ADVERTISEMENT

‘ಜಯಾ‘ ಬೆಲೆಬಾಳುವ ವಸ್ತು ವಿಲೇವಾರಿ: ವಿಶೇಷ ಪ್ರಾಸಿಕ್ಯೂಟರ್ ನೇಮಕಕ್ಕೆ ನಿರ್ದೇಶನ

ಜಯಲಲಿತಾರ ಬೆಲೆಬಾಳುವ ವಸ್ತು ವಿಲೇವಾರಿಗೆ ಕೋರಿದ ಮನವಿ

​ಪ್ರಜಾವಾಣಿ ವಾರ್ತೆ
Published 25 ಜನವರಿ 2023, 22:13 IST
Last Updated 25 ಜನವರಿ 2023, 22:13 IST
   

ಬೆಂಗಳೂರು: ‘ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಜಯಲಲಿತಾ ಅವರಿಂದ ಜಪ್ತಿ ಮಾಡಲಾಗಿದ್ದ ಬೆಳೆಬಾಳುವ ವಸ್ತುಗಳನ್ನು ವಿಲೇವಾರಿ ಮಾಡಲು ವಿಶೇಷ ಪ್ರಾಸಿಕ್ಯೂಟರ್‌ ನೇಮಿಸಿ’ ಎಂದು ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ರಾಜ್ಯ ಗೃಹ ಇಲಾಖೆಗೆ ನಿರ್ದೇಶಿಸಿದೆ.

ಈ ಸಂಬಂಧ ಮಾಹಿತಿ ಹಕ್ಕು ಕಾರ್ಯಕರ್ತ ಟಿ. ನರಸಿಂಹಮೂರ್ತಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ್ದ ನಗರದ ಪ್ರಧಾನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ರಾಮಚಂದ್ರ ಡಿ.ಹುದ್ದಾರ (ಈಗ ಹೈಕೋರ್ಟ್‌ ನ್ಯಾಯಮೂರ್ತಿ) 2023ರ ಜನವರಿ 17ರಂದು ಈ ಕುರಿತಂತೆ ಆದೇಶಿಸಿದ್ದಾರೆ.

ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರದ ವಿಶೇಷ ಸೆಷನ್ಸ್‌ ನ್ಯಾಯಾಲಯವು ಜಯಲಲಿತಾ ಅವರಿಗೆ ನಾಲ್ಕು ವರ್ಷ ಜೈಲು ಶಿಕ್ಷೆ ಮತ್ತು ₹ 100 ಕೋಟಿ ಮೊತ್ತದ ಬೃಹತ್‌ ದಂಡ ವಿಧಿಸಿ 2014ರ ಸೆಪ್ಟೆಂಬರ್ 27ರಂದು ಆದೇಶಿಸಿತ್ತು. ‘ಜಯಲಲಿತಾ ಅವರಿಗೆ ಸೇರಿದ ಜಪ್ತಿ ಮಾಡಿದ ಬೆಲೆಬಾಳುವ ವಸ್ತುಗಳನ್ನು ಆರ್‌ಬಿಐ, ಎಸ್‌ಬಿಐಗೆ ಅಥವಾ ಸಾರ್ವಜನಿಕ ಹರಾಜು ಮೂಲಕ ಮಾರಾಟ ಮಾಡಬೇಕು. ಅದರಿಂದ ಬಂದ ಹಣವನ್ನು ದಂಡದ ಮೊತ್ತಕ್ಕೆ ಹೊಂದಾಣಿಕೆ ಮಾಡಬೇಕು‘ ಎಂದು ನ್ಯಾಯಾಲಯ ನಿರ್ದೇಶಿಸಿತ್ತು.

