ADVERTISEMENT

ಅರಮನೆಗಷ್ಟೇ ಸೀಮಿತವಾಗಲಿದೆ ಈ ಬಾರಿಯ ಜಂಬೂಸವಾರಿ

ದಸರಾ–2020: ಸಿ.ಎಂ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2020, 18:21 IST
Last Updated 8 ಸೆಪ್ಟೆಂಬರ್ 2020, 18:21 IST
ಜಂಬೂಸವಾರಿ
ಜಂಬೂಸವಾರಿ    

ಬೆಂಗಳೂರು: ಕೋವಿಡ್ ಕಾರಣದಿಂದ ನಾಡಹಬ್ಬ ಮೈಸೂರು ದಸರಾ ಮಹೋತ್ಸವವನ್ನು ಸರಳವಾಗಿ ನಡೆಸಲು ಸರ್ಕಾರ ತೀರ್ಮಾನಿಸಿದೆ. ಐತಿಹಾಸಿಕ ಜಂಬೂ ಸವಾರಿ ಅರಮನೆ ಆವರಣಕ್ಕೆ ಮಾತ್ರ ಸೀಮಿತವಾಗಲಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ದಸರಾ ಮಹೋತ್ಸವ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ, ಚಾಮುಂಡೇಶ್ವರಿ ಬೆಟ್ಟ ಹಾಗೂ ಅರಮನೆ ಆವರಣಕ್ಕೆ ಸೀಮಿತಗೊಳಿಸಿ ಈ ಬಾರಿ ದಸರಾ ಆಚರಣೆಗೆ ತೀರ್ಮಾನಿಸಲಾಗಿದೆ.

ಕೋವಿಡ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ವೈದ್ಯರು, ನರ್ಸ್‍ಗಳು, ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕರು ಹಾಗೂ ಪೊಲೀಸರ ಸಹಯೋಗದಲ್ಲಿ ಐದು ಮಂದಿಯಿಂದ ದಸರಾ ಉದ್ಘಾಟನೆ ನಡೆಯಲಿದೆ.
ಸಭೆಯ ಬಳಿಕ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ, ‘ಚಾಮುಂಡಿ ಬೆಟ್ಟದಲ್ಲಿ ಸಂಪ್ರದಾಯಬದ್ಧ ಪೂಜೆ, ದಸರಾ ಉದ್ಘಾಟನೆ ನಡೆಯಲಿದೆ. ಕೊರೊನಾ ನಿಯಂತ್ರಣವಾಗಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸಲಾಗುವುದು. ಆದರೆ, ಜನಸಂದಣಿಗೆ ಅವಕಾಶವಿಲ್ಲದ ರೀತಿಯಲ್ಲಿ ದಸರಾ ಆಚರಿಸಲು ಸಮಿತಿ ಸೂಚಿಸಿದೆ. ಹೀಗಾಗಿ, ಸಾಂಪ್ರದಾಯಿಕವಾಗಿ ಐದು ಗಜ ಪಡೆಯನ್ನಷ್ಟೇ ಜಂಬೂ ಸವಾರಿಗೆ ಬಳಸಲಾಗುತ್ತದೆ’ ಎಂದರು.

ADVERTISEMENT

‘ಸಾಂಪ್ರದಾಯಿಕ ನೆಲೆಯಲ್ಲಿ ದಸರಾ ಕ್ರೀಡಾ ಜ್ಯೋತಿ ಸ್ವಾಗತ, ಕುಸ್ತಿ ಪಂದ್ಯಾವಳಿ ನಡೆಯಲಿದೆ. ಅರಮನೆಗೆ ಸೀಮಿತವಾಗಿ ರಂಗೋಲಿ ಚಿತ್ತಾರ. ಮನೆ- ಮನೆ ದಸರಾ ಮನೆಗೆ ಸೀಮಿತವಾಗಿ ನಡೆಯುವುದರಿಂದ ಮನೆಯವರಷ್ಟೇ ಆಚರಿಸುವಂತೆ ಮನವಿ ಮಾಡಲಾಗುವುದು’ ಎಂದರು.

