ADVERTISEMENT

ಹಿಂದಿ ಸಿನಿಮಾ ಜಾಲಿ LLB ತಡೆಗೆ ನಕಾರ: ಅರ್ಜಿದಾರರಿಗೆ ₹50ಸಾವಿರ ದಂಡ: ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 15:50 IST
Last Updated 18 ಸೆಪ್ಟೆಂಬರ್ 2025, 15:50 IST
<div class="paragraphs"><p>ದಂಡ (ಸಾಂದರ್ಭಿಕ ಚಿತ್ರ)</p></div>

ದಂಡ (ಸಾಂದರ್ಭಿಕ ಚಿತ್ರ)

   

– ಐಸ್ಟಾಕ್ ಚಿತ್ರ

ಬೆಂಗಳೂರು: ಇದೇ 19ರಂದು (ಶುಕ್ರವಾರ) ಬಿಡುಗಡೆಯಾಗಲಿರುವ ‘ಜಾಲಿ ಎಲ್‌ಎಲ್‌ಬಿ-3’ ಹಿಂದಿ ಭಾಷೆಯ ಚಲನಚಿತ್ರದ ಬಿಡುಗಡೆ ಮತ್ತು ಪ್ರದರ್ಶನಕ್ಕೆ ತಡೆ ನೀಡುವಂತೆ ಕೋರಲಾಗಿದ್ದ ಅರ್ಜಿಯನ್ನು ವಜಾಗೊಳಿಸಿರುವ ಹೈಕೋರ್ಟ್‌, ಅರ್ಜಿದಾರರಿಗೆ ₹50 ಸಾವಿರ ದಂಡ ವಿಧಿಸಿದೆ.

ADVERTISEMENT

ಈ ಸಂಬಂಧ ಬೆಂಗಳೂರಿನ ಮಂಜುನಾಥ ನಗರದ ಸಯೀದಾ ನಿಲೂಫರ್‌ (27) ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿ ಈ ಕುರಿತಂತೆ ಆದೇಶಿಸಿದೆ.

‘ದಂಡದ ಮೊತ್ತವನ್ನು ಹೈಕೋರ್ಟ್‌ನ ರಿಜಿಸ್ಟ್ರಾರ್ ಕಚೇರಿಯಲ್ಲಿ ಠೇವಣಿ ಇರಿಸಬೇಕು. ಒಂದು ವೇಳೆ ದಂಡದ ಮೊತ್ತ ಪಾವತಿ ಮಾಡದೇ ಇದ್ದಲ್ಲಿ ಅರ್ಜಿದಾರರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕಾಗಿ ಅರ್ಜಿಯನ್ನು ಅಕ್ಟೋಬರ್ 4ರಂದು ಪುನಃ ವಿಚಾರಣೆಗೆ ಪಟ್ಟಿ ಮಾಡಲಾಗುವುದು’ ಎಂದು ನ್ಯಾಯಪೀಠ ತಿಳಿಸಿದೆ.

‘ಚಲನಚಿತ್ರವು, ನ್ಯಾಯಾಲಯದ ದೃಶ್ಯಗಳ ಮೂಲಕ ಹಾಸ್ಯಪ್ರಜ್ಞೆಯಿಂದ ಪ್ರೇಕ್ಷಕರನ್ನು ಆಕರ್ಷಿಸಲು ಉದ್ದೇಶಿಸಿದಂತೆ ತೋರುತ್ತದೆ. ಆದರೆ, ಅರ್ಜಿದಾರರನ್ನು ಆ ಹಾಸ್ಯ ಪ್ರಜ್ಞೆ ಆಕರ್ಷಿಸಿಲ್ಲ’ ಎಂದು ಕುಟುಕಿರುವ ನ್ಯಾಯಪೀಠ, ‘ಸೃಜನಶೀಲತೆಯನ್ನು ಹತ್ತಿಕ್ಕುವುದು ಮತ್ತು ಅಭಿವ್ಯಕ್ತಿ ನಿಯಂತ್ರಣ ಮಾಡುವಂತೆ ಆದೇಶ ನೀಡಲು ಸಾಧ್ಯವಿಲ್ಲ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ಅರ್ಜಿಯಲ್ಲಿ ಏನಿತ್ತು?: ‘ಚಿತ್ರದಲ್ಲಿರುವ ಸಂಭಾಷಣೆ ಮತ್ತು ದೃಶ್ಯಗಳು ಮಾನಹಾನಿಕಾರಕ ಎನಿಸುವಂತಿವೆ. ಭಾರತೀಯ ನ್ಯಾಯ ಸಂಹಿತೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಗಳ ಉಲ್ಲಂಘನೆ ಮಾಡಿದಂತಿದೆ. ಆದ್ದರಿಂದ, ಚಿತ್ರದ ನಟರು, ನಿರ್ಮಾಪಕರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗಲು ಸಂಬಂಧಿಸಿದ ಪ್ರಾಧಿಕಾರಗಳಿಗೆ ನಿರ್ದೇಶಿಸಬೇಕು. ಚಿತ್ರದ ನಿರ್ಮಾಪಕರು ಹಾಗೂ ಮತ್ತು ನಟರು ರಾಷ್ಟ್ರೀಯ ಪತ್ರಿಕೆಗಳಲ್ಲಿ ಕ್ಷಮೆ ಯಾಚಿಸುವಂತೆಯೂ ಆದೇಶಿಸಬೇಕು’ ಎಂದು ಅರ್ಜಿದಾರರು ಕೋರಿದ್ದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.