ADVERTISEMENT

ವೈಫಲ್ಯ ಮುಚ್ಚಿಕೊಳ್ಳಲು ‘ಬುಲ್ಡೋಜರ್’ ಜಪ: ಎಚ್‌.ಡಿ.ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 30 ಜುಲೈ 2022, 4:28 IST
Last Updated 30 ಜುಲೈ 2022, 4:28 IST
ಎಚ್‌.ಡಿ.ಕುಮಾರಸ್ವಾಮಿ
ಎಚ್‌.ಡಿ.ಕುಮಾರಸ್ವಾಮಿ   

ಬೆಂಗಳೂರು: ಸಂವಿಧಾನದ ಮೇಲೆ ಗೌರವ ಇಲ್ಲದವರು ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಉತ್ತರ ಪ್ರದೇಶದ ಬುಲ್ಡೋಜರ್ ಮಾದರಿಯ ಜಪ ಮಾಡುತ್ತಿದ್ದಾರೆ. ಇದು ಹೊಣೆಗೇಡಿತನದ ಪರಮಾವಧಿ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಕಿಡಿಕಾರಿದ್ದಾರೆ.

ಸರಣಿ ಟ್ವೀಟ್‌ಗಳ ಮೂಲಕ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಅವರು, ‘ನೀವು ಬಿಜೆಪಿಗಷ್ಟೇ ಮುಖ್ಯಮಂತ್ರಿಯಲ್ಲ. ಜನತಾ ಪರಿವಾರಿ ಆಗಿದ್ದವರು ಇಂದು ಸಂಘ ಪರಿವಾರಿಯಾಗಿ ರೂಪಾಂತರಗೊಂಡಿದ್ದೀರಿ. ನಿಮ್ಮ ತಂದೆ ಎಸ್.ಆರ್.ಬೊಮ್ಮಾಯಿ ಎಂ.ಎನ್.ರಾಯ್ ಅವರ ಅನುಯಾಯಿ. ಅವರ ಪುತ್ರರಾಗಿ ಸಂವಿಧಾನ ವಿರೋಧಿ ಮಾದರಿ ಮಾತನಾಡುತ್ತಿರುವುದು ಅತೀವ ಆಘಾತ ಉಂಟು ಮಾಡಿದೆ. ನಿಮ್ಮ ನಡೆ ಸಹಜ ನ್ಯಾಯ, ಸಂವಿಧಾನಕ್ಕೆ ವಿರುದ್ಧ’ ಎಂದು ಟೀಕಿಸಿದ್ದಾರೆ.

‘ಕೊಲೆಗೆ ಕೊಲೆ, ಪ್ರತೀಕಾರಕ್ಕೆ ಪ್ರತೀಕಾರ ಪ್ರತ್ಯುತ್ತರವಲ್ಲ. ಮುಖ್ಯಮಂತ್ರಿ ನಡೆ ಹಿಂಸೆ ಪ್ರಚೋದಿಸುವಂತಿದೆ. ಕೊಲೆಯಾದ ಇಬ್ಬರೂ ಯುವಕರ ಮನೆಗಳಿಗೆ ಭೇಟಿ ನೀಡಿ ಕೊಲೆಗೆಡುಕರಿಗೆ ಕಠಿಣ ಸಂದೇಶ ರವಾನಿಸಬೇಕಿತ್ತು. ನೀವು ಮಂಗಳೂರಿನಲ್ಲಿ ಇದ್ದಾಗಲೇ ಇನ್ನೊಂದು ಕೊಲೆ ನಡೆಯಿತು ಎಂದರೆ ಆಡಳಿತ ವೈಫಲ್ಯಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಾ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.