ADVERTISEMENT

ಪರಿಷತ್ತಿಗೆ ತಿಪ್ಪೇಸ್ವಾಮಿ ನಾಮನಿರ್ದೇಶನ?

ವಿಧಾನಪರಿಷತ್ತಿಗೆ ತಿಪ್ಪೇಸ್ವಾಮಿ ನಾಮನಿರ್ದೇಶನ?

​ಪ್ರಜಾವಾಣಿ ವಾರ್ತೆ
Published 12 ಜನವರಿ 2019, 19:58 IST
Last Updated 12 ಜನವರಿ 2019, 19:58 IST
ಎಚ್‌.ಡಿ.ರೇವಣ್ಣ
ಎಚ್‌.ಡಿ.ರೇವಣ್ಣ   

ಬೆಂಗಳೂರು: ‘ಛಾಯಾ ಮುಖ್ಯಮಂತ್ರಿ’ ಎಂಬ ಟೀಕೆಗೆ ಗುರಿಯಾಗಿರುವ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರ ವಿಶೇಷಾಧಿಕಾರಿಯಾಗಿರುವ ತಿಪ್ಪೇಸ್ವಾಮಿ ಅವರನ್ನು ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡುವಂತೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದಾರೆ. ಇದಕ್ಕೆ ರೇವಣ್ಣ ಒತ್ತಡವೇ ಕಾರಣ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಈ ನಡೆಗೆ ಪಕ್ಷದಲ್ಲೇ ವಿರೋಧ ವ್ಯಕ್ತವಾಗಿದೆ. ಕುರುಬ ಸಮುದಾಯದವರಾದ ಮಾಜಿ ಶಾಸಕ ಸಿ.ಬಿ. ಸುರೇಶಬಾಬು ಅವರನ್ನು ರಾಜಕೀಯ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡಲು ಕುಮಾರಸ್ವಾಮಿ ನಿರ್ಧರಿಸಿದ್ದರು. ಅದೇ ಸಮುದಾಯಕ್ಕೆ ಸೇರಿರುವ ತಿಪ್ಪೇಸ್ವಾಮಿ ಅವರನ್ನು ಪರಿಷತ್ತಿಗೆ ನಾಮನಿರ್ದೇಶನ ಮಾಡುವ ಜತೆಗೆ ರಾಜಕೀಯ ಕಾರ್ಯದರ್ಶಿ ಹುದ್ದೆ ಕೊಡಿಸಿ ಸುರೇಶಬಾಬು ಅವರಿಗೆ ಹುದ್ದೆ ತಪ್ಪಿಸುವುದು ರೇವಣ್ಣ ಲೆಕ್ಕಾಚಾರ ಎಂದು ಮೂಲಗಳು ಹೇಳಿವೆ.

‘ಕುಟುಂಬ ಆಪ್ತರು’ ಎಂಬ ಕಾರಣಕ್ಕೆ ಟಿ.ಎ. ಶರವಣ, ಕೆ.ವಿ. ನಾರಾಯಣಸ್ವಾಮಿ ಹಾಗೂ ಎಚ್.ಎಂ. ರಮೇಶಗೌಡ ಅವರನ್ನು ಪರಿಷತ್ತಿನ ಸದಸ್ಯರಾಗಿಸುವಲ್ಲಿ ರೇವಣ್ಣ ಯಶಸ್ವಿಯಾಗಿದ್ದರು. ಈಗ ಮತ್ತೊಂದು ಸ್ಥಾನವನ್ನೂ ದಕ್ಕಿಸಿಕೊಂಡು ಪಕ್ಷದಲ್ಲಿ ‘ಪ್ರಾಬಲ್ಯ’ ಮುಂದುವರಿಸಿದ್ದಾರೆ. ಈ ಸ್ಥಾನದತ್ತ ನಿರೀಕ್ಷೆ ಇಟ್ಟುಕೊಂಡಿದ್ದರಮೇಶಬಾಬು, ಎನ್.ಎಚ್. ಕೋನರಡ್ಡಿ ಅವರಿಗೆ ಸ್ಥಾನ ತಪ್ಪುವುದು ಖಚಿತವಾಗಿದೆ ಎಂದೂ ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.