ADVERTISEMENT

JDS ಬೆಳ್ಳಿಹಬ್ಬ ರಾಷ್ಟ್ರೀಯ ಸಮಾವೇಶ; ರಾಜಕೀಯ ಕ್ರಾಂತಿಗೆ ಸಿದ್ಧರಾಗಿ: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 15:29 IST
Last Updated 22 ನವೆಂಬರ್ 2025, 15:29 IST
<div class="paragraphs"><p>ಜೆಡಿಎಸ್‌ ಸಮಾವೇಶವನ್ನು ಉದ್ದೇಶಿಸಿ ಎಚ್‌.ಡಿ.ದೇವೇಗೌಡ ಅವರು ಮಾತನಾಡಿದರು. ಎಚ್‌.ಡಿ.ಕುಮಾರಸ್ವಾಮಿ ಉಪಸ್ಥಿತರಿದ್ದರು</p></div>

ಜೆಡಿಎಸ್‌ ಸಮಾವೇಶವನ್ನು ಉದ್ದೇಶಿಸಿ ಎಚ್‌.ಡಿ.ದೇವೇಗೌಡ ಅವರು ಮಾತನಾಡಿದರು. ಎಚ್‌.ಡಿ.ಕುಮಾರಸ್ವಾಮಿ ಉಪಸ್ಥಿತರಿದ್ದರು

   

ಬೆಂಗಳೂರು: ‘ಕೆಲವೇ ತಿಂಗಳುಗಳಲ್ಲಿ ರಾಜ್ಯ ರಾಜಕಾರಣವು ಸ್ಫೋಟಕ ಬೆಳವಣಿಗೆಗೆ ಸಾಕ್ಷಿಯಾಗಲಿದೆ. ಆ ರಾಜಕೀಯ ಬೆಳವಣಿಗೆಗೆ ಜೆಡಿಎಸ್‌ ಕಾರ್ಯಕರ್ತರು ಸಿದ್ಧರಾಗಿರಬೇಕು’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಮತ್ತು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಕರೆ ನೀಡಿದರು.

ಪಕ್ಷದ ಬೆಳ್ಳಿಹಬ್ಬದ ಸಲುವಾಗಿ ನಗರದಲ್ಲಿ ಶನಿವಾರ ಆಯೋಜಿಸಿದ್ದ ಜೆಡಿಎಸ್‌ ರಾಷ್ಟ್ರೀಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಈಗಿನ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ, ಮುಂದಿನ ದಿನಗಳಲ್ಲಿ ಯಾರೂ ಕೂಡ ನಿರೀಕ್ಷೆ ಮಾಡದಂತಹ ಬದಲಾವಣೆಗಳು ಆಗಲಿವೆ’ ಎಂದರು.

ADVERTISEMENT

‘ರಾಜ್ಯದಲ್ಲಿ ಯಾರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಲಾಗದ ಪರಿಸ್ಥಿತಿ ಸೃಷ್ಟಿಯಾಗಿದೆ. ಕೆಲವೇ ತಿಂಗಳಲ್ಲಿ ರಾಜಕೀಯ ಕ್ರಾಂತಿ ಆಗುವ ಸಾಧ್ಯತೆ ಇದೆ. ಹೀಗಾಗಿ ಕಾರ್ಯಕರ್ತರು ಮತ್ತು ಮುಖಂಡರು ಜನರ ಬಳಿಯೇ ಇರಬೇಕು. ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕು. ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧರಿರಬೇಕು’ ಎಂದು ಕರೆ ನೀಡಿದರು.

‘ಕಾಂಗ್ರೆಸ್‌ನ ಕೆಟ್ಟ ಆಡಳಿತದಿಂದ ಜನರು ಬೇಸತ್ತು ಹೋಗಿದ್ದಾರೆ. ಜಾತಿ ಹೆಸರಿನಲ್ಲಿ ಜನರನ್ನು ಒಡೆಯುತ್ತಿದ್ದಾರೆ. ಸಿದ್ದರಾಮಯ್ಯ ಅವರು 25-30 ವರ್ಷದಿಂದಲೂ ಅಧಿಕಾರದಲ್ಲಿಯೇ ಇದ್ದಾರೆ. ಈ ರಾಜ್ಯಕ್ಕೆ ಏನು ಕೊಡುಗೆ ನೀಡಿದ್ದಾರೆ? ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕರಾಗಿ ಕೆಲಸ ಮಾಡಿದ್ದಾರೆ. ಏನು ಸಾಧನೆ ಮಾಡಿದ್ದಾರೆ’ ಎಂದು ಪ್ರಶ್ನಿಸಿದರು.

