ADVERTISEMENT

ಕಾರ್ನಾಡರ ಜತೆಗಿನ ‘ಆ ದಿನಗಳು’

ಕೆ.ಎಂ.ಚೈತನ್ಯ
Published 10 ಜೂನ್ 2019, 20:00 IST
Last Updated 10 ಜೂನ್ 2019, 20:00 IST
ಚಿತ್ರ ನಿರ್ದೇಶಕ ಚೈತನ್ಯ ಮತ್ತು ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರೊಂದಿಗೆ
ಚಿತ್ರ ನಿರ್ದೇಶಕ ಚೈತನ್ಯ ಮತ್ತು ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರೊಂದಿಗೆ   

ಗಿರೀಶ ಕಾರ್ನಾಡರು ನನ್ನ ಗುರುಗಳು. ನಾನು ಕಲಿತ ಸಾಹಿತ್ಯ, ಸಿನಿಮಾ, ಸೃಜನಶೀಲತೆ ಎಲ್ಲವೂ ಅವರ ಕೊಡುಗೆ. ಯಾವುದೇ ಚಿತ್ರಕಥೆ ಬರೆದಾಗ ಅವರನ್ನು ಸಂಪರ್ಕಿಸುತ್ತಿದ್ದೆ. ಯಾವುದೇ ಗೊಂದಲ ತಲೆದೋರಿದಾಗ ಅವರ ಕಡೆಗೆ ತಿರುಗುತ್ತಿದ್ದೆ. ಅವರ ಅಗಲಿಕೆಯು ಕನ್ನಡ ಸಾಹಿತ್ಯ ಲೋಕ, ರಂಗಭೂಮಿ ಹಾಗೂ ಸಿನಿಮಾ ರಂಗಕ್ಕೆ ತುಂಬಲಾರದ ನಷ್ಟ. ವೈಯಕ್ತಿಕವಾಗಿ ದೊಡ್ಡ ನಷ್ಟ.

ನಾನು ಉನ್ನತ ಶಿಕ್ಷಣಕ್ಕಾಗಿ ಮುಂಬೈಗೆ ಹೋಗಲು ನಿರ್ಧರಿಸಿದ್ದೆ. ಆಗ ಬೆಂಗಳೂರಿನಲ್ಲಿ ಟೆಲಿವಿಷನ್‌ ಇಂಡಸ್ಟ್ರಿ ಬೆಳೆದಿರಲಿಲ್ಲ. ದೂರದರ್ಶನ ಮಾತ್ರ ಇತ್ತು. ಮುಂಬೈಗೆ ಹೋದರೆ ಹೆಚ್ಚಿನ ಅವಕಾಶ ಸಿಗುತ್ತದೆ ಎಂದು ಕಾರ್ನಾಡರನ್ನು ಸಂಪರ್ಕಿಸಿದೆ. ಆಗ ನನಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತೀಯಾ ಎಂದು ಕೇಳಿ ದರು. ನನಗಾಗ ಅಚ್ಚರಿಯಾಯಿತು. 1996 ರಿಂದ ಅವರೊಟ್ಟಿಗೆ ನನ್ನ ಪಯಣ ಆರಂಭಗೊಂಡಿತು. ಮೂರು ಸೀರಿಯಲ್‌ಗಳನ್ನು ಮಾಡಿದೆ. ‘ಕಾನೂರು ಹೆಗ್ಗಡಿತಿ’ ಸಿನಿಮಾಕ್ಕೆ ಅವರೊಂದಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದೆ.

ಅವರು ನಿರ್ಮಿಸಿದ ದೇವನೂರ ಮಹಾದೇವ ಅವರ ‘ಕುಸುಮಬಾಲೆ’ ಮತ್ತು ಶಾಂತಿನಾಥ ದೇಸಾಯಿ ಅವರ ‘ಓಂ ನಮೋ’ ಎರಡು ಕಿರು ಸರಣಿಗಳನ್ನು ದೂರದರ್ಶನಕ್ಕೆ ನಿರ್ದೇಶಿಸಿದೆ. ನಾನು ‘ಆ ದಿನಗಳು’ ಸಿನಿಮಾ ನಿರ್ದೇಶಿಸಲು ಕಾರ್ನಾಡರೇ ಕಾರಣ. ಈ ಸಿನಿಮಾ ನಿರ್ದೇಶಿಸುವಂತೆ ಅಗ್ನಿ ಶ್ರೀಧರ್‌, ಕಾರ್ನಾಡರಿಗೆ ಕೇಳಿದ್ದರು. ಆಗ ಅವರು ‘ನನಗೆ ವಯಸ್ಸಾಗಿದೆ. ಯಾರನ್ನಾದರೂ ಯುವ ನಿರ್ದೇಶಕರಿಂದ ಮಾಡಿಸಿ’ ಎಂದರು. ಆ ಅವಕಾಶ ನನ್ನ ಪಾಲಿಗೆ ವರದಾನವಾಯಿತು. ಕಾರ್ನಾಡರೇ ಚಿತ್ರಕಥೆ ಬರೆದು ಸಿನಿಮಾದಲ್ಲೂ ನಟಿಸಿದರು.

