ADVERTISEMENT

ಕಿರುಕುಳ ನೀಡಲು ಸುಧಾಕರ್‌ ಮೇಲೆ ಕೇಸು: ಅಶೋಕ ಟೀಕೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 16:31 IST
Last Updated 8 ಆಗಸ್ಟ್ 2025, 16:31 IST
ಡಾ.ಕೆ.ಸುಧಾಕರ್
ಡಾ.ಕೆ.ಸುಧಾಕರ್   

ಬೆಂಗಳೂರು: ವಿರೋಧಪಕ್ಷದ ನಾಯಕರಿಗೆ ಕಿರುಕುಳ ನೀಡಲು ಸರ್ಕಾರ ಪೊಲೀಸರನ್ನು ಬಳಸುತ್ತಿದೆ. ಚಾಲಕ ಬಾಬು ಆತ್ಮಹತ್ಯೆ ಪ್ರಕರಣದಲ್ಲಿ ಸಂಸದ ಡಾ.ಕೆ.ಸುಧಾಕರ್ ಪಾತ್ರ ಇಲ್ಲದಿದ್ದರೂ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ ದೂರಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆತ್ಮಹತ್ಯೆ ಮಾಡಿಕೊಂಡ ಚಾಲಕ ಬಾಬು ಜತೆ ಸುಧಾಕರ್ ಅವರಿಗೆ ಆಪ್ತ ಸಂಬಂಧವೇನೂ ಇಲ್ಲ. ಈ ಪ್ರಕರಣದಲ್ಲಿ ಜಾತಿನಿಂದನೆ ಆರೋಪವೂ ಬರುವುದಿಲ್ಲ. ರಾಜಕೀಯ ದ್ವೇಷದಿಂದ ಎಫ್‌ಐಆರ್ ದಾಖಲಿಸಲಾಗಿದೆ ಎಂದರು.

ಶಾಸಕ ಬೈರತಿ ಬಸವರಾಜ್ ಅವರ ಮೇಲೂ ಇದೇ ರೀತಿ ಎಫ್‌ಐಆರ್ ದಾಖಲಿಸಲಾಗಿದೆ. ಕೊಡಗಿನಲ್ಲಿ ಬಿಜೆಪಿ ಕಾರ್ಯಕರ್ತ ವಿನಯ್‌ ಸೋಮಯ್ಯ ಅವರು ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ, ಕಾಂಗ್ರೆಸ್ ಶಾಸಕರಾದ ಎ.ಎಸ್‌.ಪೊನ್ನಣ್ಣ ಮತ್ತು ಮಂಥರ್‌ಗೌಡ ಅವರ ಹೆಸರು ಎಫ್‌ಐಆರ್‌ನಲ್ಲಿ ಬರಲೇ ಇಲ್ಲ. ಪೊಲೀಸರು ಎಲ್ಲರಿಗೂ ಸಮಾನವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

ADVERTISEMENT

ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಶಾಸಕ ಮುನಿರತ್ನ, ಸಿ.ಟಿ.ರವಿ, ಎನ್‌.ರವಿಕುಮಾರ್ ಮೊದಲಾದ ಬಿಜೆಪಿ ನಾಯಕರನ್ನು ಕಾಂಗ್ರೆಸ್‌ ಗುರಿ ಮಾಡಿದೆ. ಈಗ ಸುಧಾಕರ್‌ ಅವರ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಟೀಕಿಸಿದರು.

ಮಂಜುನಾಥ್‌ ಮತ್ತು ನಾಗೇಶ್‌ ಹಣ ಪಡೆದು ಮೋಸ ಮಾಡಿದ್ದಾರೆ ಎಂದು ಚಾಲಕ ಬಾಬು ಆತ್ಮಹತ್ಯೆ ಪತ್ರದಲ್ಲಿ ಬರೆದಿದ್ದಾರೆ. ಅದೇ ರೀತಿ ಆನ್‌ಲೈನ್‌ ಗೇಮ್‌ನಿಂದಲೂ ನಷ್ಟವಾಗಿದೆ ಎಂದು ತಿಳಿಸಿದ್ದಾರೆ. ಎಲ್ಲಿಯೂ ಸಂಸದ ಸುಧಾಕರ್ ಬಗ್ಗೆ ಆರೋಪ ಮಾಡಿಲ್ಲ ಎಂದು ಹೇಳಿದರು.

ಚಾಲಕನಿಗೆ ಕೆಲಸ ಕೊಡಿಸಲು ಸಂಸದ ಸುಧಾಕರ್ ಅವರಿಗೆ ಅಧಿಕಾರವಿಲ್ಲ. ಅವರ ವಿರುದ್ಧ ವಿನಾಕಾರಣ ಸಂಚು ಮಾಡಲಾಗಿದೆ. ಆದ್ದರಿಂದ ಎಫ್‌ಐಆರ್‌ನಿಂದ ಹೆಸರು ಕೈಬಿಡಬೇಕು. ಇಲ್ಲವಾದರೆ ನ್ಯಾಯಾಲಯದಲ್ಲಿ ