ADVERTISEMENT

ಜೆಡಿಎಸ್‌ನ ಜಿಲ್ಲಾ ಅಧ್ಯಕ್ಷರು ಬದಲು: ಕೃಷ್ಣಾರೆಡ್ಡಿ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 15:57 IST
Last Updated 3 ಡಿಸೆಂಬರ್ 2025, 15:57 IST
ಎಂ.ಕೃಷ್ಣಾರೆಡ್ಡಿ
ಎಂ.ಕೃಷ್ಣಾರೆಡ್ಡಿ   

ಬೆಂಗಳೂರು: ‘ಜೆಡಿಎಸ್‌ನಲ್ಲಿ ನಿಷ್ಕ್ರಿಯವಾಗಿರುವ ಜಿಲ್ಲಾ ಘಟಕಗಳ ಅಧ್ಯಕ್ಷರನ್ನು ಬದಲಾವಣೆ ಮಾಡಲು ನಿರ್ಧರಿಸಲಾಗಿದೆ’ ಎಂದು ಪಕ್ಷದ ಪ್ರಮುಖರ ಸಮಿತಿ ಅಧ್ಯಕ್ಷ ಎಂ.ಕೃಷ್ಣಾರೆಡ್ಡಿ ಹೇಳಿದರು.

ಬುಧವಾರ ನಡೆದ ಸಮಿತಿ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.  

‘ರಾಜ್ಯದ ಎಲ್ಲ ಜಿಲ್ಲೆ, ತಾಲ್ಲೂಕುಗಳಲ್ಲೂ ಜೆಡಿಎಸ್‌ ಪಕ್ಷವನ್ನು ಸದೃಢಗೊಳಿಸುವ ಕುರಿತು ಸುದೀರ್ಘ ಚರ್ಚೆ ನಡೆಸಲಾಗಿದೆ. ಸಮಿತಿಯ ಹಿಂದಿನ ಅಧ್ಯಕ್ಷರಾಗಿದ್ದ ಜಿ.ಟಿ.ದೇವೇಗೌಡರ ನೇತೃತ್ವದಲ್ಲಿ ಕಲಬುರಗಿ, ವಿಜಯಪುರ, ಕೊಪ್ಪಳ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಾಗಿತ್ತು. ಈಗ ಉಳಿದ ಜಿಲ್ಲೆಗಳಲ್ಲಿ ಪ್ರವಾಸ ಹಮ್ಮಿಕೊಳ್ಳಲಾಗುವುದು ಎಂದರು.

ADVERTISEMENT

22ಕ್ಕೆ ಜಿಲ್ಲಾ ಅಧ್ಯಕ್ಷರ ಸಭೆ: ಪಕ್ಷದ ರಾಜ್ಯ ಕಚೇರಿಯಲ್ಲಿ ಡಿ.22ರಂದು ರಾಜ್ಯದ ಎಲ್ಲಾ ಜಿಲ್ಲೆಗಳ ಪಕ್ಷದ ಅಧ್ಯಕ್ಷರ ಸಭೆ ಕರೆಯಲಾಗಿದೆ. ಸಂಕ್ರಾಂತಿ ಬಳಿಕ ವಾರಕ್ಕೆ ಕನಿಷ್ಠ ಮೂರು ಜಿಲ್ಲೆಗಳಲ್ಲಿ ಪ್ರವಾಸ ಮಾಡಲು ನಿರ್ಧರಿಸಲಾಗಿದೆ. ಪರಿಣಾಮಕಾರಿಯಾಗಿ ಪಕ್ಷ ಸಂಘಟಿಸುವ, ನಾಯಕತ್ವಕ್ಕೆ ನಿಷ್ಠರಾಗಿರುವ ಹಾಗೂ ಪಕ್ಷ ಸಂಘಟನೆಗೆ ಸಮಯ ಕೊಡುವವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗುವುದು ಎಂದು ಮಾಹಿತಿ ನೀಡಿದರು.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಐದು ನಗರ ಪಾಲಿಕೆಗಳ ಚುನಾವಣೆಗೆ ಈಗಾಗಲೇ ಉಸ್ತುವಾರಿಗಳನ್ನು ನೇಮಿಸಲಾಗಿದೆ. ಬೆಳಗಾವಿ ಅಧಿವೇಶನದ ಬಳಿಕ ಈ ಉಸ್ತುವಾರಿಗಳ ಸಭೆ ಕರೆದು, ಚರ್ಚಿಸಲಾಗುವುದು. ಐದು ಪಾಲಿಕೆಗಳ 369 ವಾರ್ಡ್‌ಗಳಲ್ಲಿ ಪಕ್ಷ ಸಂಘಟನೆ, ಬಿಜೆಪಿಯೊಂದಿಗೆ ಸೀಟು ಹಂಚಿಕೆ ಕುರಿತು ಮಾತುಕತೆ ನಡೆಸಲಾಗುವುದು ಎಂದರು.

ಸಭೆಯಲ್ಲಿ ಸಮಿತಿ ಸದಸ್ಯರಾದ ಎ.ಮಂಜು, ಎಚ್‌.ಕೆ.ಕುಮಾರಸ್ವಾಮಿ, ನೇಮಿರಾಜ್‌ ನಾಯ್ಕ, ಕರೆಮ್ಮ ನಾಯಕ್, ದೊಡ್ಡಗೌಡ ಪಾಟೀಲ, ಕೆ.ಬಿ.ಪ್ರಸನ್ನಕುಮಾರ್, ಎಚ್‌.ಎಸ್‌.ಶಿವಶಂಕರ್‌, ಸಿ.ವಿ.ಚಂದ್ರಶೇಖರ್, ರಾಜ ವೆಂಕಟಪ್ಪ ನಾಯಕ ಮತ್ತಿತರರು ಭಾಗವಹಿಸಿದ್ದರು.

ಉಪಾಹಾರ ಇಲಾಖೆ ಸಕ್ರಿಯ: ನಿಖಿಲ್‌  

‘ರಾಜ್ಯದ ಜನರು ಸಂಕಷ್ಟದಲ್ಲಿ ಇರುವಾಗ ಇವರು ಉಪಾಹಾರ ಔತಣಕೂಟಗಳಲ್ಲೇ ಸಮಯ ವ್ಯರ್ಥ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಉಪಾಹಾರ ಇಲಾಖೆ ಮಾತ್ರ ಸಕ್ರಿಯವಾಗಿದೆ’ ಎಂದು ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಆರೋಪಿಸಿದರು. ‘ರಾಜ್ಯದಲ್ಲಿ ರಸ್ತೆ ಗುಂಡಿಗಳಿಂದ ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಬೆಂಗಳೂರಿನಲ್ಲಿ ರಸ್ತೆ ಯಾವುದು? ಗುಂಡಿಗಳು ಯಾವುದು ಎಂದು ಗೊತ್ತಿಲ್ಲ. ಇದು ಸರ್ಕಾರದ ಪರಿಸ್ಥಿತಿ. ಇದರ ಹೊಣೆಯನ್ನು ಸರ್ಕಾರವೇ ಹೊರಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.