ADVERTISEMENT

ಈ ಸಂಬಂಧ ಮಾಹಿತಿ ಕೋರಿ ನರಸಿಂಹ ಮೂರ್ತಿ ಸಕ್ಷಮ ಪ್ರಾಧಿಕಾರದಲ್ಲಿ 2022ರ ಆಗಸ್ಟ್‌ 12ರಂದು ಅರ್ಜಿ ಸಲ್ಲಿಸಿದ್ದರು. ಆದರೆ, ಸಿಟಿ ಸಿವಿಲ್ ಕೋರ್ಟ್ ಮಾಹಿತಿ ಹಕ್ಕು ಅಧಿಕಾರಿ ಈ ಅರ್ಜಿಯನ್ನು 2022ರ ಸೆಪ್ಟೆಂಬರ್ 7ರಂದು ತಿರಸ್ಕರಿಸಿದ್ದರು. ಇದರಿಂದಾಗಿ ಅರ್ಜಿದಾರರು ಪ್ರಥಮ ಮೇಲ್ಮನವಿ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

ಮನವಿಯಲ್ಲೇನಿತ್ತು?: ‘ಜಯಲಲಿತಾ ಅವರಿಗೆ ಸೇರಿದ ವಸ್ತುಗಳನ್ನು ನ್ಯಾಯಾಲಯದ ಸುಪರ್ದಿಯಲ್ಲಿ ಇಟ್ಟುಕೊಳ್ಳುವ ಅಗತ್ಯವಿಲ್ಲ. ಆದ್ದರಿಂದ, ಅವುಗಳನ್ನು ವಿಲೇವಾರಿ ಮಾಡಬೇಕು. ಸಾರ್ವಜನಿಕ ಹರಾಜು ಮೂಲಕ ಮಾರಾಟಕ್ಕೆ ಇಟ್ಟರೆ, ಜಯಲಲಿತಾರ ಬೆಂಬಲಿಗರು ಭಾರಿ ಮೊತ್ತ ಪಾವತಿಸಿ ಖರೀದಿಸುವುದರಲ್ಲಿ ಸಂದೇಹವಿಲ್ಲ‘ ಎಂದು ಮನವಿಯಲ್ಲಿ ವಿವರಿಸಲಾಗಿತ್ತು.

ಜಪ್ತಿಯಾದ ವಸ್ತುಗಳು: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಭ್ರಷ್ಟಾಚಾರ ನಿಗ್ರಹ ಮತ್ತು ವಿಚಕ್ಷಣಾ ದಳದ ಅಧಿಕಾರಿಗಳು 1996ರ ಡಿಸೆಂಬರ್ 11ರಂದು ಚೆನ್ನೈನ ಜಯಲಲಿತಾ ಅವರ ಪೋಯಸ್ ಗಾರ್ಡನ್ ನಿವಾಸದ ಮೇಲೆ ದಾಳಿ ನಡೆಸಿ ಕೋಟ್ಯಂತರ ರೂಪಾಯಿ ಮೌಲ್ಯದ ಬೆಲೆಬಾಳುವ ವಸ್ತುಗಳನ್ನು ಜಪ್ತಿ ಮಾಡಿದ್ದರು.

ಜಪ್ತಿ ಮಾಡಲಾದ ವಸ್ತುಗಳಲ್ಲಿ 7,040 ಗ್ರಾಂ ತೂಕದ 468 ಬಗೆಯ ಚಿನ್ನ ಹಾಗೂ ವಜ್ರಖಚಿತ ಆಭರಣಗಳು, 700 ಕೆ.ಜಿ. ತೂಕದ ಬೆಳ್ಳಿ ಆಭರಣಗಳು, 740 ದುಬಾರಿ ಚಪ್ಪಲಿಗಳು, 11,344 ರೇಷ್ಮೆ ಸೀರೆಗಳು, 250 ಶಾಲು, 12 ರೆಫ್ರಿಜರೇಟರ್, 10 ಟಿ.ವಿ. ಸೆಟ್ , 8 ವಿಸಿಆರ್, 1 ವಿಡಿಯೊ ಕ್ಯಾಮೆರಾ, 4 ಸಿಡಿ ಪ್ಲೇಯರ್, 2 ಆಡಿಯೊ ಡೆಕ್, 24 ಟೂ-ಇನ್ ಒನ್ ರೇಪ್‌ ರೆಕಾರ್ಡರ್, 1,040 ವಿಡಿಯೊ ಕ್ಯಾಸೆಟ್, 3 ಐರನ್ ಲಾಕರ್ ಮತ್ತು ₹ 1.93 ಕೋಟಿ ನಗದು ಸೇರಿ ಹಲವು ವಸ್ತುಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.