ADVERTISEMENT

ಡಿಪಿಎಲ್‌ ಕ್ರಿಕೆಟ್‌ನಲ್ಲಿ ದಾವಣಗೆರೆಯ ಜಿಲಾನಿ

ವಿದ್ಯುತ್‌ ಶಾಕ್‌ ಹೊಡೆದು ಒಂದು ಕೈ ಸ್ವಾಧೀನ ಕಳೆದುಕೊಂಡಿರುವ ಶಿವನಗರದ ಯುವಕ

ಬಾಲಕೃಷ್ಣ ಪಿ.ಎಚ್‌
Published 11 ಏಪ್ರಿಲ್ 2021, 7:12 IST
Last Updated 11 ಏಪ್ರಿಲ್ 2021, 7:12 IST
ಜಿಲಾನಿ ರಝಾ
ಜಿಲಾನಿ ರಝಾ   

ದಾವಣಗೆರೆ: ಕರೆಂಟ್‌ ಶಾಕ್‌ ಹೊಡೆದು ಎಡಗೈಯ ಸ್ವಾಧೀನವನ್ನೇ ಕಳೆದುಕೊಂಡಿರುವ ದಾವಣಗೆರೆಯ ಯುವಕ ಈಗ ಅಂಗವಿಕಲರ ಕ್ರಿಕೆಟ್‌ನಲ್ಲಿ ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿದ್ದಾರೆ. ಆಲ್‌ ಇಂಡಿಯಾ ಕ್ರಿಕೆಟ್ ಅಸೋಸಿಯೇಶನ್‌ ಫಾರ್‌ ಫಿಸಿಕಲಿ ಚಾಲೆಂಜ್‌ಡ್‌ ಏಪ್ರಿಲ್‌ 15ರಿಂದ ಹರ್ಯಾಣದಲ್ಲಿ ನಡೆಸುತ್ತಿರುವ ದಿವ್ಯಾಂಗ್‌ ಪ್ರೀಮಿಯರ್‌ ಲೀಗ್‌–2 ರಲ್ಲಿ ಮುಂಬೈ ಚಾಂಪ್ಸ್‌ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ಇಲ್ಲಿನ ಶಿವನಗರ ನಾಲ್ಕನೇ ಕ್ರಾಸ್‌ ನಿವಾಸಿ ಜಿಲಾನಿ ರಝಾ ಈ ಪ್ರತಿಭಾವಂತ ಯುವಕ.

ಈಗಾಗಲೇ ಅಂಗವಿಕಲರ ಕ್ರಿಕೆಟ್‌ ಪಂದ್ಯದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ತೆಲಂಗಾಣ, ಆಂದ್ರ, ಕೇರಳ, ತಮಿಳುನಾಡು ವಿರುದ್ಧ ಆಡಿದ್ದಾರೆ. ಒಂದೇ ಕೈಯಲ್ಲಿ ಬ್ಯಾಟ್‌ ಬೀಸುವ, ಲೆಗ್‌ಸ್ಪಿನ್‌ ಬೌಲಿಂಗ್‌ ಮಾಡುವ ಆಲ್‌ರೌಂಡರ್‌ ಆಗಿ ಹೆಸರು ಗಳಿಸಿದ್ದಾರೆ.

ADVERTISEMENT

ಮುಂಬೈ ಚಾಂಪ್ಸ್‌, ಹರ್ಯಾಣ ಹರಿಕೆನಸ್‌, ಡೆಲ್ಲಿ ಡೈನೊಮಸ್‌, ಕೋಲ್ಕತ ಟೈಗರ್ಸ್‌, ಬೆಂಗಳೂರು ವಾರಿಯರ್ಸ್‌ ತಂಡಗಳ ನಡುವೆ ಐಪಿಎಲ್‌ ಮಾದರಿಯಲ್ಲಿ ಡಿಪಿಎಲ್‌ ನಡೆಯುತ್ತಿದೆ. ಮುಂಬೈ ಚಾಂಪ್ಸ್‌ ತಂಡವನ್ನುಜಿಲಾನಿಪ್ರತಿನಿಧಿಸುತ್ತಿದ್ದಾರೆ.

