
ಮಂಡ್ಯ: ‘ಜೆಡಿಎಸ್- ಬಿಜೆಪಿಯ ಶಕ್ತಿ ಬಗ್ಗೆ ಹಾದಿ ಬೀದಿಯಲ್ಲಿ ಚರ್ಚೆ ಮಾಡುವ ವಿಷಯವಲ್ಲ. ಮೈತ್ರಿ ಶಾಶ್ವತವಾಗಿ ಉಳಿದುಕೊಳ್ಳಬೇಕು ಅನ್ನೋದಿದ್ರೆ ಕುಳಿತು ಚರ್ಚೆ ಮಾಡಿ, ಕುಮಾರಣ್ಣನ ಮನೆ ಬಾಗಿಲು ಯಾವಾಗಲೂ ತೆರೆದಿರುತ್ತೆ’ ಎಂದು ಮಾಜಿ ಸಚಿವ ಕೆ.ಸಿ. ನಾರಾಯಣಗೌಡ ವಿರುದ್ಧ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲ್ಲೂಕಿನ ಸಾತನೂರು ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಶಂಭುಲಿಂಗೇಶ್ವರಸ್ವಾಮಿ ನೂತನ ದೇವಾಲಯದ ಉದ್ಘಾಟನೆ ಮತ್ತು ಕುಂಭಾಭಿಷೇಕ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಬಿಜೆಪಿ ರಾಷ್ಟ್ರೀಯ ಪಕ್ಷ, ಜೆಡಿಎಸ್ ಪ್ರಾದೇಶಿಕ ಪಕ್ಷ. ರಾಷ್ಟ್ರೀಯ ನಾಯಕರು ದೊಡ್ಡ ಮಟ್ಟದಲ್ಲಿ ಚರ್ಚೆ ಮಾಡಿರುವ ವಿಚಾರ. ಎರಡೂ ಪಕ್ಷದ ಕಾರ್ಯಕರ್ತರ ಗೌರವ ಇದು. ಚಿತ್ರದುರ್ಗದಿಂದ ಚಾಮರಾಜನಗರದವರೆಗೆ ಎನ್‌ಡಿಎ ಅಭ್ಯರ್ಥಿಗಳು ಗೆದ್ದಿದ್ದಾರೆ. ಜೆಡಿಎಸ್- ಬಿಜೆಪಿಯ ಶಕ್ತಿ ಬಗ್ಗೆ ಹಾದಿ ಬೀದಿಯಲ್ಲಿ ಚರ್ಚೆ ಮಾಡುವ ವಿಷಯ ಅಲ್ಲ ಸ್ವಾಮಿ ಎಂದು ವಾಗ್ದಾಳಿ ನಡೆಸಿದರು.
ಸೋಲಿನ ಮೇಲೆ ನಾಯಕತ್ವ ನಿರ್ಣಯ ಆಗಲ್ಲ:
ಮಂಡ್ಯ ಜಿಲ್ಲೆಯೊಳಗೆ ಕೆ.ಆರ್. ಪೇಟೆಯಲ್ಲಿ ಮಾತ್ರ ಜೆಡಿಎಸ್ ಶಾಸಕರಾಗಿ ಮಂಜಣ್ಣ ಆಯ್ಕೆ ಆಗಿದ್ದಾರೆ. ಕಾರ್ಯಕರ್ತರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಸಹಜವಾಗಿ ಹೇಳಿದ್ದೆ ಅಷ್ಟೆ, ತಪ್ಪೇನು? ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ನನ್ನ ಚುನಾವಣೆ ಸೋಲಿನ ಮೇಲೆ ರಾಜಕಾರಣದ ನಾಯಕತ್ವ ಸೃಷ್ಟಿ ಆಗುತ್ತೋ, ಸೃಷ್ಟಿ ಆಗಿಲ್ವೋ ಅನ್ನೋದು ನಿರ್ಣಯ ಆಗಲ್ಲ ಎಂದು ಮಾಜಿ ಸಚಿವ ನಾರಾಯಣ ಗೌಡ ವಿರುದ್ಧ ನಿಖಿಲ್ ಕಿಡಿಕಾರಿದರು.
ಇನ್ನು 2019ರಲ್ಲಿ ಒಬ್ಬ ನಿಖಿಲ್ ಕುಮಾರಸ್ವಾಮಿ ಸೋಲಿಸಲು ಯಾರ‍್ಯಾರು ಸಂಚು ರೂಪಿಸಿದ್ರು? ಪಲಾಯನ ಮಾಡಿ ಮಧ್ಯದಲ್ಲಿ ಹೋಗುವ ವ್ಯಕ್ತಿತ್ವ ನನ್ನದಲ್ಲ ಎಂದು ತಿರುಗೇಟು ನೀಡಿದರು.
ಸ್ಪರ್ಧೆ ವಿಚಾರಕ್ಕೆ ಮಾತನಾಡಿದ ಅವರು, ಕುಮಾರಣ್ಣ ಮತ್ತು ದೇವೇಗೌಡರ ಮರುಸೃಷ್ಟಿ ಮಾಡಿರುವ ಪುಣ್ಯಭೂಮಿ ರಾಮನಗರ. ಕಳೆದ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಿದ್ದೇನೆ. ನನ್ನ ನಂಬಿರುವ ಕಾರ್ಯಕರ್ತರು, ಮುಖಂಡರ ವರ್ಗವಿದೆ ಎಂದರು.
ಮಂಡ್ಯ ಜಿಲ್ಲೆ ನಮ್ಮದೇ, ನಮ್ಮನ್ನು ಪ್ರೀತಿಸುವ ನಾಡು. ನಮ್ಮ ಕಾರ್ಯಕರ್ತರು ಎಲ್ಲಿ ಬೆಳಿಸಿದ್ದಾರೋ ಅದನ್ನ ಅರಿತು ಹೆಜ್ಜೆ ಹಾಕುವ ಜವಾಬ್ದಾರಿ ಇದೆ. ಕರ್ತವ್ಯ ಇದೆ. ಹಾಗೇ ಮುಂದುವರಿಯುತ್ತೇವೆ. ಸಮಯ ಬಂದಾಗ ಎಲ್ಲ ಗೊತ್ತಾಗುತ್ತೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
‘ಗೆದ್ದರೆ ಜನಾದೇಶ, ಸೋತರೆ ಇವಿಎಂ ಟ್ಯಾಪಿಂಗ್’
‘ಸ್ಥಳೀಯ ಚುನಾವಣೆಯಲ್ಲಿ ಬ್ಯಾಲೆಟ್ ಪೆಪರ್ ಬಳಕೆ ವಿಚಾರದ ಬಗ್ಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಕಾಂಗ್ರೆಸ್ ಗೆದ್ದರೆ ಜನಾದೇಶ, ಸೋತರೆ ಇವಿಎಂ ಟ್ಯಾಪಿಂಗ್ ಅಂತ ಹೇಳ್ತಾರೆ. ಟೆಕ್ನಾಲಜಿ ಬಹಳ ಮುಂದುವರಿದಿದೆ. ಈ ಸಂದರ್ಭದಲ್ಲಿ ಬ್ಯಾಲೆಟ್ ಪೇಪರ್ ಬಳಕೆ ಸರಿಯಲ್ಲ. ಟೆಕ್ನಾಲಜಿ ಬಳಸಿಕೊಳ್ಳವುದನ್ನು ಬಿಟ್ಟು ಬ್ಯಾಲೆಟ್ ಪೇಪರ್ ಬಳಕೆ ಅರ್ಥವಿಲ್ಲ’ ಎಂದು ನಿಖಿಲ್ ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.