ADVERTISEMENT

ವೋಟ್‌ ಬ್ಯಾಂಕ್‌ ರಕ್ಷಣೆಗಾಗಿ ವಿಪಕ್ಷಗಳಿಂದ ಟೀಕೆ: ಜಗದೀಶ ಶೆಟ್ಟರ್‌ ಕಿಡಿ

​ಪ್ರಜಾವಾಣಿ ವಾರ್ತೆ
Published 13 ಮೇ 2020, 14:32 IST
Last Updated 13 ಮೇ 2020, 14:32 IST
ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌
ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌    

ಚಿತ್ರದುರ್ಗ: ಕೊರೊನಾ ಸೋಂಕು ನಿಯಂತ್ರಣಕ್ಕೆ ಸರ್ಕಾರ ಕೈಗೊಂಡ ಕ್ರಮಗಳನ್ನು ಕಾಮಾಲೆ ಕಣ್ಣಿಂದ ನೋಡುತ್ತಿರುವ ವಿರೋಧ ಪಕ್ಷಗಳು ವೋಟ್‌ ಬ್ಯಾಂಕ್‌ ರಕ್ಷಣೆಗಾಗಿ ಟೀಕೆ ಮಾಡುತ್ತಿವೆ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಕಿಡಿಕಾರಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೊರೊನಾ ಸೋಂಕಿನಿಂದ ಎದುರಾಗಿರುವ ಸಂಕಷ್ಟ ನಿಭಾಯಿಸಲು ವಿರೋಧ ಪಕ್ಷಗಳು ಸರ್ಕಾರಕ್ಕೆ ರಚನಾತ್ಮಕ ಸಲಹೆ ನೀಡಿ ರಾಜಕೀಯ ಮುತ್ಸದ್ದಿತನ ತೋರಬೇಕಿತ್ತು. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ವಿನಾ ಕಾರಣಕ್ಕೆ ಸರ್ಕಾರದ ನಡೆಯನ್ನು ಟೀಕಿಸುತ್ತಿವೆ. ವಿರೋಧ ಪಕ್ಷಗಳ ಈ ಟೀಕೆಗೆ ಅರ್ಥವಿಲ್ಲ’ ಎಂದು ತಿರುಗೇಟು ನೀಡಿದರು.

‘ಕೊರೊನಾ ಸೋಂಕು ರಾಜ್ಯದಲ್ಲಿ ಹೇಗೆ ಹಬ್ಬಿದೆ ಎಂಬುದು ಜನಸಾಮಾನ್ಯರಿಗೂ ಗೊತ್ತಿದೆ. ತಬ್ಲಿಗಿ ಜಮಾತ್‌ನಲ್ಲಿ ಪಾಲ್ಗೊಂಡು ರಾಜ್ಯಕ್ಕೆ ಹಿಂದಿರುಗಿದವರಿಂದ ಶೇ 70ರಷ್ಟು ಸೋಂಕು ಅಂಟಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಶಾಸಕ ಎಚ್‌.ಡಿ.ಕುಮಾರಸ್ವಾಮಿ ವಾಸ್ತವ ಅರಿಯದೇ, ಸಾರ್ವಜನಿಕರ ಅಭಿಪ್ರಾಯ ಆಲಿಸದೇ ಮಾತನಾಡುತ್ತಿದ್ದಾರೆ’ ಎಂದು ಅಸಮಾಧಾನ ಹೊರಹಾಕಿದರು.

ADVERTISEMENT

‘ಸೋಂಕು ನಿಯಂತ್ರಣದಲ್ಲಿ ರಾಜ್ಯ ಯಶಸ್ವಿ ಹೆಜ್ಜೆಗಳನ್ನು ಇಟ್ಟಿದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತವಾಗಿದೆ. ಇದನ್ನು ಸಹಿಸಲು ಸಾಧ್ಯವಾಗದ ವಿರೋಧ ಪಕ್ಷದ ನಾಯಕರು ಟೀಕೆ ಮಾಡುತ್ತಿದ್ದಾರೆ. ಕಣ್ಣಿನ ಮುಂದಿರುವ ಕೋಮುವಾದದ ಪರದೆ ಸರಿಸಿ ನೋಡಿ. ಆಗ ಎಲ್ಲವೂ ಅರ್ಥವಾಗಲಿದೆ’ ಎಂದು ಹೇಳಿದರು.

‘ಚೀನಾ ದೇಶದಿಂದ ಹೊರಬರುವ ಕಂಪನಿಗಳಿಗೆ ರಾಜ್ಯದಲ್ಲಿ ನೆಲೆ ಕಲ್ಪಿಸುವ ಪ್ರಯತ್ನ ನಡೆಯುತ್ತಿದೆ. ಇದರಿಂದ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಬರೋಬ್ಬರಿ ₹ 20 ಲಕ್ಷ ಕೋಟಿ ಮೊತ್ತದ ಆರ್ಥಿಕ ಪ್ಯಾಕೇಜ್‌ ಘೋಷಣೆ ಮಾಡಿ ಜನರ ಆತಂಕ ದೂರ ಮಾಡಿದ್ದಾರೆ. ಇದನ್ನೂ ಟೀಕಿಸುವವರು ವಿರೋಧ ಪಕ್ಷದಲ್ಲಿ ಕೂರಲು ಯೋಗ್ಯರಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.