ADVERTISEMENT

ಶಾಸಕರ ನಡೆಗೆ ಸಿಂಧ್ಯ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2019, 20:14 IST
Last Updated 7 ಫೆಬ್ರುವರಿ 2019, 20:14 IST

ಮೈಸೂರು: ಜನರು ತಮ್ಮ ಸಮಸ್ಯೆಗಳನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಲಿ ಎಂದು ಶಾಸಕರನ್ನು ಗೆಲ್ಲಿಸಿ ಕಳುಹಿಸಿದರೆ,
ಅಲ್ಲಿ ಅಸಂಬದ್ಧವಾಗಿ ಗಲಾಟೆ ಮಾಡುತ್ತಾರೆ. ಬಟ್ಟೆ ಹರಿದುಕೊಂಡು ಕೂಗಾಡುತ್ತಾರೆ ಎಂದು ಜೆಡಿಎಸ್ ಮುಖಂಡ ಪಿ.ಜಿ.ಆರ್.ಸಿಂಧ್ಯ ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕರೊಬ್ಬರು ವಿಧಾನಸಭೆಯಲ್ಲಿ ಬಟ್ಟೆ ಹರಿದುಕೊಂಡು ಮಾಡಿದ ಪ್ರತಿಭಟನೆ ನಾಡಿನ ಚರಿತ್ರೆಯಲ್ಲಿ ಕಪ್ಪುಚುಕ್ಕೆಯಂತೆ ಉಳಿದು ಹೋಯಿತು. ಇಂದಿನ ಶಾಸಕರು ಕನಿಷ್ಠ ಪಕ್ಷ ದಿನಕ್ಕೆ ಒಂದು ಪುಟದಷ್ಟಾದರೂ ಸಾಹಿತ್ಯ ಓದಿದರೆ ಇಂತಹ ಘಟನೆ ತಪ್ಪಿಸಬಹುದು ಎಂದು ಗುರುವಾರ ನಡೆದ ಸಾಹಿತಿ ದೊಡ್ಡರಂಗೇಗೌಡ ಅವರ ಆಯ್ದ ಚುಟುಕಗಳ ಕೃತಿ ಬಿಡುಗಡೆ ಸಮಾರಂಭದಲ್ಲಿ ತಿಳಿಸಿದರು.

ಜೆ.ಎಚ್.ಪಟೇಲ್, ಎಸ್‌.ಎಂ.ಕೃಷ್ಣ ಅವರು ಸಾಹಿತ್ಯವನ್ನು ಹೆಚ್ಚು ಓದಿಕೊಂಡಿದ್ದರು. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಸಾಲು ಸಾಲು ಗಂಭೀರ ಸಮಸ್ಯೆಗಳೇ ಬಂದವು. ಎಂತದ್ದೇ ಟೀಕೆ ಮಾಡಿದರೂ ಡಿ.ವಿ.ಗುಂಡಪ್ಪ ಅವರ ಮಂಕುತಿಮ್ಮನ ಕಗ್ಗದ ಒಂದು ಪದ್ಯವನ್ನು ಹೇಳಿ ಟೀಕೆಗೆ ಉತ್ತರ ನೀಡುತ್ತಿದ್ದರು. ಅವರ ಕೈಯಲ್ಲಿ ಯಾವಾಗಲೂ ಮಂಕುತಿಮ್ಮನ ಕಗ್ಗ ಇರುತ್ತಿತ್ತು ಎಂದು ನೆನಪಿಸಿಕೊಂಡರು.

ADVERTISEMENT

ಕೈಕೊಟ್ಟರೆ ಏನು ಮಾಡಬೇಕು?: ‘ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ನನ್ನನ್ನೂ ಸೇರಿದಂತೆ ಎಂ.ಪಿ.ಪ‍್ರಕಾಶ್, ಆರ್.ವಿ.ದೇಶಪಾಂಡೆ, ಸಿದ್ದರಾಮಯ್ಯ ಹಾಗೂ ಇತರ ನಾಯಕರನ್ನು ಬೆಳೆಸಿದರು. ಆದರೆ, ಅವರಿಂದ ಬೆಳೆದ ನಾವೆಲ್ಲರೂ ಕೈಕೊಟ್ಟರೆ ಅವರಾದರೂ ಏನು ಮಾಡಬೇಕು’ ಎಂದು ಪ್ರಶ್ನಿಸಿದರು. ‘ಕೊನೆಗೆ ಗೌಡರು ತಮ್ಮಲ್ಲೇ ಸಮರ್ಥನಾಗಿರುವ ಒಬ್ಬ ‍ಪುತ್ರನಿಗೆ ಪಟ್ಟ ಕಟ್ಟಿದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.