ADVERTISEMENT

ಜಾಹೀರಾತಿನಲ್ಲಿ ನೆಹರೂ ಚಿತ್ರಕ್ಕೆ ಕೋಕ್: ಸರ್ಕಾರದ ನಡೆಗೆ ಲೇಖಕರ ಖಂಡನೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2022, 19:30 IST
Last Updated 14 ಆಗಸ್ಟ್ 2022, 19:30 IST
ಪಂಡಿತ್‌ ಜವಾಹರ ಲಾಲ್‌ ನೆಹರೂ
ಪಂಡಿತ್‌ ಜವಾಹರ ಲಾಲ್‌ ನೆಹರೂ   

ಬೆಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವ–75’ ಜಾಹೀರಾತು ರಾಜ್ಯ ಸರ್ಕಾರದ ದುರುದ್ದೇಶದ ನಡೆಯಾಗಿದ್ದು, ಪಂಡಿತ್‌ ಜವಾಹರ ಲಾಲ್‌ ನೆಹರೂ ಅವರ ಭಾವಚಿತ್ರ ಹಾಕದೇ ಇರುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕ್ಷಮೆಯಾಚಿಸಬೇಕು ಎಂದು ಲೇಖಕರು, ಚಿಂತಕರು ಆಗ್ರಹಿಸಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.

‘ದೇಶದ ಪ್ರಥಮ ಪ್ರಧಾನಮಂತ್ರಿ, ಸ್ವಾತಂತ್ರ್ಯ ಹೋರಾಟಗಾರ ಜವಾಹರ ಲಾಲ್‌ ನೆಹರೂ ಅವರ ಹೆಸರನ್ನು ಪ್ರಮುಖ ಪಟ್ಟಿಯಿಂದ ಕೈ ಬಿಟ್ಟಿರುವುದು ಆಘಾತಕಾರಿ. ಇತಿಹಾಸವನ್ನು ವರ್ತಮಾನದಲ್ಲಿ ರಚಿಸಬಾರದು ಎನ್ನುವ ಪ್ರಾಥಮಿಕ ಪಾಠವನ್ನು ಸಹ ಕಲಿಯದ ಬಿಜೆಪಿ ಸರ್ಕಾರವು ಸಂಸದೀಯವಲ್ಲದ, ನೋಂದಣಿಯೂ ಆಗಿರದ ಆರೆಸ್ಸೆಸ್ ಸಿದ್ಧಾಂತಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿರುವುದು ಅಸಾಂವಿಧಾನಿಕ. ನೆಹರೂ ಅವರನ್ನು ಇತಿಹಾಸದ ಪುಟಗಳಿಂದ ಅಳಿಸುವಂತಹ ಕೀಳು ಮಟ್ಟದ ರಾಜಕಾರಣಕ್ಕೆ ಸರ್ಕಾರ ಮುಂದಾಗಿರುವುದನ್ನು ಖಂಡಿಸುತ್ತೇವೆ’ ಎಂದಿದ್ದಾರೆ.

ADVERTISEMENT

‘ಸಂವಿಧಾನ ಶಿಲ್ಪಿ ಬಾಬಾ ಸಾಹೇಬ ಅಂಬೇಡ್ಕರ್‌ ಅವರ ಚಿತ್ರವನ್ನು ಕೆಳಗಿನ ಕೊನೆಯ ಸಾಲಿಗೆ ಸೇರಿಸಿ ನಿಮ್ಮೊಳಗಿರುವ ವೈದಿಕಶಾಹಿತನವನ್ನು ಮೆರೆದಿದ್ದೀರಿ. ಅದನ್ನು ಸಹ ಖಂಡಿಸುತ್ತೇವೆ’ ಎಂದಿದ್ದಾರೆ.

‘ಜೈಲಿನಿಂದ ಬಿಡುಗಡೆಯಾದರೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವುದಿಲ್ಲ ಎಂದು ಬ್ರಿಟಿಷರಿಗೆ ಮುಚ್ಚಳಿಕೆ ಬರೆದುಕೊಟ್ಟ ವಿ.ಡಿ. ಸಾವರ್ಕರ್‌ ಅವರನ್ನು ಸ್ವಾತಂತ್ರ್ಯ ಹೋರಾಟಗಾರರ ಸಾಲಿನಲ್ಲಿ ಸೇರಿಸಿದ್ದೂ ಅಲ್ಲದೇ ಅದಕ್ಕೆ ಅಗ್ರಸ್ಥಾನ ಕಲ್ಪಿಸಿರುವುದು ದುರುದ್ದೇಶಪೂರಿತ. ಸಾವರ್ಕರ್‌ ಯಾವ ಮಾನದಂಡಗಳಿಂದಲೂ ಸ್ವಾತಂತ್ರ್ಯ ಹೋರಾಟಗಾರರಲ್ಲ’ ಎಂದಿದ್ದಾರೆ.