ADVERTISEMENT

ದಶಕದ ಹಿಂದೆ ಕಾರ್ನಾಡರ ಬದುಕಿನ ಕುರಿತು ಸಾಕ್ಷ್ಯಚಿತ್ರ ನಿರ್ಮಿಸಿ ಕೊಡುವಂತೆವಾರ್ತಾ ಇಲಾಖೆ ಕೋರಿತ್ತು. ಕಾರ್ನಾಡರಿಂದಲೇ ಅವರ ಬದುಕಿನ ಕಥೆ ಹೇಳಿಸಿ ಚಿತ್ರೀಕರಿಸಿದೆವು. ಅದಕ್ಕೆ ಹಿನ್ನೆಲೆ ಧ್ವನಿ ನೀಡಿದ್ದುಎಂ.ಡಿ. ಪಲ್ಲವಿ. ಇದಾದ ನಂತರ ಕೇಂದ್ರ ಸಾಹಿತ್ಯ ಅಕಾಡೆಮಿಯು ಇಂಗ್ಲಿಷ್‌ನಲ್ಲಿ ಕಾರ್ನಾಡರ ಸಾಕ್ಷ್ಯಚಿತ್ರ ಮಾಡಿಕೊಡುವಂತೆ ಕೋರಿತು.

ಕನ್ನಡದ ಸಾಕ್ಷ್ಯಚಿತ್ರ ‘ಕಾರ್ನಾಡರು ನಡೆದು ಬಂದ ಹಾದಿ’ ಮಾದರಿಯಲ್ಲೇ ಮತ್ತಷ್ಟು ದೀರ್ಘವಾದ ಮತ್ತು ವಿವರವಾದ ಸಾಕ್ಷ್ಯಚಿತ್ರ ಮಾಡಿದೆವು. ವಿವೇಕ ಶಾನಭಾಗ ಅವರಿಂದ ಮಾಡಿಸಿದ ಸಂದರ್ಶನ ಮತ್ತು ನಾನು ಈ ಹಿಂದೆ ಮಾಡಿದ್ದ ಸಂದರ್ಶನಗಳು ಇದರಲ್ಲಿವೆ. ಅದಕ್ಕೆ ‘ಸ್ಕ್ಯಾಟರಿಂಗ್‌ ಗೋಲ್ಡನ್‌ ಫೆದರ್’ ಎಂಬ ಹೆಸರು ನೀಡಲಾಗಿದೆ.

ಕಾರ್ನಾಡರಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ ನಾವು ಮಲೆನಾಡಿನಲ್ಲಿ ‘ಕಾನೂರು ಹೆಗ್ಗಡಿತಿ’ ಶೂಟಿಂಗ್‌ ಮಾಡುತ್ತಿದ್ದೆವು. ಆಗ ಇಡೀ ಚಿತ್ರತಂಡ ಅಲ್ಲಿಯೇ ಬೀಡುಬಿಟ್ಟಿತ್ತು. ಹಾಗಾಗಿ, ಚಿತ್ರೀಕರಣ ನಿಲ್ಲಿಸಲು ಸಾಧ್ಯವಿರಲಿಲ್ಲ. ಆಗ ನನಗೆ ನಿರ್ದೇಶನದ ಜವಾಬ್ದಾರಿ ಹೊರಿಸಿ ಪ್ರಶಸ್ತಿ ಸ್ವೀಕರಿಸಲು ಹೋದರು. ಆಗ ನನಗೆ ಇಪ್ಪತ್ತೆರಡು ವಯಸ್ಸು. ದೊಡ್ಡ ಸಿನಿಮಾದ ನೊಗ ಹೊರಿಸಿದರು.

‘ಮಾಲ್ಗುಡಿ ಡೇಸ್‌’ಗೆ ಛಾಯಾಗ್ರಾಹಕರಾಗಿದ್ದ ಎಸ್‌. ರಾಮಚಂದ್ರ ಅವರೇ ಈ ಸಿನಿಮಾಕ್ಕೂ ಛಾಯಾಗ್ರಾಹಕ. ಕಾರ್ನಾಡರಿಗೆ ನನ್ನ ಮೇಲೆ ವಿಶ್ವಾಸ ವಿತ್ತು. ಅವರು ವಾಪಸ್‌ ಬಂದ ಮೇಲೆ ಶೂಟಿಂಗ್‌ ಆಗಿದ್ದ ಭಾಗವನ್ನು ನೋಡಿ
ದರು. ಬಳಿಕ ಇಡೀ ಹಿಂದಿ ಧಾರಾವಾಹಿ ಯ ನಿರ್ದೇಶನವನ್ನೇ ಬಿಟ್ಟು ಕೊಟ್ಟರು. ನಾವು ಏಕಕಾಲದಲ್ಲಿ ‘ಕಾನೂರು ಹೆಗ್ಗಡಿತಿ’ಯನ್ನು ಕನ್ನಡದಲ್ಲಿ ಸಿನಿಮಾ ವಾಗಿಯೂ ಮತ್ತು ಹಿಂದಿಯಲ್ಲಿ ಧಾರಾ ವಾಹಿಯಾಗಿಯೂ ನಿರ್ಮಿಸುತ್ತಿದ್ದೆವು.

