಟರಾಜು ಮತ್ತು ಬೆಂಗಳೂರು ಸೆಂಟ್ರಲ್‌ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಿಜ್ವಾನ್‌ ಅರ್ಷದ್‌ ಅವರಿಗೆ ಆಪ್ತರಾದ ಮೂವರು ಉದ್ಯಮಿಗಳ ಮನೆ– ಕಚೇರಿಗಳನ್ನು ಶೋಧಿಸಲಾಗಿದೆ.

‘ಮೈಸೂರು ಯಾದವಗಿರಿಯ ಅಪಾರ್ಟ್‌ಮೆಂಟ್‌ನಲ್ಲಿರುವ ಪುಟ್ಟರಾಜು ಅವರ ಫ್ಲ್ಯಾಟ್‌ ಅನ್ನು 12 ಅಧಿಕಾರಿಗಳ ತಂಡ ಎರಡು ಗಂಟೆ ಶೋಧಿಸಿತು. ಆ ಸಮಯದಲ್ಲಿ ಅಡುಗೆ ಭಟ್ಟ ಚಿಕ್ಕಣ್ಣ ಮಾತ್ರ ಇದ್ದರು.ಹಣ, ಆಭರಣಗಳನ್ನು ಎಲ್ಲಿದೆ ತೋರಿಸು ಎಂದು ತಂಡ ಒತ್ತಾಯಿಸಿದೆ’ ಎಂದು ಸ್ವತಃ ಪುಟ್ಟರಾಜು ‘ಪ್ರಜಾವಾಣಿ’ಗೆ ತಿಳಿಸಿದರು. ಆದರೆ, ಸಚಿವರ ಸಂಬಂಧಿಕರ ಮನೆಯನ್ನು ಮಾತ್ರ ಹುಡುಕಾಡಲಾಗಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

‘ಮಧ್ಯಾಹ್ನ 2.30ರ ಸುಮಾರಿಗೆ ಬಂದಿದ್ದ ಐ.ಟಿ ತಂಡ ಸಂಜೆ 4.30 ವರೆಗೂ ಮನೆಯನ್ನು ಜಾಲಾಡಿದೆ. ಕೋರ್ಟ್‌ ವಾರಂಟ್‌ ಪಡೆಯದೆ ಮನೆಗೆ ನುಗ್ಗಲಾಗಿದೆ. ಮನೆಯನ್ನು ಶೋಧಿಸುವ ವಿಚಾರವನ್ನು ನನಗೂ ತಿಳಿಸಲಿಲ್ಲ. ಅಕಸ್ಮಾತ್‌ ಐ.ಟಿ ಅಧಿಕಾರಿಗಳೇ ಹಣ ತಂದಿಟ್ಟು ನಮ್ಮ ಮನೆಯಲ್ಲಿ ಸಿಕ್ಕಿದೆ ಎಂದು ಹೇಳಿದರೆ ಏನು ಮಾಡುವುದು?’ ಎಂದು ಪುಟ್ಟರಾಜು ಆತಂಕ ವ್ಯಕ್ತಪಡಿಸಿದರು.

ಉದ್ಯಮಿಗಳ ಮನೆ ಶೋಧ: ಈ ಮಧ್ಯೆ, ಬೆಂಗಳೂರು ಸೆಂಟ್ರಲ್‌ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಿಜ್ವಾನ್‌ ಅರ್ಷದ್‌ ಅವರ ಆಪ್ತರು ಎನ್ನಲಾದ ಅಮಾನುಲ್ಲಾ ಖಾನ್‌, ಕಮಲ್‌ ಪಾಷಾ ಮತ್ತು ನಯೀಜ್ ಖಾನ್‌ ಅವರ ಮನೆ ಮತ್ತು ಕಚೇರಿ ಸೇರಿದಂತೆ ಸುಮಾರು 20 ಸ್ಥಳಗಳ ಮೇಲೆ ಐ.ಟಿ ದಾಳಿ ನಡೆದಿದೆ.

ಅಮಾನುಲ್ಲಾ ಖಾನ್‌ ಮದುವೆ ಮಂಟಪಗಳನ್ನು ಸಿಂಗಾರ ಮಾಡುವ ಗುತ್ತಿಗೆದಾರರು. ಅರಮನೆ ಆವರಣದಲ್ಲಿ ನಡೆದ ಬಿಜೆಪಿ ನಾಯಕ ಜನಾರ್ದನರೆಡ್ಡಿ ಅವರ ಮಗಳ ಮದುವೆ ಮಂಟಪವನ್ನು ಖಾನ್‌ ಅವರೇ ಸಿಂಗಾರ ಮಾಡಿದ್ದರು ಎನ್ನಲಾಗಿದೆ.

ಕುಕ್ಕುಟೋದ್ಯಮಿ ಕಮಲ್‌ ಪಾಷಾ ಗೋಲ್ಡನ್‌ ಹ್ಯಾಚರಿಸ್‌ ಮಾಲೀಕ. ನಯೀಜ್‌ ಖಾನ್‌ ರಿಯಲ್‌ ಎಸ್ಟೇಟ್‌ ಉದ್ಯಮಿ. ಗುರುವಾರ ಬೆಳಿಗ್ಗೆ 6 ಗಂಟೆಗೆ ಸುಮಾರು 100 ಐ.ಟಿ ಅಧಿಕಾರಿಗಳನ್ನು ಒಳಗೊಂಡ ತಂಡ ವಿವಿಧ ಸ್ಥಳಗಳನ್ನು ಜಾಲಾಡಿತು. ಮೂವರು ಉದ್ಯಮಿಗಳ ಬಳಿ ಹಣ, ಆಭರಣ ಪತ್ತೆಯಾಗಿದೆ. ಆದರೆ, ಎಷ್ಟೆಂದು ನಿಖರವಾಗಿ ಇನ್ನೂ ಅಂದಾಜು ಮಾಡಿಲ್ಲ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.