ADVERTISEMENT

15 ದಿನ ಕಾಲಾವಕಾಶ ಕೋರಿದ ಜಾಲಿವುಡ್: ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 8:31 IST
Last Updated 8 ಅಕ್ಟೋಬರ್ 2025, 8:31 IST
ರಾಮನಗರ ತಾಲ್ಲೂಕಿನ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಜಾಲಿವುಡ್ ಸ್ಟುಡಿಯೋಸ್ ಆ್ಯಂಡ್ ಅಡ್ವೆಂಚರ್ಸ್ ಪಾರ್ಕ್‌
ರಾಮನಗರ ತಾಲ್ಲೂಕಿನ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಜಾಲಿವುಡ್ ಸ್ಟುಡಿಯೋಸ್ ಆ್ಯಂಡ್ ಅಡ್ವೆಂಚರ್ಸ್ ಪಾರ್ಕ್‌   

ರಾಮನಗರ: ನಿಯಮ ಉಲ್ಲಂಘನೆ ಮೇರೆಗೆ ಬಂದ್ ಆಗಿರುವ ಜಾಲಿವುಡ್ ಸ್ಟುಡಿಯೋಸ್ ಆ್ಯಂಡ್ ಅಡ್ವೆಂಚರ್ಸ್ ಪಾರ್ಕ್ ಆಡಳಿತ ಮಂಡಳಿಯವರು ಬುಧವಾರ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ, ಬೀಗಮುದ್ರೆ ತೆಗೆಯುವಂತೆ ಮನವಿ ಮಾಡಿದರು.

ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರನ್ನು ಭೇಟಿ ಮಾಡಿದ ವ್ಯವಸ್ಥಾಪಕ ಹಾಗೂ ಇತರರು, ತಮ್ಮ ತಪ್ಪು ಸರಿಪಡಿಸಿಕೊಳ್ಳಲು ಹದಿನೈದು ದಿನ ಕಾಲಾವಕಾಶ ನೀಡುವಂತೆ ಕೋರಿದರು.

ಸ್ಟುಡಿಯೋದಲ್ಲಿ 400ಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಿದ್ದಾರೆ. ಜನಪ್ರಿಯ ರಿಯಾಲಿಟಿ ಷೋ ಬಿಗ್ ಬಾಸ್ ಕೂಡ ನಡೆಯುತ್ತಿದೆ. ಸ್ಟುಡಿಯೊಗೆ ಬೀಗ ಹಾಕಿರುವುದರಿಂದ, ಅವರೆಲ್ಲರ ಕೆಲಸಕ್ಕೆ ತೊಂದರೆಯಾಗಲಿದೆ.‌ ಹಾಗಾಗಿ, ಷರತ್ತುಬದ್ದ ಅನುಮತಿ ನೀಡುವಂತೆ ಮನವಿ ಮಾಡಿದರು.

ADVERTISEMENT

ಅದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶವನ್ನು ನಾವು ಪಾಲಿಸಿದ್ದೇವೆ. ಹಾಗಾಗಿ, ಮಂಡಳಿಗೆ ನೀವು ಮನವಿ ಮಾಡಿ. ಅವರು ‌ನೀಡುವ ಆದೇಶದಂತೆ ನಾವು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು.

ಜಾಲಿವುಡ್‌ಗೆ ಬೀಗ ಬಿದ್ದಿರುವುದರಿಂದ ಬಿಗ್ ಬಾಸ್ ಸ್ಪರ್ಧಿಗಳು ಸಮೀಪದ‌ ಈಗಲ್ಟನ್ ರೆಸಾರ್ಟ್ ನಲ್ಲಿದ್ದು, ಅಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾರೆ.ಜಾಲಿವುಡ್

ಅವಘಡವಾದರೆ ಯಾರು ಹೊಣೆ: ಶಾಸಕ ಬಾಲಕೃಷ್ಣ

ಜಾಲಿವುಡ್ ಸ್ಟುಡಿಯೊದವರು ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ಪಡೆಯದೆ ಮತ್ತು ವಿವಿಧ ನಿಯಮ ಉಲ್ಲಂಘನೆ ಮಾಡಿರುವುದರಿಂದ ಬೀಗಮುದ್ರೆ ಹಾಕಲಾಗಿದೆ. ಇದರಲ್ಲಿ ವೈಯುಕ್ತಿಕವಾದುದು ಏನೂ‌ ಇಲ್ಲ. ಒಂದು ವೇಳೆ ಸ್ಟುಡಿಯೊದಲ್ಲಿ ಏನಾದರೂ ಅವಘಡ ಸಂಭವಿಸಿದರೆ ಯಾರು ಹೊಣೆ? ಜಿಲ್ಲಾಧಿಕಾರಿ ಅದಕ್ಕೆ ತಲೆ ಕೊಡಬೇಕಾಗುತ್ತದೆ. ಹಾಗಾಗಿ, ನಿಯಮ ಉಲ್ಲಂಘನೆ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಥಳೀಯ ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.

ಜಿಲ್ಲಾಧಿಕಾರಿ ಭೇಟಿ ಮಾಡಲು ಬಂದಿದ್ದ ಜಾಲಿವುಡ್ ಆಡಳಿತ ಮಂಡಳಿ ಅಧಿಕಾರಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.