
ಬೆಂಗಳೂರು: ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷರಾಗಿ ಎಚ್.ಡಿ.ಕುಮಾರಸ್ವಾಮಿಯೇ ಮುಂದುವರೆಯಬೇಕು ಎಂಬ ಅಭಿಪ್ರಾಯ ಪಕ್ಷದ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ವ್ಯಕ್ತವಾಗಿದ್ದು, ರಾಜ್ಯದ ಮುಂದಿನ ವಿಧಾನಸಭಾ ಚುನಾವಣೆಯನ್ನು ಅವರ ನೇತೃತ್ವದಲ್ಲಿಯೇ ಎದುರಿಸಲಿದೆ.
ಜೆಡಿಎಸ್ ಬೆಳ್ಳಿಹಬ್ಬದ ಅಂಗವಾಗಿ ಶುಕ್ರವಾರ ಇಲ್ಲಿ ಪಕ್ಷದ ರಾಷ್ಟ್ರೀಯ ಮಂಡಳಿ ಸಭೆ ನಡೆಯಿತು. ಸಭೆಯ ನಂತರ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್‌ಬಾಬು, ‘ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷರಾಗಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಅವಿರೋಧವಾಗಿ ಪುನರಾಯ್ಕೆ ಮಾಡಲಾಗಿದೆ’ ಎಂದರು.
‘ರಾಜ್ಯದಲ್ಲಿ ರೈತರ ಪರವಾಗಿ ಹೋರಾಟ ನಡೆಸಬೇಕು ಎಂಬ ನಿರ್ಣಯವನ್ನೂ ಸಭೆಯಲ್ಲಿ ಕೈಗೊಳ್ಳಲಾಗಿದೆ. ಈ ನಿರ್ಣಯಗಳಿಗೆ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಒಪ್ಪಿಗೆ ಪಡೆಯಲಾಗುವುದು’ ಎಂದು ತಿಳಿಸಿದರು.
‘ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬದಲಾಗುತ್ತಾರೆ ಎಂಬ ಮಾಧ್ಯಮ ವರದಿಗಳ ಬಗ್ಗೆ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಪ್ರಸ್ತಾಪವಾಯಿತು. ರಾಜ್ಯದ ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ, ಕುಮಾರಸ್ವಾಮಿ ಅವರೇ ಪಕ್ಷವನ್ನು ಮುನ್ನಡೆಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಯಿತು’ ಎಂದು ಮೂಲಗಳು ತಿಳಿಸಿವೆ.
‘ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿರುವ ಕಾರಣಕ್ಕೆ, ಪಕ್ಷ ಸಂಘಟನೆಗೆ ಗಮನ ನೀಡಲು ಆಗುತ್ತಿಲ್ಲ ಎಂದು ಕೆಲವರು ಈ ಹಿಂದೆ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಕಾರ್ಯಕಾರಿಣಿ ಸಭೆಯಲ್ಲಿ ಈ ಬಗ್ಗೆ ಯಾರೊಬ್ಬರೂ ಮಾತನಾಡಲಿಲ್ಲ. ಬದಲಿಗೆ ಕುಮಾರಸ್ವಾಮಿ ಅವರ ನಾಯಕತ್ವದಲ್ಲಿಯೇ ಪಕ್ಷವು ಬಲವಾಗಲಿದೆ ಎಂದು ಎಲ್ಲರೂ ಹೇಳಿದರು’ ಎಂದು ಹೇಳಿವೆ.
‘ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಅದಕ್ಕಾಗಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ಅಗತ್ಯವಿದೆ. ಈ ಹೊಣೆಯನ್ನು ನಿಖಿಲ್ ಕುಮಾರಸ್ವಾಮಿ ಅವರು ಹೊರಬೇಕು ಎಂದು ನಿರ್ಧರಿಸಲಾಗಿದೆ’ ಎಂದು ಮಾಹಿತಿ ನೀಡಿವೆ.
‘ಮತ್ತೆ ಅಧಿಕಾರಕ್ಕೆ ಬರುತ್ತೇವೆ’: ‘ಕುಮಾರಸ್ವಾಮಿ ನೇತೃತ್ವದಲ್ಲಿ, ರಾಜ್ಯದಲ್ಲಿ ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ’ ಎಂದು ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.
ಜೆಡಿಎಸ್ ಬೆಳ್ಳಿಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಕುಮಾರಸ್ವಾಮಿ ಅವರು ಕೇಂದ್ರದಲ್ಲಿ ಸಚಿವರಾಗಿದ್ದಾರೆ ಎಂದ ಮಾತ್ರಕ್ಕೆ ರಾಜ್ಯದಲ್ಲಿ ಪಕ್ಷ ದುರ್ಬಲವಾಗಿದೆ ಎಂದಲ್ಲ. ಈಗ ನಮ್ಮ 19 ಶಾಸಕರಷ್ಟೇ ಇರಬಹುದು. ಆದರೆ ಶೇ 20ರಷ್ಟು ಮತಗಳನ್ನು ಪಡೆದಿದ್ದೆವು ಎಂಬುದನ್ನು ಯಾರೂ ಮರೆಯಬಾರದು. ಮುಂದೆ ಹೆಚ್ಚಿನ ಕ್ಷೇತ್ರಗಳಲ್ಲಿ ಗೆದ್ದು ಬರುತ್ತೇವೆ’ ಎಂದರು.
‘ನಮ್ಮ ಶಾಸಕರನ್ನು ಬೇರೆಡೆಗೆ ಕರೆದೊಯ್ದು ಸರ್ಕಾರ ಬೀಳಿಸಿದವರು ಈಗ ಸರ್ಕಾರದ ಮುಖ್ಯಸ್ಥನ ಸ್ಥಾನದಲ್ಲಿ ಕೂತಿದ್ದಾರೆ. ಸರ್ಕಾರ ಬೀಳಿಸಿದ ಕರ್ಮ ಅವರನ್ನು ಬಿಡುವುದಿಲ್ಲ. ತಾವು ಮಾಡಿದ್ದನ್ನು ಅವರೂ ಅನುಭವಿಸುತ್ತಾರೆ’ ಎಂದು ಹೇಳಿದರು.
ಬಹುಮತ ಸಿಗದೇ ಇದ್ದರೂ ದೇವೇಗೌಡ ಮತ್ತು ಕುಮಾರಸ್ವಾಮಿ ಅವರು ರಾಜ್ಯದ ಜನರಿಗಾಗಿ ದುಡಿದರು. 2028ರಲ್ಲಿ ಬಹುಮತದೊಂದಿಗೆ ಜೆಡಿಎಸ್ ಸರ್ಕಾರ ರಚಿಸಲಿದೆನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಯುವ ಘಟಕದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.