ADVERTISEMENT

ಜೋಗ ರೋಪ್‌ವೇಗೆ ₹116 ಕೋಟಿ: ಸಂಘ ಸಂಸ್ಥೆಗಳಿಗೆ ಜಮೀನು ಮಂಜೂರು

​ಪ್ರಜಾವಾಣಿ ವಾರ್ತೆ
Published 6 ಜನವರಿ 2022, 19:29 IST
Last Updated 6 ಜನವರಿ 2022, 19:29 IST
ಜೋಗ ಜಲಪಾತ (ಸಂಗ್ರಹ ಚಿತ್ರ)
ಜೋಗ ಜಲಪಾತ (ಸಂಗ್ರಹ ಚಿತ್ರ)   

ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ಜೋಗ ಜಲಪಾತದ ಬಳಿ ಸರ್ಕಾರಿ– ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ₹ 116 ಕೋಟಿ ವೆಚ್ಚದಲ್ಲಿ ಪಂಚತಾರಾ ಹೋಟೆಲ್‌ ಮತ್ತು ರೋಪ್‌ ವೇ ನಿರ್ಮಿಸುವ ಯೋಜನೆಗೆ ಸಂಪುಟ ಸಭೆ ಅನುಮೋದನೆ ನೀಡಿದೆ.

‘ಜೋಗವನ್ನು ಅಂತರರಾಷ್ಟ್ರೀಯ ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ಈ ಯೋಜನೆ ರೂಪಿಸಲಾಗಿದೆ. ಪಂಚತಾರಾ ಹೋಟೆಲ್‌ನಲ್ಲಿ ಎಲ್ಲ ಕೊಠಡಿಗಳಿಗೂ ಇಂಟರ್‌ನೆಟ್‌ ಸಂಪರ್ಕ ಕಲ್ಪಿಸುವುದು, ಐಷಾರಾಮಿ ಕಾಫಿ ಬಾರ್‌ಗಳ ನಿರ್ಮಾಣ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗುವುದು’ ಎಂದು ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಜಮೀನು ಮಂಜೂರು:

ADVERTISEMENT

l ಮಠಗಳು, ಜಾತಿ ಸಂಘಟನೆಗಳು, ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರಿ ಜಮೀನುಗಳನ್ನು ಮಂಜೂರು ಮಾಡುವ ಪ್ರಸ್ತಾವಗಳಿಗೆ ಸಂಪುಟ ಸಭೆ ಒಪ್ಪಿಗೆ ನೀಡಿದೆ.

l ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಹಿರೀಸಾವೆ ಹೋಬಳಿಯ ಕಬ್ಬಳ್ಳಿ ಗ್ರಾಮದಲ್ಲಿ ಆದಿಚುಂಚನಗಿರಿ ಮಠಕ್ಕೆ 22 ಎಕರೆ 36 ಗುಂಟೆ ಜಮೀನನ್ನು ಮಾರ್ಗಸೂಚಿ ದರದ ಶೇ 25ರಷ್ಟು ಮೊತ್ತ ವಿಧಿಸಿ ಮಂಜೂರು ಮಾಡಲು ಒಪ್ಪಿಗೆ ನೀಡಲಾಗಿದೆ.

l ಬಾಗಲಕೋಟೆ ತಾಲ್ಲೂಕಿನ ಶೀಗಿಕೇರಿ ಗ್ರಾಮದಲ್ಲಿ ಪರಿವರ್ತನ ಸಾಮಾಜಿಕ ಸೇವಾ ಸಂಘಕ್ಕೆ 5 ಎಕರೆ ಸರ್ಕಾರಿ ಗೋಮಾಳ ಜಮೀನು ಉಚಿತವಾಗಿ ಮಂಜೂರಾತಿಗೆ ಅನುಮೋದನೆ ನೀಡಲಾಗಿದೆ. ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ನವರಸಪೂರ ಗ್ರಾಮದಲ್ಲಿ ಸಿದ್ಧಲಿಂಗೇಶ್ವರ ವಿದ್ಯಾ ಅಭಿವೃದ್ಧಿ ಟ್ರಸ್ಟ್‌ಗೆ 5 ಎಕರೆ ಜಮೀನು ಮಂಜೂರು

l ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲ್ಲೂಕಿನ ಮಾರ್ಪಾಡಿ ಗ್ರಾಮದಲ್ಲಿ ಪ್ರೇರಣಾ ಸೇವಾ ಟ್ರಸ್ಟ್‌ಗೆ 25 ಸೆಂಟ್ಸ್‌ ಮತ್ತು ಉಡುಪಿ ಜಿಲ್ಲೆಯ ಕಾಪು ತಾಲ್ಲೂಕಿನ ಪಡುಗ್ರಾಮದಲ್ಲಿ ಕಾಪು ಬಂಟರ ಸಂಘಕ್ಕೆ 10 ಗುಂಟೆ ಜಮೀನು ಮಂಜೂರು ಮಾಡಲು ಒಪ್ಪಿಗೆ ದೊರಕಿದೆ.

l ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ರಾಜಘಟ್ಟ ಗ್ರಾಮದಲ್ಲಿ ಮಾರುತಿ ಎಜುಕೇಷನ್‌ ಟ್ರಸ್ಟ್‌ಗೆ ಗುತ್ತಿಗೆಗೆ ನೀಡಿರುವ 2 ಎಕರೆ 8 ಗುಂಟೆ ಜಮೀನಿಗೆ ಬಾಡಿಗೆಯನ್ನು ಪರಿಷ್ಕರಿಸಿ, ಮಾರ್ಗಸೂಚಿ ದರದ ಶೇ 50ರ ಮೊತ್ತದಲ್ಲಿ ಶೇ 1ರಷ್ಟನ್ನು ವಿಧಿಸಲು ತೀರ್ಮಾನಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.