‘ಈ ಎಲ್ಲದರ ವಿರುದ್ಧ, ಜನರ ಪರವಾಗಿ ನಾವು ಹೋರಾಡಬೇಕು. ರಾಜ್ಯದ ಜನರು ನಮಗೆ ಐದು ವರ್ಷ ಅಧಿಕಾರ ನೀಡಬೇಕು. ಅವರಿಗೆ ಎಷ್ಟು ಒಳ್ಳೆಯದನ್ನು ಮಾಡಲು ಸಾಧ್ಯವೋ, ಅದೆಲ್ಲವನ್ನೂ ಮಾಡುತ್ತೇನೆ. ಇಲ್ಲದೇ ಇದ್ದರೆ ಜನರಿಗೆ ಮುಖ ತೋರಿಸುವುದಿಲ್ಲ’ ಎಂದು ಶಪಥ ಮಾಡಿದರು.

ಕೇಂದ್ರ ರಾಜ್ಯ ಸರ್ಕಾರಗಳ ಒತ್ತಾಯಿಸಿ ನಿರ್ಣಯ

* ಪ್ರಾಕೃತಿಕ ವಿಕೋಪಗಳಿಂದ ತತ್ತರಿಸಿರುವ ರೈತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೆರವಾಗಬೇಕು. ನೆರೆಯಿಂದ ಆಸ್ತಿ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಜೆಡಿಎಸ್‌ ರಾಷ್ಟ್ರೀಯ ಮಂಡಳಿಯಲ್ಲಿ ನಿರ್ಣಯ

* ಎಚ್‌.ಡಿ.ದೇವೇಗೌಡ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಪುನರಾಯ್ಕೆ. ಎಲ್ಲ ಕಾರ್ಯಕರ್ತರು ಮುಖಂಡರು ಪಕ್ಷ ಸಂಘಟನೆಗೆ ಒತ್ತು ನೀಡಬೇಕು ಎಂಬ ನಿರ್ಣಯ ಅಂಗೀಕಾರ

* ಬೆಳ್ಳಿಹಬ್ಬದ ಅಂಗವಾಗಿ ಪಕ್ಷದ ಚಿನ್ಹೆ ತೆನೆಹೊತ್ತ ರೈತ ಮಹಿಳೆ ಎಚ್‌.ಡಿ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರ ಚಿತ್ರ ಇರುವ ಬೆಳ್ಳಿ ನಾಣ್ಯಗಳ ಜನಾರ್ಪಣೆ. ಬೆಳ್ಳಿನಾಣ್ಯ ಪಡೆಯಲು 9964002028 ವಾಟ್ಸ್‌ಆ್ಯಪ್‌ ವಾಣಿಗೆ ಚಾಲನೆ

* ಮೂರು ತಿಂಗಳಲ್ಲಿ ಪ್ರತಿ ಜಿಲ್ಲೆಗಳಲ್ಲೂ ಬೆಳ್ಳಿಹಬ್ಬ ಸಂಭ್ರಮಾಚರಣೆ. ತಾಲ್ಲೂಕು ಕೇಂದ್ರಗಳಲ್ಲೂ ಬೆಳ್ಳಿಹಬ್ಬ ಕಾರ್ಯಕ್ರಮ

‘ಉತ್ತರಕ್ಕೆ ನಿತೀಶ್‌ ದಕ್ಷಿಣಕ್ಕೆ ಕುಮಾರಸ್ವಾಮಿ’

