ADVERTISEMENT

ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ಪಾದಯಾತ್ರೆ

ಧರ್ಮ ಹೋರಾಟಕ್ಕೆ ಮತ್ತೆ ಹುರುಪು ತುಂಬಲು ಶೀಘ್ರದಲ್ಲೇ ಸಭೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2018, 5:30 IST
Last Updated 20 ಅಕ್ಟೋಬರ್ 2018, 5:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ವಿಧಾನಸಭಾ ಚುನಾವಣೆಯ ನಂತರ ನಿಸ್ತೇಜಗೊಂಡಿರುವ ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಯ ಹೋರಾಟಕ್ಕೆ ಮತ್ತೆ ಹುರುಪು ತುಂಬಲು ಜಾಗತಿಕ ಲಿಂಗಾಯತ ಮಹಾಸಭಾ ಸಭಾ ಸಜ್ಜಾಗಿದೆ.

ಈ ನಿಟ್ಟಿನಲ್ಲಿ ಮುಂದಿನ ಹೆಜ್ಜೆಗಳ ಕುರಿತು ಚಿಂತನ ಮಂಥನ ನಡೆಸಲು ವಿವಿಧ ಮಠಾಧೀಶರು ಮತ್ತು ಲಿಂಗಾಯತ ಚಳವಳಿಯ ಮುಂಚೂಣಿ ನಾಯಕರು ಮುಂದಿನ ವಾರ ಬೆಂಗಳೂರಿನಲ್ಲಿ ಸಭೆ ಸೇರಲು ನಿರ್ಧರಿಸಿದ್ದಾರೆ.

ಈ ಸಭೆಯಲ್ಲಿ ಚಿತ್ರದುರ್ಗದ ಮುರುಘಾ ಶರಣರು, ಗದಗದ ಡಂಬಳಮಠದ ತೋಂಟದಾರ್ಯ ಶ್ರೀಗಳು, ಭಾಲ್ಕಿ ಹಿರೇಮಠದ ಶ್ರೀಗಳು, ಬೆಳಗಾವಿಯ ರುದ್ರಾಕ್ಷಿ ಮಠದ ನಾಗನೂರು ಶ್ರೀಗಳು, ಕೂಡಲ ಸಂಗಮದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ಬಸವ ಧರ್ಮ ಪೀಠದ ಮಾತೆ ಮಹಾದೇವಿ ಭಾಗವಹಿಸಲಿದ್ದಾರೆ ಎಂದು ಮಹಾಸಭಾ ಸಭಾದ ಮೂಲಗಳು ತಿಳಿಸಿವೆ.

ADVERTISEMENT

‘ಹೋರಾಟದ ಮುಂದಿನ ಸ್ವರೂಪವಾಗಿ ರಾಜ್ಯದಲ್ಲಿ ಲಿಂಗಾಯತರ ಪ್ರಾಬಲ್ಯ ಇರುವ ಮಧ್ಯ ಕರ್ನಾಟಕ, ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕದ 25ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಶಾಸಕ ಎಂ.ಬಿ.ಪಾಟೀಲ ನೇತೃತ್ವದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳುವ ಬಗ್ಗೆ ಈ ಸಭೆ ಚರ್ಚೆ ನಡೆಯಲಿದೆ. ಚಾಮರಾಜನಗರದಿಂದ ಬೀದರ್‌ವರೆಗೆ ಪಾದಯಾತ್ರೆ ನಡೆಸುವ ಚಿಂತನೆ ಇದೆ’ ಎಂದೂ ಮೂಲಗಳು ಹೇಳಿವೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಮಹಾ ಸಭಾದ ಪ್ರಧಾನ ಕಾರ್ಯದರ್ಶಿ ಜಿ.ಬಿ‌.ಪಾಟೀಲ, ‘ಸಭೆಯಲ್ಲಿ ಪಾದಯಾತ್ರೆಯ ರೂಪುರೇಷೆಗಳ ಕುರಿತು ಚರ್ಚೆ ನಡೆಯಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.