ಯುವಜನರ ಪ್ರತಿಭೆ ಗುರುತಿಸುವುದರಲ್ಲಿ ಅವರು ಎತ್ತಿದ ಕೈ. ಮರಾಠಿ ರಂಗಭೂಮಿಯಲ್ಲಿದ್ದ ಶಂಕರನಾಗ್‌, ಕನ್ನಡ ರಂಗಭೂಮಿಯಲ್ಲಿದ್ದ ವಿಷ್ಣುವರ್ಧನ್‌ ಅವರಂತಹ ಪ್ರತಿಭೆಗಳನ್ನು ಕನ್ನಡಕ್ಕೆ ತಂದಿದ್ದು ಅವರ ಹಿರಿಮೆ.

ಕಳೆದ ಐದಾರು ತಿಂಗಳ ಹಿಂದೆ ಅವರು ಮರಾಠಿ ಸಿನಿಮಾವೊಂದರಲ್ಲಿ ನಟಿಸಿದ್ದರು. ಇದೇ ಅವರ ಕೊನೆ ಚಿತ್ರ ಇರಬಹುದು. ಅದರ ಡಬ್ಬಿಂಗ್‌ ಕಾರ್ಯ ಮುಗಿಸಿದ್ದರು. ಇತ್ತೀಚೆಗೆ ನಡೆಯಲು ತುಂಬಾ ಕಷ್ಟಪಡುತ್ತಿದ್ದರು. ಆದರೆ, ಅವರಲ್ಲಿ ಬರವಣಿಗೆ, ನಟನೆಯ ಹುಮ್ಮಸ್ಸು, ಚೈತನ್ಯ ಹೆಚ್ಚಿತ್ತು.

ಅಭಿನಯಕ್ಕಿಂತ ಅವರಿಗೆ ಬರವಣಿಗೆ ಮುಖ್ಯವಾಗಿತ್ತು. ತಮ್ಮ ಬರವಣಿಗೆ ಹರಿತಗೊಳಿಸಿಕೊಳ್ಳಲು ನಟನೆಯನ್ನೂಇಷ್ಟಪಡುತ್ತಿದ್ದರು. ಹೆಚ್ಚಾಗಿ ಇಂಗ್ಲಿಷ್‌ ಸಿನಿಮಾ ನೋಡುತ್ತಿದ್ದರು. ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಮತ್ತು ವೆಬ್‌ ಸರಣಿಗಳನ್ನು ನೋಡುತ್ತಿದ್ದರು. ಚೆನ್ನಾಗಿರುವ ಕನ್ನಡ ಸಿನಿಮಾಗಳು ಬಂದಿವೆ ಎಂದು ನಾವು ಹೇಳಿದಾಗ ತಪ್ಪದೇ ಚಿತ್ರಮಂದಿರಕ್ಕೆ ಹೋಗುತ್ತಿದ್ದರು.

ಅವರ ಆತ್ಮಕತೆಯಾದ ‘ಆಡಾಡತ ಆಯುಷ್ಯ’ದ ಎರಡನೇ ಭಾಗ ‘ನೋಡ ನೋಡುತ್ತಾ ದಿನಮಾನ’ ಬರೆಯುವ ತಯಾರಿಯಲ್ಲಿದ್ದರು. ಇದಕ್ಕಾಗಿ ಟಿಪ್ಪಣಿ ಮಾಡಿಕೊಂಡಿದ್ದರು. ಅವರು ನನ್ನೊಂದಿಗೆ ಚರ್ಚೆ ಮಾಡಿದ್ದ ಪ್ರಕಾರ ಅವರು ಬರೆಯಬೇಕಿದ್ದ ಎರಡು– ಮೂರು ನಾಟಕಗಳು ಅರ್ಧಕ್ಕೆ ನಿಂತಿವೆ. ಒಪ್ಪಿಕೊಂಡಿದ್ದ ಎಲ್ಲ ಸಿನಿಮಾಗಳನ್ನು ಪೂರ್ಣಗೊಳಿಸಿದ್ದಾರೆ. ಆರೋಗ್ಯ ಸಮಸ್ಯೆ ಬಿಗಡಾಯಿಸಿದ ಮೇಲೆ ಸಿನಿಮಾಗಳಲ್ಲಿ ನಟಿಸಲು ಒಪ್ಪಿಕೊಂಡಿರಲಿಲ್ಲ.

ಇವುಗಳನ್ನೂ ಓದಿ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.