ADVERTISEMENT

ಜೆಡಿಎಸ್ ಸದಸ್ಯ ರವಿಕುಮಾರ್ ಕೊಲೆ ಪ್ರಕರಣ; ಎನ್‌ಕೌಂಟರ್‌ಗೆ ಹೆದರಿ ಶರಣಾದರೇ?

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2018, 19:14 IST
Last Updated 2 ಅಕ್ಟೋಬರ್ 2018, 19:14 IST
ರಘು
ರಘು   

ತುಮಕೂರು: ನಗರವನ್ನು ಬೆಚ್ಚಿ ಬೀಳಿಸಿದ್ದ ಮಹಾನಗರ ಪಾಲಿಕೆ ಜೆಡಿಎಸ್ ಸದಸ್ಯ ಹಾಗೂ ಮಾಜಿ ಮೇಯರ್ ರವಿಕುಮಾರ್ ಹತ್ಯೆ ಪ್ರಕರಣ‌ದ ಸಂಬಂಧ ಸುಜಯ್ ಭಾರ್ಗವ್ ಹಾಗೂ ಆತನ ಸಹಚರ ರಘು ಮಂಗಳವಾರ ಗೌರಿಬಿದನೂರು ಗ್ರಾಮಾಂತರ ಠಾಣೆ ಪೊಲೀಸರಿಗೆ ಶರಣಾಗಿದ್ದಾರೆ.

ಸುಜಯ್ ಭಾರ್ಗವ್ ಕರುನಾಡ ಸೇನೆ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದರು. ರಘು ಸಹ ಸೇನೆಯಲ್ಲಿದ್ದರು.

‘ನನ್ನ ಹೆಸರು ಕೊಲೆ ಆರೋಪದಲ್ಲಿ ಕೇಳಿ ಬಂದಿದೆ. ತುಮಕೂರು ಪೊಲೀಸರು ಎನ್‌ಕೌಂಟರ್ ಮಾಡುತ್ತಾರೆ ಎನ್ನುವ ಭಯದಿಂದ ನಾನು ಇಲ್ಲಿಗೆ ಬಂದು ಶರಣಾಗಿದ್ದೇನೆ. ಉಳಿದದ್ದು ನ್ಯಾಯಾಲಯದಲ್ಲಿ ನಿರ್ಧಾರವಾಗಲಿದೆ. ನನ್ನ ತುಮಕೂರಿಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ಎನ್‌ಕೌಂಟ್ ಆದರೂ ಆಗಬಹುದು’ ಎಂದು ಪೊಲೀಸ್ ಠಾಣೆ ಬಳಿ ಸುಜಯ್ ಭಾರ್ಗವ್ ಮಾತನಾಡಿದ್ದಾರೆ. ಸುಜಯ್ ಭಾರ್ಗವ್ ಹೆಸರು ಹೊಸ ಬಡಾವಣೆ ಪೊಲೀಸ್ ಠಾಣೆಯ ರೌಡಿ ಶೀಟರ್ ಪಟ್ಟಿಯಲ್ಲಿ ಇತ್ತು.

ADVERTISEMENT

ಒಂದು ಸಮಯದಲ್ಲಿ ರವಿ ಕುಮಾರ್ ಮತ್ತು ಸುಜಿ ಸ್ನೇಹಿತರಾಗಿದ್ದವರು. ಆದರೆ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ವೈಮನಸ್ಸು ಮೂಡಿ ಬೇರೆಯಾಗಿದ್ದರು ಎನ್ನಲಾಗುತ್ತಿದೆ. ರವಿ ಹತ್ಯೆಯಲ್ಲಿ ಸುಜಯ್ ಹೆಸರು ಮುಂಚೂಣಿಯಲ್ಲಿತ್ತು. ನಗರದಲ್ಲಿಯೂ ಈ ಬಗ್ಗೆ ಸುದ್ದಿ ಹರಡಿತ್ತು.

ಸುಜಯ್ ಮತ್ತು ರಘುನನ್ನು ಕರೆತರಲು ಜಿಲ್ಲೆಯ ಪೊಲೀಸರು ರಾತ್ರಿ ಗೌರಿಬಿದನೂರಿಗೆ ತೆರಳಿದರು.

ಸೋಮವಾರ ಆರೋಪಿಗಳು ನ್ಯಾಯಾಲಯಕ್ಕೆ ಶರಣಾಗುವರು ಎನ್ನುವ ಅನುಮಾನದ ಮೇಲೆ ಪೊಲೀಸರು ನ್ಯಾಯಾಲಯದ ಆವರಣದಲ್ಲಿ ಮಫ್ತಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.