ADVERTISEMENT

ಸೆಷನ್ ಮುಗಿಸಿ ಬಂದಿದ್ದ ‘ಇಂದು ಸಂಜೆ’ ವರದಿಗಾರ ದೊಡ್ಡಬೊಮಯ್ಯ ಹೃದಯಾಘಾತದಿಂದ ನಿಧನ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2025, 6:21 IST
Last Updated 20 ಡಿಸೆಂಬರ್ 2025, 6:21 IST
<div class="paragraphs"><p>ದೊಡ್ಡಬೊಮಯ್ಯ</p></div>

ದೊಡ್ಡಬೊಮಯ್ಯ

   

ಬೆಂಗಳೂರು: ಹಿರಿಯ ಪತ್ರಕರ್ತ ಹಾಗೂ ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಉಪಾಧ್ಯಕ್ಷ ದೊಡ್ಡಬೊಮಯ್ಯ ಅವರು ಇಂದು ನಿಧನರಾಗಿದ್ದಾರೆ.

ಮೂಲತಃ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ರೊಪ್ಪ ಗ್ರಾಮದ ದೊಡ್ಡಯ್ಯ ಮತ್ತು ಚಿಕ್ಕಮ ದಂಪತಿಯ ಪುತ್ರರಾದ ದೊಡ್ಡಬೊಮಯ್ಯ ಅವರು ಈ ಮೊದಲು ಸಂಜೆ ವಾಣಿ ಮತ್ತು ಪ್ರಸ್ತುತ ಇಂದು ಸಂಜೆ ಪತ್ರಿಕೆಯಲ್ಲಿ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಅರೆಕಾಲಿಕ ಸಹಾಯಕ ಸುದ್ದಿ ಸಂಪಾದಕರಾಗಿ ಕೆಲಸ ಮಾಡಿದ್ದರು. ಸುಮಾರು 30 ವರ್ಷ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ್ದ ಅವರು, ಅಪಾರವಾದ ಆತ್ಮೀಯ ಬಳಗವನ್ನು ಗಳಿಸಿಕೊಂಡಿದ್ದರು.

ADVERTISEMENT

ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನದ ಕಾರ್ಯಕಲಾಪಗಳ ವರದಿಗಾಗಿ ತೆರಳಿದ್ದ ಅವರು ಇಂದು ಬೆಳಗ್ಗೆ ಬೆಂಗಳೂರಿಗೆ ವಾಪಸ್ಸಾಗಿದರು. ಕೆಎಸ್‌‍ಆರ್‌ಟಿಸಿ ಬಸ್‌ನಿಂದ ಇಳಿದು, ಬಾಗಲೂರಿನಲ್ಲಿರುವ ತಮ ಮನೆ ತಲುಪಲು ಬಿಎಂಟಿಸಿ ಬಸ್‌‍ ಹತ್ತಿದ್ದ ಸಂದರ್ಭದಲ್ಲಿ ತೀವ್ರ ಹೃದಯಾಘಾತವಾಗಿದೆ. ಸಹಪ್ರಯಾಣಿಕರು ಉಪಚರಿಸಿದ ಹೊರತಾಗಿಯೂ ಬಸ್‌ನಲ್ಲಿಯೇ ನಿಧನ ಹೊಂದಿದ್ದಾರೆ.

ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಉಪಾಧ್ಯಕ್ಷರಾಗಿದ್ದರು. ಪ್ರೆಸ್‌‍ ಕ್ಲಬ್‌ ಪದಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದರು.

ಅವರ ನಿಧನಕ್ಕೆ ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ರಮೇಶ್‌ಪಾಳ್ಯ, ಸಂಘದ ಪದಾಧಿಕಾರಿಗಳು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಪ್ರೆಸ್‌‍ಕ್ಲಬ್‌ ಅಧ್ಯಕ್ಷ ಶ್ರೀಧರ್‌, ಪ್ರಧಾನ ಕಾರ್ಯದರ್ಶಿ ಶಿವಕುಮಾರ್‌ ಬೆಳ್ಳಿತಟ್ಟೆ, ವರದಿಗಾರರ ಕೂಟದ ಅಧ್ಯಕ್ಷ ಆರ್‌.ಟಿ.ವಿಠಲ ಮೂರ್ತಿ ಮತ್ತಿತರ ಹಿರಿಯ ಪತ್ರಕರ್ತರು ಶೋಕ ವ್ಯಕ್ತಪಡಿಸಿದ್ದಾರೆ.