‘ದೇಶದಲ್ಲಿ ಪ್ರಾದೇಶಿಕ ಪಕ್ಷಗಳು ಇನ್ನೂ ಪ್ರಬಲವಾಗಿವೆ ಎಂಬುದನ್ನು ಬಿಹಾರದ ಚುನಾವಣೆಯಲ್ಲಿ ಜೆಡಿಯು ಮತ್ತು ನಿತೀಶ್‌ ಕುಮಾರ್ ಮತ್ತೆ ಸಾಬೀತು ಮಾಡಿದ್ದಾರೆ. ಉತ್ತರಕ್ಕೆ ನಿತೀಶ್‌ ದಕ್ಷಿಣಕ್ಕೆ ಕುಮಾರಸ್ವಾಮಿ. ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲರೂ ದುಡಿಯಬೇಕು’ ಎಂದು ಎಚ್‌.ಡಿ.ದೇವೇಗೌಡ ಅವರು ಕರೆ ನೀಡಿದರು. ‘ನಾವು ಎಂದಿಗೂ ಎನ್‌ಡಿಎ ಮೈತ್ರಿಕೂಟವನ್ನು ಬಿಡುವುದಿಲ್ಲ. ಆದರೆ ‍ಪಕ್ಷವನ್ನು ಬಲಪಡಿಸಬೇಕು. ತುರ್ತು ಪರಿಸ್ಥಿತಿ ಹೇರಿದಾಗ ಜಯಪ್ರಕಾಶ ನಾರಾಯಣ ಅವರ ಜತೆಯಲ್ಲಿ ನಾವು ಅವತ್ತಿನ ಬಿಜೆಪಿಯವರು ಒಟ್ಟಿಗೆ ಕೆಲಸ ಮಾಡಿದ್ದೇವೆ. ಹೀಗಾಗಿ ನಾವು ರಾಷ್ಟ್ರದ ಹಿತದೃಷ್ಟಿಯಿಂದ ಒಟ್ಟಾಗಿ ಕೆಲಸ ಮಾಡಬೇಕಿದೆ. ಕಾಂಗ್ರೆಸ್ ಪಕ್ಷದ ಕೆಟ್ಟ ಆಡಳಿತಕ್ಕೆ ಪಾಠ ಕಲಿಸಬೇಕಿದೆ. ನಾವು ಮೋದಿ ಅವರ ನೇತೃತ್ವದಲ್ಲಿ ವಿಶ್ವಾಸ ಇಟ್ಟಿದ್ದೇವೆ. ಅವರ ನೇತೃತ್ವದಲ್ಲಿ ಬಲಿಷ್ಠ ಸರ್ಕಾರ ಇದೆ. ಇದನ್ನು ನಾವು ಮರೆಯಬಾರದು’ ಎಂದರು.

‘ಸಿದ್ದರಾಮಯ್ಯ ಆಕ್ಸ್‌ಫರ್ಡ್‌ ಪದವಿ ಪಡೆದವರಾ’

