ಕಾರ್ಯಕ್ರಮದಲ್ಲಿ ವೀರಪ್ಪ ಮೊಯಿಲಿ ಅವರು ಕೆ.ಎಚ್. ಪಾಟೀಲ ಕಾನೂನು ಶಾಲೆಯ ಲಾಂಛನವನ್ನು ಅನಾವರಣ ಮಾಡಿದರು. ಎಚ್.ಕೆ. ಪಾಟೀಲ, ಆರ್.ವಿ. ದೇಶಪಾಂಡೆ, ಕೆ.ಜೆ. ಜಾರ್ಜ್, ಬಸವರಾಜ ಹೊರಟ್ಟಿ, ಎಂ.ಎನ್. ವೆಂಕಟಾಚಲಯ್ಯ, ಯು. ಟಿ. ಖಾದರ್ ಉಪಸ್ಥಿತರಿದ್ದರು
–ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಸಹಕಾರ ರಂಗದ ಧುರೀಣರಾದ ಕೆ.ಎಚ್. ಪಾಟೀಲ ಅವರು ನಿಷ್ಠುರ ಹಾಗೂ ರಾಜಿ ಮಾಡಿಕೊಳ್ಳದ ರಾಜಕಾರಣಿಯಾಗಿದ್ದರು. ಸರ್ಕಾರದಿಂದ ಸಾಧ್ಯವಾಗದೇ ಇದ್ದುದನ್ನು ಅವರು ವ್ಯಕ್ತಿಯಾಗಿ ಸಾಧಿಸಿ ತೋರಿಸಿದ್ದರು’ ಎಂದು ಕೆ.ಎಚ್. ಪಾಟೀಲ ಅವರ ಒಡನಾಡಿಗಳು ಹಾಗೂ ಆಪ್ತರು ಸ್ಮರಿಸಿಕೊಂಡರು.
ಸಹಕಾರ ಭೀಷ್ಮ ಕೆ.ಎಚ್. ಪಾಟೀಲ ಅಭಿಮಾನಿಗಳ ಬಳಗ, ಬೆಂಗಳೂರು ನಗರದ ವಿವಿಧ ಸಹಕಾರ ಸಂಘಗಳು, ಕೆ.ಎಚ್. ಪಾಟೀಲ ಮೆಮೋರಿಯಲ್ ಟ್ರಸ್ಟ್ ಜಂಟಿಯಾಗಿ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕೆ.ಎಚ್. ಪಾಟೀಲ ಜನ್ಮಶತಮಾನೋತ್ಸವ ಆಚರಣೆ ಸಮಾರಂಭದಲ್ಲಿ ಭಾಗವಹಿಸಿ, ಮಾತನಾಡಿದರು.
‘ಸಾಧಿಸುವ ಛಲ ಹೊಂದಿದ್ದವರನ್ನು ಯಾರೂ ತಡೆಯಲು ಸಾಧ್ಯವಿಲ್ಲ. ನಾನು ಮತ್ತು ರಾಷ್ಟ್ರಪತಿಯಾಗಿದ್ದ ಅಬ್ದುಲ್ ಕಲಾಂ ಅವರು ಗದಗದ ಹುಲಕೋಟಿಗೆ ಹಿಂದೆ ಭೇಟಿ ನೀಡಿದ್ದೆವು. ಅಲ್ಲಿ ಪಾಟೀಲರು ಮಾಡಿದ ಕೆಲಸವನ್ನು ವೀಕ್ಷಿಸಿ, ಆಶ್ಚರ್ಯಕ್ಕೆ ಒಳಗಾದೆವು. ಸರ್ಕಾರದಿಂದ ಸಾಧ್ಯವಾಗದ್ದನ್ನು ಅವರು ಸಾಧಿಸಿ ತೋರಿಸಿದ್ದರು. ಅಲ್ಲಿ ಕೈಗಾರಿಕೆ, ಶಾಲಾ–ಕಾಲೇಜು, ಆಸ್ಪತ್ರೆಗಳನ್ನು ನಿರ್ಮಿಸಿದ್ದಾರೆ’ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ಹೇಳಿದರು.
ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ, ‘ಕೆ.ಎಚ್. ಪಾಟೀಲ ಅವರು ಸ್ನೇಹಮಯಿಯಾಗಿದ್ದರು. ಇಡೀ ಗದಗದ ವಾತಾವರಣವನ್ನು ಅವರು ಬದಲಾಯಿಸಿದರು. ನಿಷ್ಠುರವಾದಿಯಾಗಿದ್ದು, ಅವರಂತಹ ರಾಜಕಾರಣಿ ಕಾಣಸಿಗುವುದು ಅಪರೂಪ. ಒಂದು ವೇಳೆ ಅವರು ನಿಷ್ಠುರವಾಗಿರದಿದ್ದರೆ ರಾಜ್ಯದ ಮುಖ್ಯಮಂತ್ರಿಯಾಗುತ್ತಿದ್ದರು. ಯಾವುದೇ ಯೋಚನೆ ಮಾಡದೆ ನೇರವಾಗಿ ಮಾತನಾಡುತ್ತಿದ್ದರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ‘ಪಾಟೀಲರ ಆಶೀರ್ವಾದದಿಂದಲೇ ನಾನು ಈ ಸ್ಥಾನಕ್ಕೆ ಬಂದಿದ್ದೇನೆ. ಹುಲಕೋಟಿ ಹೆಸರನ್ನು ಅವರು ರಾಷ್ಟ್ರಮಟ್ಟಕ್ಕೆ ಕೊಂಡೊಯ್ದರು. ಸ್ವಂತ ಪರಿಶ್ರಮ, ಹೋರಾಟದಿಂದ ಅಂದುಕೊಂಡಿದ್ದನ್ನು ಸಾಧಿಸಿದರು’ ಎಂದು ಹೇಳಿದರು.
ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ, ‘ಯುವಜನರಿಗೆ ಪಾಟೀಲರು ಉತ್ತೇಜನ ನೀಡುತ್ತಿದ್ದರು. ನನ್ನ ರಾಜಕೀಯ ಬೆಳವಣಿಗೆಯಲ್ಲಿಯೂ ಅವರ ಪಾತ್ರವಿದೆ. ರಾಜಕೀಯ ಕ್ಷೇತ್ರದಲ್ಲಿ ಬೆಳೆಯಲು ಅವರಂತಹ ನಿಷ್ಠಾವಂತ, ಪ್ರಾಮಾಣಿಕ ಗುರು ಸಿಗಬೇಕು’ ಎಂದರು.
ಮಾಜಿ ಸಭಾಪತಿ ವಿ.ಆರ್. ಸುದರ್ಶನ್, ‘ಸಹಕಾರಿ ಕ್ಷೇತ್ರದ ಸಾಧಕರಿಗೆ ಸಹಕಾರಿ ರತ್ನ ಪ್ರಶಸ್ತಿ ನೀಡಲಾಗುತ್ತಿದೆ. ಈ ಕ್ಷೇತ್ರದ ಸಾಧಕರಿಗೆ ಸರ್ಕಾರವು ಕೆ.ಎಚ್. ಪಾಟೀಲ ಅವರ ಹೆಸರಿನಲ್ಲಿಯೂ ಪ್ರಶಸ್ತಿ ನೀಡಬೇಕು’ ಎಂದು ಆಗ್ರಹಿಸಿದರು.
ಕೆ.ಎಚ್. ಪಾಟೀಲ ಕಾನೂನು ಶಾಲೆ
ಕೆ.ಎಚ್. ಪಾಟೀಲ ಕಾನೂನು ಶಾಲೆಯನ್ನು ಉದ್ಘಾಟಿಸಿದ ಎಂ.ಎನ್. ವೆಂಕಟಾಚಲಯ್ಯ ‘ದೇಶದಲ್ಲಿ 160 ಕಾನೂನು ಕಾಲೇಜುಗಳಿವೆ. ಮತ್ತೊಂದು ಕಾನೂನು ಕಾಲೇಜು ಏಕೆ ಎಂಬ ಪ್ರಶ್ನೆ ಮೂಡುವುದು ಸಹಜ. ಕಾನೂನು ಪದವೀಧರರು ದೇಶದ ಆಸ್ತಿ. ಪ್ರಜಾಪ್ರಭುತ್ವ ಉಳಿಯಲು ಸಹಕಾರಿ. ಗುಣಮಟ್ಟದ ಕಾನೂನು ಶಿಕ್ಷಣ ಅಗತ್ಯ’ ಎಂದರು. ಈ ಕಾಲೇಜು ಐದು ವರ್ಷಗಳ ಬಿ.ಎ. ಎಲ್‌ಎಲ್.ಬಿ ಬಿ.ಕಾಂ. ಎಲ್‌ಎಲ್.ಬಿ. ಮೂರು ವರ್ಷಗಳ ಎಲ್‌ಎಲ್.ಬಿ. ಕಾರ್ಯಕ್ರಮ ಹೊಂದಿವೆ.
ಕೆ.ಎಚ್. ಪಾಟೀಲರು ವ್ಯಾವಹಾರಿಕ ರಾಜಕಾರಣಿಯಾಗಿರಲಿಲ್ಲ. ಸೇವಾ ಮನೋಧರ್ಮವನ್ನು ಅವರು ಹೊಂದಿದ್ದರು. ಧೈರ್ಯದಿಂದ ಹೋರಾಡುತ್ತಿದ್ದರು-ಜಿ. ಪರಮೇಶ್ವರ, ಗೃಹ ಸಚಿವ
ಉತ್ತಮ ಸಾಮಾಜಿಕ ರಾಜಕೀಯ ನಾಯಕರಾಗಲು ಕೆ.ಎಚ್. ಪಾಟೀಲ ಅವರ ವ್ಯಕ್ತಿತ್ವ ಹಾಗೂ ವಿಚಾರಧಾರೆಗಳನ್ನು ಮೈಗೂಡಿಸಿಕೊಳ್ಳಬೇಕು.-ಯು.ಟಿ. ಖಾದರ್, ವಿಧಾನಸಭೆಯ ಸಭಾಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.