ನಿಖಿಲ್ ಕುಮಾರಸ್ವಾಮಿ
– ಫೇಸ್‌ಬುಕ್ ಚಿತ್ರ
ನವದೆಹಲಿ: ಯುವ ಜನತಾದಳ ರಾಜ್ಯ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ನವದೆಹಲಿಯಲ್ಲಿ ಸೋಮವಾರ ಭೇಟಿಯಾಗಿ ಮಾತುಕತೆ ನಡೆಸಿದರು.
ಮುಂಬರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಬಗ್ಗೆ ಅವರಲ್ಲಿ ಚರ್ಚೆ ನಡೆಸಲಾಯಿತು. ತಳಮಟ್ಟದಲ್ಲಿ ಎನ್‌ಡಿಎ ಮೈತ್ರಿಕೂಟವನ್ನು ಬಲಪಡಿಸುವ ನಿಟ್ಟಿನಲ್ಲಿ ಅಮಿತ್ ಶಾ ನನಗೆ ಮಾರ್ಗದರ್ಶನ ಮಾಡಿದರು ಎಂದು ನಿಖಿಲ್ ತಿಳಿಸಿದರು.
‘ದೇವೇಗೌಡರ ಬಗ್ಗೆ ಶಾಸಕ ಸಿ.ಪಿ.ಯೋಗೇಶ್ವರ್ ಕೀಳುಮಟ್ಟದ ಟೀಕೆ ಮಾಡಿದ್ದಾರೆ. ಅರವತ್ತು ವರ್ಷ ಜನಪರವಾಗಿ ಕೆಲಸ ಮಾಡಿರುವ ದೇವೇಗೌಡರ ಬಗ್ಗೆ ಇಂಥ ಟೀಕೆ ಮಾಡುವುದು ಸರಿಯಲ್ಲ. ಅವರು ಶಾಸಕ ಸ್ಥಾನಕ್ಕೆ ಶೋಭೆ ತರುವ ಮಾತು ಆಡಬೇಕು’ ಎಂದು ತಿರುಗೇಟು ಕೊಟ್ಟರು.
‘ಹಾಸನದಲ್ಲಿ ಕಾಂಗ್ರೆಸ್ ನಾಯಕರು ಜನರ ತೆರಿಗೆ ಹಣದಲ್ಲಿ ಸಮಾವೇಶ ಮಾಡಿಕೊಂಡು ದೇವೆಗೌಡರ ಕುಟುಂಬವನ್ನು ನಿಂದಿಸಿದರು. ಅವರಿಗೆ ಸಮಾವೇಶ ಮಾಡಿ ಉತ್ತರ, ತಿರುಗೇಟು ಕೊಡಬೇಕು ಎಂದು ನಾನಾದರೂ ಭಾವಿಸುವುದಿಲ್ಲ’ ಎಂದು ಅವರು ಹೇಳಿದರು.
‘ನಾನು ಪಕ್ಷದ ಶಿಸ್ತಿನ ಸಿಪಾಯಿ. ಜೆಡಿಎಸ್ ಪಕ್ಷದಿಂದ ನಿಖಿಲ್ ಕುಮಾರಸ್ವಾಮಿಯೇ ಹೊರತು ನಿಖಿಲ್ ಕುಮಾರಸ್ವಾಮಿ ಅವರಿಂದ ಜೆಡಿಎಸ್ ಅಲ್ಲ. ನನ್ನ ಇತಿಮಿತಿಗಳ ಬಗ್ಗೆ ನನಗೆ ಅರಿವಿದೆ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ತಳಮಟ್ಟದ ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ರಾಜಕೀಯ ಶಕ್ತಿ ತುಂಬುತ್ತೇನೆ. ಅವರ ಜತೆಯಲ್ಲಿ ನಿಂತು ಕೆಲಸ ಮಾಡುತ್ತೇನೆ. ನಮ್ಮ ಪಕ್ಷದಲ್ಲಿ ಸಾಕಷ್ಟು ಹಿರಿಯರಿದ್ದಾರೆ, ಹಿರಿಯ ನಾಯಕರ ಮಾರ್ಗದರ್ಶನದಿಂದ ಕಾರ್ಯಕರ್ತನಾಗಿ ದುಡಿಯುತ್ತೇನೆ’ ಎಂದರು.
ರಾಜ್ಯದಲ್ಲಿ ಬಾಣಂತಿಯರು ಸಾಲುಸಾಲಾಗಿ ಸಾಯುತ್ತಿದ್ದಾರೆ. ಕಲಬುರ್ಗಿ ಸೇರಿದಂತೆ ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ತೊಗರಿ ಬೆಳೆಗಾರರು ಸಂಕಷ್ಟದಲ್ಲಿ ಇದ್ದಾರೆ. ಆದರೆ, ಸರ್ಕಾರ ಮಾತ್ರ ಉತ್ಸವ, ಮಹೋತ್ಸವ ನಡೆಸುವುದರಲ್ಲಿ ಕಾಲ ಕಳೆಯುತ್ತಿದೆ ಎಂದು ಅವರು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.