‘ಆರೇಳು ತಿಂಗಳುಗಳಿಂದ ಮೈಸೂರು ಜಿಲ್ಲೆಯ ಬಹುತೇಕ ಅಧಿಕಾರಿಗಳು ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ತೊಡಗಿಸಿಕೊಂಡಿ
ದ್ದಾರೆ. ಅವರ ಮೇಲೆ ಹೆಚ್ಚಿನ ಒತ್ತಡ ಹೇರುವುದು ವ್ಯವಸ್ಥೆ ಕುಸಿತಕ್ಕೆ ಕಾರಣವಾಗಬಹುದು ಎಂಬ ಆತಂಕ ಸಭೆಯಲ್ಲಿ ವ್ಯಕ್ತವಾಯಿತು. ಬಂದೋಬಸ್ತಿಗೆ ಬೇರೆ ಜಿಲ್ಲೆಗಳಿಂದ ಪೊಲೀಸರನ್ನು ಕರೆಸಿದರೂ ಸುರಕ್ಷತೆಗೆ ಗಮನ ನೀಡುವುದು ಕಷ್ಟದ ಕೆಲಸ ಎಂಬ ಅಭಿಪ್ರಾಯ ವ್ಯಕ್ತವಾಯಿತು’ ಎಂದರು.

‘ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರ ₹ 5 ಕೋಟಿ ನೀಡಲಿದೆ. ಉಳಿಕೆಯಾದ ಹಣವನ್ನು ಆಸ್ಪತ್ರೆಗೆ ವಿನಿಯೋಗಿಸಬೇಕು ಎಂಬ ಸಲಹೆಯೂ ಇದೆ. ಕಳೆದ ಬಾರಿ ಮುಖ್ಯಮಂತ್ರಿ ₹ 18 ಕೋಟಿ ನೀಡಿದ್ದರು. ಈ ಅನುದಾನದಲ್ಲಿ ₹ 8.40 ಕೋಟಿ ಬಿಡುಗಡೆಯಾಗಬೇಕಿದ್ದು, ಈ ಬಗ್ಗೆ ಆರ್ಥಿಕ ಇಲಾಖೆ ಪರಿಶೀಲಿಸಲಿದೆ. ಬೇರೆಬೇರೆ ಇಲಾಖೆಗಳಿಂದ ಸುಮಾರು ₹ 45 ಕೋಟಿಯಿಂದ ₹ 50 ಕೋಟಿ ಅನುದಾನ ಸಿಗುತ್ತಿತ್ತು’ ಎಂದೂ ವಿವರಿಸಿದರು.

ಮಹತ್ವದ ಕಾರ್ಯಕ್ರಮಗಳೇ ರದ್ದು:ಈ ಬಾರಿ ಯುವ ದಸರಾ, ಯುವ ಸಂಭ್ರಮ, ಚಲನಚಿತ್ರೋತ್ಸವ, ಸಾಹಸ ಕ್ರೀಡೋತ್ಸವ, ಆಹಾರ ಮೇಳ, ವಸ್ತು ಪ್ರದರ್ಶನ, ಫಲಪ್ರದರ್ಶನ, ಮಕ್ಕಳ ದಸರಾ, ಚಿಣ್ಣರ ದಸರಾ, ಮಹಿಳಾ ದಸರಾ, ಮಾರಾಟ ಮೇಳ, ಜಾನಪದ ಸಿರಿ, ಯುವ ದಸರಾ, ಯೋಗ ಸಂಭ್ರಮ, ಯೋಗ ಸರಪಳಿ, ಪಾರಂಪರಿಕ ಉಡುಗೆಯಲ್ಲಿ ಪಾರಂಪರಿಕ ನಡಿಗೆ, ರೈತ ದಸರಾ, ಕ್ರೀಡಾಕೂಟ, ಕವಿಗೋಷ್ಠಿ, ಹಾಸ್ಯೋತ್ಸವ, ಸೂರ್ಯೋದಯದಿಂದ ಸೂರ್ಯಾಸ್ತದವರೆಗಿನ ಸಂಗೀತ ಕಾರ್ಯಕ್ರಮ, ಹೆಲಿರೈಡ್, ಏರ್ ಶೋ, ಚಿತ್ರಸಂತೆ, ಹಾಟ್ ಏರ್‌ಬಲೂನ್, ಮತ್ಸ್ಯಮೇಳ, ಪಂಜಿನ ಕವಾಯಿತು ಇರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.