
ಶಾಖೋತ್ಪನ್ನ ವಿದ್ಯುತ್ ಸ್ಥಾವರ
ಬೆಂಗಳೂರು: ಸುಮಾರು 18 ವರ್ಷಗಳಿಂದ ನನೆಗುದಿಯಲ್ಲಿದ್ದ 1,600 ಮೆಗಾವಾಟ್ ಸಾಮರ್ಥ್ಯದ ಗೋದ್ನಾ ಶಾಖೋತ್ಪನ್ನ ವಿದ್ಯುತ್ ಯೋಜನೆಯನ್ನು ಜಿಂದಾಲ್ ಸೌತ್ ವೆಸ್ಟ್ (ಜೆಎಸ್‌ಡಬ್ಲ್ಯು) ಎನರ್ಜಿ ಕಂಪನಿ ಕೈಗೆತ್ತಿಕೊಳ್ಳಲಿದೆ. ಇದಕ್ಕೆ ಸಂಬಂಧಿಸಿದಂತೆ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) ಸದ್ಯದಲ್ಲೇ ಒಪ್ಪಂದ ಮಾಡಿಕೊಳ್ಳಲಿದೆ.
ಸಾರ್ವಜನಿಕ–ಖಾಸಗಿ ಸಹಭಾಗಿತ್ವದ(ಪಿಪಿಪಿ) ಈ ಯೋಜನೆಯನ್ನು ಛತ್ತೀಸಗಢದ ಗೋದ್ನಾದಲ್ಲಿ ಕರ್ನಾಟಕ ಸರ್ಕಾರ ಆರಂಭಿಸುತ್ತಿದೆ. ಇದರ ಅನುಷ್ಠಾನದ ಹೊಣೆಯನ್ನು ಜೆಎಸ್‌ಡಬ್ಲ್ಯುಗೆ ನೀಡುವುದಕ್ಕೆ ಈ ತಿಂಗಳ 8ರಂದು ನಡೆದ ಕೆಪಿಸಿಎಲ್ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ಈ ಯೋಜನೆಯನ್ನು ಪಿಪಿಪಿ ಮಾದರಿಯಲ್ಲಿ ಕೈಗೆತ್ತಿಕೊಳ್ಳಲು ಕೆಪಿಸಿಎಲ್ ಟೆಂಡರ್ ಕರೆದಿತ್ತು. ಇದರಲ್ಲಿ ಎರಡು ಕಂಪನಿಗಳು ಭಾಗವಹಿಸಿದ್ದವು. ಜೆಎಸ್‌ಡಬ್ಲ್ಯು ಕಡಿಮೆ ಬಿಡ್ ಮಾಡಿದ್ದ ಕಾರಣ, ಆ ಕಂಪನಿಗೆ ನೀಡಲು ಸಭೆಯ ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮತಿ ಸೂಚಿಸಿದರು ಎಂದು ಇಂಧನ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.
ಜೆಎಸ್‌ಡಬ್ಲ್ಯು ಎನರ್ಜಿ ಕಂಪನಿಯು ಒಂದು ಯೂನಿಟ್‌ಗೆ ₹4.05 ಹಾಗೂ ಡಿಬಿ ಪವರ್ ಲಿಮಿಟೆಡ್ ₹4.20 ದರ ನಿಗದಿ ಮಾಡುವಂತೆ ಕೋರಿದ್ದವು. ಕಡಿಮೆ ದರ, ತಾಂತ್ರಿಕ ಸಾಮರ್ಥ್ಯ ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಂಡು ಜೆಎಸ್‌ಡಬ್ಲ್ಯು ಆಯ್ಕೆ ಮಾಡಲಾಗಿದೆ.
‘ಯೋಜನೆ ಪೂರ್ಣಗೊಂಡ ಬಳಿಕ ಅದಕ್ಕೆ ಎಷ್ಟು ಹಣ ವೆಚ್ಚವಾಗಿದೆ, ಮಾರುಕಟ್ಟೆಯಲ್ಲಿ ಕಲ್ಲಿದ್ದಲು ದರ ಎಷ್ಟಿದೆ ಎಂಬುದನ್ನು ಆಧರಿಸಿ, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು (ಕೆಇಆರ್‌ಸಿ) ಯೂನಿಟ್‌ಗೆ ಎಷ್ಟು ದರ ಎಂಬುದನ್ನು ನಿಗದಿ ಮಾಡಲಿದೆ. ಟೆಂಡರ್‌ನಲ್ಲಿ ಈಗ ನಿಗದಿ ಮಾಡಿರುವ ದರದಲ್ಲಿ ಸ್ವಲ್ಪಮಟ್ಟಿಗೆ ವ್ಯತ್ಯಾಸ ಆದರೂ ಆಗಬಹುದು’ ಎಂದು ಅಧಿಕಾರಿಯೊಬ್ಬರು ವಿವರಿಸಿದರು.
