ADVERTISEMENT

ಭಿನ್ನ ಧ್ವನಿ ಹತ್ತಿಕ್ಕಲು ಪತ್ರಕರ್ತರ ಮೇಲೆ ದಾಳಿ: ಜಾಗೃತ ನಾಗರಿಕರು ಸಂಘಟನೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2023, 16:02 IST
Last Updated 3 ಅಕ್ಟೋಬರ್ 2023, 16:02 IST
<div class="paragraphs"><p>News Click</p></div>

News Click

   

ಬೆಂಗಳೂರು: ‘ದೆಹಲಿ ಪೊಲೀಸರು ಹಲವು ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರ ಮನೆಗಳಿಗೆ ನುಗ್ಗಿ ಅವರ ಲ್ಯಾಪ್‌ಟಾಪ್‌, ಮೊಬೈಲ್‌, ಹಾರ್ಡ್‌ ಡಿಸ್ಕ್‌ಗಳನ್ನು ವಶಕ್ಕೆ ತೆಗೆದುಕೊಂಡು ಇಬ್ಬರು ಪತ್ರಕರ್ತರನ್ನು ವಶಕ್ಕೆ ಪಡೆದಿರುವುದು ಖಂಡನೀಯ’ ಎಂದು ‘ಜಾಗೃತ ನಾಗರಿಕರು ಕರ್ನಾಟಕ’ ಸಂಘಟನೆ ಹೇಳಿದೆ.

ಈ ಕುರಿತ ಹೇಳಿಕೆಗೆ ಕೆ.ಮರುಳಸಿದ್ದಪ್ಪ, ಜಿ.ರಾಮಕೃಷ್ಣ, ಎಸ್‌.ಜಿ.ಸಿದ್ದರಾಮಯ್ಯ, ವಿಜಯಾ, ರಾಜೇಂದ್ರ ಚೆನ್ನಿ, ಬಂಜಗೆರೆ ಜಯಪ್ರಕಾಶ, ಬಿ.ಶ್ರೀಪಾದ ಭಟ್, ವಿಮಲಾ ಕೆ.ಎಸ್‌, ಮೀನಾಕ್ಷಿ ಬಾಳಿ, ಎನ್‌.ಗಾಯತ್ರಿ, ಟಿ.ಸುರೇಂದ್ರರಾವ್‌, ಡಾ.ವಸುಂಧರಾ ಭೂಪತಿ, ಎನ್‌.ಕೆ.ವಸಂತ ರಾಜ್‌ ಸಹಿ ಮಾಡಿದ್ದಾರೆ.

ADVERTISEMENT

‘ಪ್ರಜಾಪ್ರಭುತ್ವದ ತಾಯ್ನೆಲ ಎಂದು ಬಣ್ಣಿಸಲಾಗುವ ಭಾರತದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಯುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.

‘ನ್ಯೂಸ್‌ಕ್ಲಿಕ್‌’ ವಿರುದ್ಧ ಯುಎಪಿಎ ಅಡಿಯಲ್ಲಿ ಹೊಸ ಪ್ರಕರಣಗಳನ್ನು ದಾಖಲಿಸಿ ಕಚೇರಿಗೆ ಬೀಗ ಹಾಕಲಾಗಿದೆ. ಪತ್ರಕರ್ತ ಊರ್ಮಿಳೇಶ್‌ ಅವರನ್ನು ವಶಕ್ಕೆ ಪಡೆಯಲಾಗಿದೆ. ಪತ್ರಕರ್ತರಾದ ಪರಂಜಯ್‌ ಗುಹಾ ಠಾಕುರ್ತಾ, ಅಭಿಸಾರ್‌ ಶರ್ಮಾ, ಆನಂದ್ಯ ಚಕ್ರವರ್ತಿ, ಭಾಷಾ ಸಿಂಗ್‌, ವಿಡಂಬನಕಾರ ಸಂಜಯ್ ರಾಜೌರಾ, ಸಾಮಾಜಿಕ ಹೋರಾಟಗಾರ, ಚರಿತ್ರಕಾರ ಸೋಹೈಲ್‌ ಹಷ್ಮಿ ಅವರು ದಾಳಿಗೆ ಗುರಿಯಾಗಿದ್ದಾರೆ. ಇದು ಭಿನ್ನ ಅಭಿಪ್ರಾಯಗಳನ್ನು ಹೊಂದಿರುವ ವ್ಯಕ್ತಿಗಳ ಧ್ವನಿ ಅಡಗಿಸುವ ಹುನ್ನಾರವಲ್ಲದೇ ಮತ್ತೇನೂ ಅಲ್ಲ ಎಂದು ಜಾಗೃತ ನಾಗರಿಕರು ಕರ್ನಾಟಕ ಹೇಳಿದೆ.

‘ಸ್ವಾವಲಂಬಿ ಜನಕೇಂದ್ರಿತ ಅಭಿವೃದ್ಧಿಯನ್ನು ಪ್ರತಿಪಾದಿಸುವ ಪ್ರಬೀರ್‌ ಪುರಕಾಯಸ್ಥ, ವಿಜ್ಞಾನ ಚಳವಳಿಯ ಕಾರ್ಯಕರ್ತ ರಘುನಂದನ್‌ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಇಂತಹವರ ಧ್ವನಿ ಅಡಗಿಸಲು ನಡೆಸಿರುವ ನಿರಂತರ ಪ್ರಯತ್ನವನ್ನು ನಾವು ವಿರೋಧಿಸುತ್ತೇವೆ’ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.