ADVERTISEMENT

ಬಿಜೆಪಿ, ಕಾಂಗ್ರೆಸ್ ವಿರುದ್ಧ ಸಮಾನ ಹೋರಾಟ: ಎಚ್.ಡಿ. ದೇವೇಗೌಡ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2022, 8:35 IST
Last Updated 12 ಮಾರ್ಚ್ 2022, 8:35 IST
   

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ಸಮಾನ ಹೋರಾಟ ನಡೆಸಲಿದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ರಾಜ್ಯದಲ್ಲಿ ಪಕ್ಷವನ್ನು ಬಲಪಡಿಸುವ ಪ್ರಯತ್ನ ಆರಂಭಿಸಿದ್ದೇವೆ. ಇದೇ 20ರಂದು ನಗರದ ಅರಮನೆ ಮೈದಾನದಲ್ಲಿ ಪಕ್ಷದ ಸಮಾವೇಶ ನಡೆಯಲಿದೆ. ಅಲ್ಲಿ ನಮ್ಮ ಹೋರಾಟದ ತೀರ್ಮಾನವನ್ನು ಪ್ರಕಟಿಸುತ್ತೇವೆ' ಎಂದರು.

ಜೆಡಿಎಸ್ ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡಲಿದೆ. ಬಿಜೆಪಿ ಮತ್ತು ಕಾಂಗ್ರೆಸ್ ತಮ್ಮ ಪಕ್ಷಕ್ಕೆ‌ಸಮಾನ ಎದುರಾಳಿಗಳು. ಚುನಾವಣಾ ಹೊಂದಾಣಿಕೆ ಗಾಳಿ ಮಾತು ಎಂದು ಹೇಳಿದರು.

ADVERTISEMENT

ಒಗ್ಗಟ್ಟು ಅಗತ್ಯ: ಬಿಜೆಪಿ ಈಗ ಪ್ರಬಲವಾಗಿ ಬೆಳೆದಿದೆ‌. ರಾಷ್ಟ್ರದಲ್ಲಿ ಜಾತ್ಯತೀತ ಸಿದ್ಧಾಂತದ ಪಕ್ಷಗಳು ಒಗ್ಗೂಡುವ ಅಗತ್ಯವಿದೆ. ಆ ದಿಸೆಯಲ್ಲಿ ಚಿಂತನೆ ನಡೆಯಬೇಕಿದೆ ಎಂದು ದೇವೇಗೌಡ ಪ್ರತಿಪಾದಿಸಿದರು.

'ಕಾಂಗ್ರೆಸ್ ಈಗ ಬಲಹೀನವಾಗಿದೆ. ಅದು ಕೆಲವೇ ರಾಜ್ಯಗಳಿಗೆ ಸೀಮಿತವಾದ ಪ್ರಾದೇಶಿಕ ಪಕ್ಷದಂತೆ ಆಗಿದೆ. ಕರ್ನಾಟಕದ ಕಾ‌ಂಗ್ರೆಸ್ ಬಗ್ಗೆ ನಾನು ಏನನ್ನೂ ಮಾತನಾಡುವುದಿಲ್ಲ' ಎಂದರು.

ಪಂಜಾಬ್ ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ಅಸಮಾಧಾನ ಸರಿಪಡಿಸಿ, ಒಟ್ಟಿಗೆ ಹೋಗಿದ್ದರೆ ಈಗಿನ ಪರಿಸ್ಥಿತಿ ಬರುತ್ತಿರಲಿಲ್ಲ ಎಂದರು.

ಪ್ರಧಾನಿ ನರೇಂದ್ರ ಮೋದಿ ಬಿಜೆಪಿಯ ಗೆಲುವುಗಾಗಿ ವಿನಮ್ರತೆಯಿಂದ ಶ್ರಮಿಸುತ್ತಿದ್ದಾರೆ. ಈಗಾಗಲೇ ಅವರು ಗುಜರಾತ್ ಚುನಾವಣಾ ತಯಾರಿ ಆರಂಭಿಸಿದ್ದಾರೆ ಎಂದರು.

ಕಾಂಗ್ರೆಸ್ ಹೋರಾಟಕ್ಕೆ ತಕರಾರಿಲ್ಲ:
'ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ಮೇಕೆದಾಟು ಯೋಜನೆಗೆ ಆಗ್ರಹಿಸಿ ದೊಡ್ಡ ಪಾದಯಾತ್ರೆ ನಡೆಸಿದರು. ಅವರ ಹೋರಾಟಕ್ಕೆ ಒಳ್ಳೆಯ ಪ್ರಚಾರವೂ ಸಿಕ್ಕಿತು. ಕಾಂಗ್ರೆಸ್ ಪಕ್ಷದ ಯಾವ ಹೋರಾಟಕ್ಕೂ ನನ್ನ ತಕರಾರಿಲ್ಲ' ಎಂದು ಹೇಳಿದರು.

ಇಬ್ರಾಹಿಂ ಭೇಟಿಯಷ್ಟೇ ಆಗಿದೆ: ಸಿ.ಎಂ. ಇಬ್ರಾಹಿಂ ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿ ನೋವಾಗಿದೆ. ಅವರು ಬಂದು ನನ್ನನ್ನು ಭೇಟಿ ಮಾಡಿದ್ದರು. ಪಕ್ಷ ಸೇರ್ಪಡೆ ಕುರಿತು ಹೆಚ್ಚು ಚರ್ಚೆಯೇನೂ ಆಗಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.