ADVERTISEMENT

ಕಾಂಗ್ರೆಸ್‌ಗೆ ‘ಕೈ’ ಚಿಹ್ನೆ ಕೊಟ್ಟಿದ್ದು ಜೈನ ಮುನಿ: ಲಕ್ಷ್ಮಣ ಸವದಿ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2025, 14:34 IST
Last Updated 10 ಮಾರ್ಚ್ 2025, 14:34 IST
<div class="paragraphs"><p>ಲಕ್ಷ್ಮಣ ಸವದಿ</p></div>

ಲಕ್ಷ್ಮಣ ಸವದಿ

   

ಬೆಂಗಳೂರು: ಕಾಂಗ್ರೆಸ್‌ಗೆ ‘ಹಸ್ತ’ದ ಚಿಹ್ನೆಯನ್ನೇ ಬಳಸುವಂತೆ ಇಂದಿರಾಗಾಂಧಿಯವರಿಗೆ ಸೂಚಿಸಿದವರು ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಜೈನ ಮುನಿ ವಿದ್ಯಾನಂದ ಮಹಾಮುನಿಗಳು ಎಂದು ಕಾಂಗ್ರೆಸ್‌ ಶಾಸಕ ಲಕ್ಷ್ಮಣ ಸವದಿ ಹೇಳಿದರು.

ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ಗೆ ಹಸು ಕರು ಚಿಹ್ನೆ ಮುಂದುವರಿಸುವುದು ಬೇಡ, ಹಸ್ತ ಇಟ್ಟುಕೊಳ್ಳಿ; ಪಕ್ಷ ಅಭಿವೃದ್ಧಿ ಹೊಂದುತ್ತದೆ ಎಂದು ಸಲಹೆ ನೀಡಿದ್ದರು. ಇಂದಿರಾಗಾಂಧಿ ಅದನ್ನು ಪಾಲಿಸಿದರು ಎಂದು ತಿಳಿಸಿದರು. 

ADVERTISEMENT

ಅಲ್ಪಸಂಖ್ಯಾತರಲ್ಲೇ ಅತಿ ಕಡಿಮೆ ಜನ ಸಂಖ್ಯೆ ಇರುವ ಜೈನ ಸಮುದಾಯದ ಅಭಿವೃದ್ಧಿಗೆ ರಾಜ್ಯದಲ್ಲಿ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಜೈನ ಸಮುದಾಯ ಅತ್ಯಂತ ಸಾತ್ವಿಕ ಸಮುದಾಯ. ಈ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಹಾಸ್ಟೆಲ್‌ ಸ್ಥಾಪಿಸಬೇಕು. ಇವರು ಈರುಳ್ಳಿ– ಬೆಳ್ಳುಳ್ಳಿ ಸಹಿತ ಸೇವಿಸುವುದಿಲ್ಲ. ಅವರ ಧಾರ್ಮಿಕ ಆಚರಣೆ ಮತ್ತು ನಂಬಿಕೆಗಳಿಗೆ ಬೆಲೆ ಕೊಡಬೇಕು ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಅವರು, ಜೈನ ಸಮುದಾಯದ ಜನಸಂಖ್ಯೆ ಕುರಿತು ಸಮೀಕ್ಷೆ ಮಾಡಿಸಿದ್ದು, ರಾಜ್ಯದಲ್ಲಿ 20 ಲಕ್ಷ ಜೈನರು ಇದ್ದಾರೆ. ಜೈನರೆಂದರೆ ರಾಜಸ್ಥಾನದಿಂದ ಬಂದವರು ಎಂದುಕೊಳ್ಳಬೇಕಾಗಿಲ್ಲ. ಕನ್ನಡ ಭಾಷಿಕ ಜೈನರೇ ಸುಮಾರು 15 ಲಕ್ಷಕ್ಕೂ ಹೆಚ್ಚು ಇದ್ದಾರೆ ಎಂದರು.

‘ಜಮೀರ್ ಅವರೇ ಅಲ್ಪಸಂಖ್ಯಾತರೆಂದರೆ ಮುಸ್ಲಿಮರು ಮಾತ್ರ ಅಲ್ಲ. ಅವರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿದೆ. ಆದರೆ, ಜೈನ ಮತ್ತು ಬೌದ್ಧರ ಸಂಖ್ಯೆ ಅತ್ಯಂತ ಕಡಿಮೆ. ಇವರಿಗೆ ಹೆಚ್ಚಿನ ನೆರವು ನೀಡಬೇಕು’ ಎಂದು ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ ಅವರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.