ADVERTISEMENT

ಶಾಸಕ ಜಮೀರ್‌ ಮನೆಗೆ ಜೆಡಿಎಸ್‌ ಕಾರ್ಯಕರ್ತರ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2021, 19:30 IST
Last Updated 4 ಏಪ್ರಿಲ್ 2021, 19:30 IST
ಕುಮಾರಸ್ವಾಮಿ ವಿರುದ್ಧದ ವರ ಬಣ್ಣದ ಕುರಿತ ಹೇಳಿಕೆಗೆ ಕ್ಷಮೆ ಯಾಚಿಸುವಂತೆ ಆಗ್ರಹಿಸಿ ಜೆಡಿಎಸ್‌ ಯುವ ಘಟಕದ ಸದಸ್ಯರು ಕಾಂಗ್ರೆಸ್‌ ಶಾಸಕ ಬಿ.ಜೆಡ್. ಜಮೀರ್‌ ಅಹಮ್ಮದ್ ಖಾನ್‌ ಮನೆ ಎದುರು ಭಾನುವಾರ ಪ್ರತಿಭಟನೆ ನಡೆಸಿದರು.
ಕುಮಾರಸ್ವಾಮಿ ವಿರುದ್ಧದ ವರ ಬಣ್ಣದ ಕುರಿತ ಹೇಳಿಕೆಗೆ ಕ್ಷಮೆ ಯಾಚಿಸುವಂತೆ ಆಗ್ರಹಿಸಿ ಜೆಡಿಎಸ್‌ ಯುವ ಘಟಕದ ಸದಸ್ಯರು ಕಾಂಗ್ರೆಸ್‌ ಶಾಸಕ ಬಿ.ಜೆಡ್. ಜಮೀರ್‌ ಅಹಮ್ಮದ್ ಖಾನ್‌ ಮನೆ ಎದುರು ಭಾನುವಾರ ಪ್ರತಿಭಟನೆ ನಡೆಸಿದರು.   

ಬೆಂಗಳೂರು: ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಪ್ರಚಾರ ಸಭೆಯಲ್ಲಿ ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಕುರಿತು ಜನಾಂಗೀಯ ನಿಂದನೆಯ ಮಾಡಿರುವ ಆರೋಪದ ಮೇಲೆ ಜೆಡಿಎಸ್‌ ಯುವ ಘಟಕದ ಕಾರ್ಯಕರ್ತರು ಭಾನುವಾರ ಕಾಂಗ್ರೆಸ್‌ ಶಾಸಕ ಬಿ.ಜೆಡ್‌. ಜಮೀರ್‌ ಅಹಮ್ಮದ್ ಖಾನ್‌ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಜೆಡಿಎಸ್‌ ಬೆಂಗಳೂರು ಮಹಾನಗರ ಯುವ ಘಟಕದ ಅಧ್ಯಕ್ಷ ಪ್ರವೀಣ್‌ ಕುಮಾರ್‌ ನೇತೃತ್ವದಲ್ಲಿ ಶಿವಾಜಿನಗರ ಕಂಟೋನ್ಮೆಂಟ್‌ ಪ್ರದೇಶದಲ್ಲಿರುವ ಜಮೀರ್‌ ಅಹಮ್ಮದ್ ಮನೆಯ ಪ್ರವೇಶ ದ್ವಾರದ ಬಳಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಜಮೀರ್‌ ವಿರುದ್ಧ ಘೋಷಣೆ ಕೂಗಿದರು.

‘ಕುಮಾರಸ್ವಾಮಿ ಅವರ ಮೈ ಬಣ್ಣದ ಕುರಿತು ಚುನಾವಣಾ ಪ್ರಚಾರ ಸಭೆಯಲ್ಲಿ ಜಮೀರ್‌ ಅಹಮ್ಮದ್ ಕೀಳಾಗಿ ಮಾತನಾಡಿದ್ದಾರೆ. ಅವರ ವಿರುದ್ಧ ಜನಾಂಗೀಯ ನಿಂದನೆ ಆರೋಪದಡಿ ಪ್ರಕರಣ ದಾಖಲಿಸಬೇಕು. ಜಮೀರ್‌ ಅಹಮ್ಮದ್‌ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು’ ಎಂದು ಪಟ್ಟು ಹಿಡಿದ ಪ್ರತಿಭಟನಾಕಾರರು, ಜಮೀರ್‌ ಮನೆಯ ಎದುರು ಧರಣಿ ಮುಂದುವರಿಸಿದರು.

ADVERTISEMENT

ಜಮೀರ್‌ ಅಹಮ್ಮದ್‌ ಮನೆಯಲ್ಲಿ ಇಲ್ಲ ಎಂಬ ಮಾಹಿತಿ ನೀಡಿದ ಪೊಲೀಸ್‌ ಅಧಿಕಾರಿಗಳು, ಧರಣಿ ಹಿಂಪಡೆಯುವಂತೆ ಪ್ರತಿಭಟನಾಕಾರರ ಮನವೊಲಿಕೆಗೆ ಯತ್ನಿಸಿದರು. ಲಿಖಿತವಾಗಿ ದೂರು ನೀಡಿದರೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಬಳಿಕ ಜೆಡಿಎಸ್‌ ಕಾರ್ಯಕರ್ತರು ಧರಣಿ ಅಂತ್ಯಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.