ಈ ಯೋಜನೆಗೆ ಸುಮಾರು ₹18 ಸಾವಿರ ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಜೆಎಸ್‌ಡಬ್ಲ್ಯು ಶೇ 74ರಷ್ಟು ಹಾಗೂ ಕೆಪಿಸಿಎಲ್ ಶೇ 26ರಷ್ಟು ಮೊತ್ತವನ್ನು ಭರಿಸಲಿದೆ. ಯೋಜನೆ 45 ತಿಂಗಳಲ್ಲಿ ಪೂರ್ಣಗೊಳ್ಳಬಹುದು ಎಂದು ಅಂದಾಜಿಸಲಾಗಿದೆ.
ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ 2008ರಲ್ಲಿ ಛತ್ತೀಸಗಢ ಸರ್ಕಾರದೊಂದಿಗೆ ‘ಗೋದ್ನಾ ಯೋಜನೆ’ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈ ಯೋಜನೆಗಾಗಿ 1,016 ಎಕರೆ ಖಾಸಗಿ ಜಮೀನು ಹಾಗೂ 160 ಎಕರೆ ಸರ್ಕಾರಿ ಜಮೀನನ್ನು ಈಗಾಗಲೇ ಸ್ವಾಧೀನಪಡಿಸಿ ಕೊಳ್ಳಲಾಗಿದೆ. ಇದಕ್ಕಾಗಿ ಸುಮಾರು ₹220 ಕೋಟಿ ವೆಚ್ಚವಾಗಿದೆ.
ಕಲ್ಲಿದ್ದಲು ಹಂಚಿಕೆ: ಗೋದ್ನಾದ ಸಮೀಪದಲ್ಲೇ ಎರಡು ಕಲ್ಲಿದ್ದಲು ಗಣಿಗಳನ್ನು ಕೇಂದ್ರ ಸರ್ಕಾರವು 2019ರಲ್ಲಿ ಕೆಪಿಸಿಎಲ್‌ಗೆ ಹಂಚಿಕೆ ಮಾಡಿದೆ. 1,600 ಮೆಗಾವಾಟ್ ವಿದ್ಯುತ್ ಉತ್ಪಾದನೆಗಾಗಿ ವರ್ಷಕ್ಕೆ 70 ಲಕ್ಷ ಟನ್ ಕಲ್ಲಿದ್ದಲು ಬೇಕಾಗುತ್ತದೆ. 21 ಕೋಟಿ ಟನ್ ಕಲ್ಲಿದ್ದಲು ಅಲ್ಲಿ ಲಭ್ಯವಿದ್ದು, 30 ವರ್ಷಗಳವರೆಗೆ ಬಳಸಬಹುದು ಎಂದು ಅಂದಾಜಿಸಲಾಗಿದೆ.
ಈ ಯೋಜನೆಗೆ ಅಗತ್ಯವಿರುವ ನೀರನ್ನು ಮಹಾನದಿಯಿಂದ ಬಳಸಿಕೊಳ್ಳಲಾಗುತ್ತದೆ. ನದಿಯಿಂದ ಗೋದ್ನಾಗೆ ನೀರು ತರಲು ಬ್ಯಾರೇಜ್ ನಿರ್ಮಾಣಕ್ಕಾಗಿ ₹64 ಕೋಟಿ ವೆಚ್ಚ ಮಾಡಲಾಗಿದೆ.
ಭೂ ಸ್ವಾಧೀನ, ಕಲ್ಲಿದ್ದಲು ಗಣಿ ಹಂಚಿಕೆಯಲ್ಲಿ ಆದ ವಿಳಂಬ ಸೇರಿದಂತೆ ಹಲವು ಕಾರಣಗಳಿಂದ ಈ ಯೋಜನೆ ನನೆಗುದಿಯಲ್ಲಿತ್ತು. ಈಗ ಎಲ್ಲ ಅಡೆತಡೆಗಳು ನಿವಾರಣೆಯಾಗಿ, ಯೋಜನೆಗೆ ದಾರಿ ಸುಗಮವಾಗಿದೆ.
ಕಲ್ಲಿದ್ದಲು ಹಗರಣ ಬಯಲಿಗೆ ಬಂದ ನಂತರ, ಕೇಂದ್ರ ಸರ್ಕಾರ ಹೊಸದಾಗಿ ಕಲ್ಲಿದ್ದಲು ಗಣಿಗಳ ಹಂಚಿಕೆ ಮಾಡಲಿಲ್ಲ. ಹೀಗಾಗಿ ಕಲ್ಲಿದ್ದಲು ಹಂಚಿಕೆಗಾಗಿ 2019ರವರೆಗೂ ಕಾಯಬೇಕಾಯಿತು. ಕೋವಿಡ್‌ನಿಂದಾಗಿ 2–3 ವರ್ಷ ಯಾವುದೇ ಹೊಸ ಯೋಜನೆಗಳತ್ತ ಸರ್ಕಾರ ಗಮನಹರಿಸಲಿಲ್ಲ.
ಈಚೆಗೆ ವಿದ್ಯುತ್‌ಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಭವಿಷ್ಯದಲ್ಲೂ ಬೇಡಿಕೆ ಮತ್ತು ಪೂರೈಕೆ ನಡುವಿನ ಅಂತರ ಮತ್ತಷ್ಟು ಹೆಚ್ಚಾಗಲಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ಯೋಜನೆಗೆ ಮರು ಜೀವ ನೀಡಿದೆ ಎಂದು ಅಧಿಕಾರಿಯೊಬ್ಬರು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.