‘15 ವರ್ಷದ ಹುಡುಗನಾಗಿದ್ದ ಸಮಯದಲ್ಲಿ ಅಂದರೆ 2013ರಲ್ಲಿ ನನಗೆ ವಿದ್ಯುತ್‌ ಶಾಕ್‌ ಹೊಡೆಯಿತು. ಎಡಗೈ ಸ್ವಾಧೀನ ಕಳೆದುಕೊಂಡಿತು. ಬಳಿಕ ಹೊಟ್ಟೆಪಾಡಿಗೆ ವ್ಯಾಪಾರ ಮಾಡಿಕೊಂಡು ಸಮಯ ಸಿಕ್ಕಾಗ ಟೆನಿಸ್‌ಬಾಲ್‌ನಲ್ಲಿ ಹುಡುಗರ ಜತೆ ಕ್ರಿಕೆಟ್‌ ಆಡುತ್ತಿದ್ದೆ. ನನ್ನನ್ನು ನೋಡಿದ ದಾವಣಗೆರೆಯ ಕ್ರಿಕೆಟ್‌ ಕೋಚ್‌ ತಿಮ್ಮೇಶ್‌ ಒಂದು ದಿನ ಕರೆದು ಲೆದರ್‌ ಬಾಲ್‌ನಲ್ಲಿ ಆಡುವಂತೆ ತಿಳಿಸಿದರು. ಬಳಿಕ ನನಗೆ ಉಚಿತವಾಗಿ ತರಬೇತಿ ನೀಡಿದರು. ಅವರ ಪ್ರಯತ್ನದಿಂದ ಇಂದು ಅಂಗವಿಕಲರ ಕ್ರಿಕೆಟ್‌ನಲ್ಲಿ ರಾಜ್ಯವನ್ನು ಪ್ರತಿನಿಧಿಸಲು ಸಾಧ್ಯವಾಗಿದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ರಾಷ್ಟ್ರೀಯ ತಂಡದಲ್ಲಿ ಆಡಬೇಕು. ದೇಶವನ್ನು ಪ್ರತಿನಿಧಿಸಬೇಕು. ಹೆಸರು ಗಳಿಸಬೇಕು ಎಂಬ ಉದ್ದೇಶ ಇದೆ ಎಂದು ಕನಸು ಹೇಳಿಕೊಂಡರು.

ಜೀವನಕ್ಕೆ ಹಣ್ಣು, ಈರುಳ್ಳಿ ವ್ಯಾಪಾರ

ಶಿವನಗರ ದಾದಾಪೀರ್‌–ನೂರ್‌ಜಹಾನ್‌ ದಂಪತಿಗೆ ಇಬ್ಬರು ಹೆಣ್ಣುಮಕ್ಕಳು ಏಳು ಗಂಡುಮಕ್ಕಳು. ಈ ಒಂಬತ್ತು ಮಂದಿಯಲ್ಲಿ 8ನೇಯವರೇ ಜಿಲಾನಿ ರಝಾ. ಜೀವನ ನಡೆಸಲು ಹಣ್ಣಿನ ವ್ಯಾಪಾರ ಮಾಡುತ್ತಿದ್ದರು. ಆರು ತಿಂಗಳ ಈಚೆಗೆ ಎಪಿಎಂಸಿ ಬಳಿ ರಸ್ತೆ ಬದಿಯಲ್ಲಿ ಈರುಳ್ಳಿ ವ್ಯಾಪಾರ ಮಾಡುತ್ತಿದ್ದಾರೆ.

ಪ್ರತಿಭಾವಂತ ಹುಡುಗ: ತಿಮ್ಮೇಶ್‌

‘ನಾನು ಹೈಸ್ಕೂಲ್‌ ಫೀಲ್ಡ್‌ನಲ್ಲಿ ಮಕ್ಕಳಿಗೆ ತರಬೇತಿ ನೀಡುತ್ತಿದ್ದೆ. ಆಗ ಜಿಲಾನಿ ಕಣ್ಣಿಗೆ ಬಿದ್ದ. ಒಂದು ವರ್ಷ ತರಬೇತಿ ನೀಡಿದೆ. ಪ್ರತಿಭಾವಂತನಾಗಿರುವ ಜಿಲಾನಿಯನ್ನು ಕರೆದುಕೊಂಡು ಬೆಂಗಳೂರಿಗೆ ಹೋದೆ. ಕಾಂಪಿಟೇಶನ್‌ ಜಾಸ್ತಿ ಇರುವುದರಿಂದ ಅವಕಾಶ ಸಿಗುವುದು ಕಷ್ಟ ಅಂದರು. ಆದರೆ ಜಿಲಾನಿಯ ಆಟ ನೋಡಿದ ಮೇಲೆ ಆಯ್ಕೆ ಮಾಡಿಕೊಂಡರು. ಹುಬ್ಬಳ್ಳಿಯ ಗುಂಜಾಳ್‌ ಅವರು ಪ್ರೋತ್ಸಾಹ ನೀಡಿದರು. ಒಂದೇ ಕೈಯಲ್ಲಿ ಬ್ಯಾಟ್‌ ಬೀಸಿ ಮೈದಾನದ ಮೂಲೆಮೂಲೆಗೆ ಬಾಲ್‌ ಅಟ್ಟುತ್ತಾನೆ. ಈ ಹುಡುಗ ಅಂಗವಿಕಲರ ವಿಭಾಗದಲ್ಲಿ ಒಂದಲ್ಲ ಒಂದು ದಿನ ಭಾರತವನ್ನು ಪ್ರತಿನಿಧಿಸಲಿದ್ದಾನೆ’ ಎಂದು ಕೋಚ್‌ ತಿಮ್ಮೇಶ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.