‘ಸಿದ್ದರಾಮಯ್ಯ ಅವರನ್ನು ಹಣಕಾಸು ಮಂತ್ರಿ ಮಾಡಿದ್ದೇ ನಾನು. ವೀರಪ್ಪ ಮೊಯಿಲಿ ಅವರ ಸರ್ಕಾರದಲ್ಲಿ ಸರ್ಕಾರಿ ನೌಕರರಿಗೆ ವೇತನ ನೀಡಲು ಹಣ ಇರಲಿಲ್ಲ. ಅಂತಹ ಸ್ಥಿತಿಯನ್ನು ನಿರ್ವಹಿಸಲು ಸಿದ್ದರಾಮಯ್ಯನೇ ಸರಿಯಾದ ವ್ಯಕ್ತಿ ಎಂದು ಹಣಕಾಸು ಮಂತ್ರಿ ಹುದ್ದೆ ಸಿಗುವಂತೆ ಮಾಡಿದ್ದೆ. ಅವರೇನು ಆಕ್ಸ್‌ಫರ್ಡ್‌ನಿಂದ ಅರ್ಥಶಾಸ್ತ್ರ ಪದವಿ ಪಡೆದವರಾ? ಹೀಗಿದ್ದೂ ಹಣಕಾಸು ಮಂತ್ರಿ ಮಾಡಿದೆ. ಅದೇ ನಾನು ಮಾಡಿದ ದೊಡ್ಡ ತಪ್ಪು’ ಎಂದು ದೇವೇಗೌಡ ಹೇಳಿದರು. ‘ಸಿದ್ದರಾಮಯ್ಯ ಕೈಕೊಡುತ್ತಾನೆ ಎಂದು ರಾಮಕೃಷ್ಣ ಹೆಗಡೆ ಹಲವು ಬಾರಿ ಹೇಳಿದ್ದರು. ಅದು ಹಾಗೇ ಆಯಿತು’ ಎಂದರು. ‘ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಸರ್ಕಾರ ರಚನೆಯಾಗುವಾಗ ಸಿದ್ದರಾಮಯ್ಯ ಅವರನ್ನೇ ಮುಖ್ಯಮಂತ್ರಿ ಮಾಡಿ ಎಂದು ಸೋನಿಯಾ ಗಾಂಧಿ ಅವರನ್ನು ಕೇಳಿಕೊಂಡಿದ್ದೆ. ಸಿದ್ದರಾಮಯ್ಯಗೆ ಅನುಮಾನವಿದ್ದರೆ ಸೋನಿಯಾ ಗಾಂಧಿ ಅವರ ಬಳಿ ಸತ್ಯ ತಿಳಿದುಕೊಳ್ಳಲಿ’ ಎಂದು ಸವಾಲು ಹಾಕಿದರು. ‘ಆದರೆ ಸೋನಿಯಾ ಅವರು ಧರ್ಮಸಿಂಗ್‌ ಅವರನ್ನು ಮುಖ್ಯಮಂತ್ರಿ ಆಗಿಸಿದರು. ಸಿದ್ದರಾಮಯ್ಯ ನಮ್ಮ ಮೇಲೆ ಮುನಿಸಿಕೊಂಡು ಅಹಿಂದ ಸಮಾವೇಶ ಮಾಡಲು ಹೊರಟರು. ಪಕ್ಷದ ವೇದಿಕೆಯಲ್ಲೇ ಮಾಡಿ ಎಂದಿದ್ದೆ. ಅದನ್ನು ಕೇಳದಿದ್ದ ಕಾರಣ ಪಕ್ಷದಿಂದ ಹೊರಹಾಕಿದೆ. ಕಾಂಗ್ರೆಸ್‌ನಲ್ಲೂ ಅವರು ಹಿಂದುಳಿದವರ ಸಮಾವೇಶ ಮಾಡಿದರು’ ಎಂದರು.

ಸ್ವತಂತ್ರ ಸರ್ಕಾರಕ್ಕೆ ಪಣ

‘ಎಚ್‌.ಡಿ.ಕುಮಾರಸ್ವಾಮಿ ಅವರು ಮತ್ತೆ ಮುಖ್ಯಮಂತ್ರಿ ಆಗಬೇಕು ಎಂಬುದು ಪಕ್ಷದ ಕಾರ್ಯಕರ್ತರ ಆಸೆ. ಜೆಡಿಎಸ್‌ ಅನ್ನು ಸ್ವತಂತ್ರವಾಗಿ ಅಧಿಕಾರಕ್ಕೆ ತರಬೇಕು ಎಂಬುದು ಎಚ್‌.ಡಿ.ದೇವೇಗೌಡ ಅವರ ಒತ್ತಾಸೆ. ಇದಕ್ಕಾಗಿ ನಾವೆಲ್ಲರೂ ದುಡಿಯಬೇಕು. 2028ರ ವಿಧಾನಸಭಾ ಚುನಾವಣೆಯಲ್ಲಿ 80–90 ಸ್ಥಾನಗಳನ್ನು ಗೆಲ್ಲಬೇಕು’ ಎಂದು ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿದರು. ‘ಜೆಡಿಎಸ್‌ ಅನ್ನು ಸ್ವತಂತ್ರವಾಗಿ ಅಧಿಕಾರಕ್ಕೆ ತರಲು ಸಂಘಟನೆಯನ್ನು ಬಲಪಡಿಸಬೇಕು. ಇದಕ್ಕಾಗಿ ನಾನು ಎರಡನೇ ಹಂತದಲ್ಲಿ ಜಿಲ್ಲಾ ಪ್ರವಾಸವನ್ನು ಕೈಗೊಳ್ಳುತ್ತೇನೆ’ ಎಂದರು.