ಜಾತಿ ಗಣತಿ–ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಮುಸ್ಲಿಂ ಸಮುದಾಯದವರು ‘ಇಸ್ಲಾಂ’ ಧರ್ಮದ ಅಡಿಯಲ್ಲಿ ತಮ್ಮನ್ನು ‘ಮುಸ್ಲಿಂ’ ಜಾತಿ ಎಂದು ಗುರುತಿಸಿಕೊಳ್ಳಬೇಕು’ ಎಂದು ಸಮುದಾಯದ ನಾಯಕರು ಮನವಿ ಮಾಡಿದ್ದಾರೆ.
ಅಲ್ಪಸಂಖ್ಯಾತ ಕಲ್ಯಾಣ ಸಚಿವ ಬಿ. ಝೆಡ್. ಜಮೀರ್ ಅಹಮದ್ ಖಾನ್ ಅಧ್ಯಕ್ಷತೆಯಲ್ಲಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ.
ಪೌರಾಡಳಿತ ಸಚಿವ ರಹೀಂ ಖಾನ್, ಪರಿಷತ್‌ನ ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹಮದ್, ನಸೀರ್ ಅಹ್ಮದ್, ನಿವೃತ್ತ ಐಎಎಸ್ ಅಧಿಕಾರಿ ಎಲ್.ಕೆ. ಅತೀಕ್, ಶಾಸಕ ಯಾಸಿರ್ ಅಹ್ಮದ್ ಖಾನ್ ಪಠಾಣ್, ಬೆಂಗಳೂರು ಜಾಮಿಯಾ ಮಸೀದಿಯ ಇಮಾಮ್ ಮೌಲಾನಾ ಮಕ್ಸೂದ್ ಇಮ್ರಾನ್ ರಶಾದಿ ಸಭೆಯಲ್ಲಿದ್ದರು.
ಸಭೆಯ ಕುರಿತು ಪ್ರತಿಕ್ರಿಯಿಸಿದ ಸಲೀಂ ಅಹಮದ್, ‘ರಾಜ್ಯದಾದ್ಯಂತ ನಡೆಯಲಿರುವ ಈ ಸಮೀಕ್ಷೆಯಲ್ಲಿ ಎಲ್ಲ ಸಮುದಾಯದವರೂ ಭಾಗವಹಿಸಬೇಕು. ನಮ್ಮ ಸಮುದಾಯದವರು ‘ಇಸ್ಲಾಂ’ ಅನ್ನು ಧರ್ಮವಾಗಿ, ‘ಮುಸ್ಲಿಂ’ ಅನ್ನು ಜಾತಿಯಾಗಿ ಮತ್ತು ಅನ್ವಯವಾಗುವ ಎಲ್ಲ ಕಡೆ ತಮ್ಮ ಉಪಜಾತಿಯನ್ನು ನಮೂದಿಸಲು ತೀರ್ಮಾನಿಸಲಾಯಿತು’ ಎಂದರು.
‘ಮುಸ್ಲಿಮರು ಉಪಜಾತಿಗಳನ್ನು ನಮೂದಿಸಬೇಕು. ಏಕೆಂದರೆ, ಈ ಉಪಜಾತಿಗಳು ವೃತ್ತಿ ಆಧಾರಿತ ಆಗಿವೆ. ಪ್ರವರ್ಗದ 1ರಲ್ಲಿ ಇರುವ ಮುಸ್ಲಿಮರು ತಮ್ಮ ಉಪಜಾತಿಯನ್ನು ನಮೂದಿಸದಿದ್ದರೆ ಅಂಥ ಜಾತಿಗಳು ಪ್ರವರ್ಗ 2ಬಿ ಅಡಿಗೆ ಬರಬಹುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.