‘ಬ್ರಿಟಿಷರ ವಿರುದ್ಧ ಯುದ್ಧ ಮಾಡಿದ ಕರ್ನಾಟಕದ ಮಹನೀಯರ ಪಟ್ಟಿಯಲ್ಲಿ ಟಿಪ್ಪು ಸುಲ್ತಾನ್‌ ಹೆಸರು ಕಣ್ಮರೆಯಾಗಿರುವುದು ಪೂರ್ವಗ್ರಹ ಪೀಡಿತ ದೃಷ್ಟಿಕೋನವೆಂದೇ ಕರೆಯಬೇಕಾಗುತ್ತದೆ.ವಾರ್ತಾ ಇಲಾಖೆ ಗುರುತರ ಅಪರಾಧವನ್ನು ಎಸಗಿದ್ದು ಇಲಾಖೆಯ ಮುಖ್ಯಸ್ಥರೂ ಇದಕ್ಕೆ ಹೊಣೆಗಾರರು. ಈ ಕೂಡಲೇ ಸಾರ್ವಜನಿಕರ ಕ್ಷಮೆ ಯಾಚಿಸಬೇಕು ಎಂದು ಜಾಗೃತ ನಾಗರಿಕರು ಕರ್ನಾಟಕ ವೇದಿಕೆಯ ಮೂಲಕ ಒತ್ತಾಯಿಸುತ್ತೇವೆ’ ಎಂದು ತಿಳಿಸಿದ್ದಾರೆ.

ಕೆ.ಮರುಳಸಿದ್ದಪ್ಪ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ರಾಜೇಂದ್ರ ಚೆನ್ನಿ, ವಿಜಯಾ, ಜಿ‌.ರಾಮಕೃಷ್ಣ, ಬಂಜಗೆರೆ ಜಯಪ್ರಕಾಶ್, ಹಿ.ಶಿ.ರಾಮಚಂದ್ರೇ ಗೌಡ, ಕಾಳೇಗೌಡ ನಾಗವಾರ, ಕೆ.ಎಸ್.ವಿಮಲಾ, ವಸುಂಧರಾ ಭೂಪತಿ, ಬಿ.ಶ್ರೀಪಾದ ಭಟ್, ಎನ್.ಗಾಯತ್ರಿ, ಆರ್.ಪೂರ್ಣಿಮಾ, ಮೀನಾಕ್ಷಿ ಬಾಳಿ, ಕೆ.ನೀಲಾ, ಡಾ.ಪ್ರಭು ಖಾನಾಪುರೆ, ಮಾವಳ್ಳಿ ಶಂಕರ್, ಲಕ್ಷ್ಮಿ ನಾರಾಯಣ ನಾಗವಾರ, ಗೋಪಾಲಕೃಷ್ಣ ಹರಳಹಳ್ಳಿ,ಎನ್.ಆರ್‌.ವಿಶುಕುಮಾರ್, ಇಂದೂಧರ ಹೊನ್ನಾಪುರ, ವಾಸುದೇವ ಉಚ್ಚಿಲ,ಗುರುಪ್ರಸಾದ್ ಕೆರೆಗೋಡು, ರುದ್ರಪ್ಪ ಹನಗವಾಡಿ, ಬಿ.ಟಿ.ಲಲಿತಾ ನಾಯಕ್, ಡಾ‌.ಕೆ.ಷರೀಫಾ, ಟಿ.ಸುರೇಂದ್ರ ರಾವ್ ಮುಂತಾದವರು ಪತ್ರ ಬರೆದಿದ್ದಾರೆ.

ಉದ್ದೇಶ ಪೂರ್ವಕವಲ್ಲ: ಜೋಶಿ ಸಮರ್ಥನೆ
ಹುಬ್ಬಳ್ಳಿ: ‘ರಾಜ್ಯ ಸರಕಾರಿ ಜಾಹೀರಾತಿನಲ್ಲಿ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಭಾವಚಿತ್ರ ಕೈಬಿಟ್ಟಿದ್ದು ಉದ್ದೇಶಪೂರ್ವಕ ಅಲ್ಲ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಮರ್ಥಿಸಿಕೊಂಡಿದ್ದಾರೆ.

ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,‘ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಪತ್ರಿಕೆಗಳಿಗೆ ನೀಡಿದ್ದ ಜಾಹೀರಾತಿನಲ್ಲಿ ನೆಹರೂ ಭಾವಚಿತ್ರ ಇಲ್ಲದಿರುವುದು ಗಮನಿಸಿದ್ದೇನೆ. ಅದು ರಾಜ್ಯ ಸರಕಾರ ನೀಡಿರುವ ಜಾಹೀರಾತು ಆಗಿದ್ದು, ಉದ್ದೇಶಪೂರ್ವಕವಾಗಿ ಹಾಗೆ ಮಾಡಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.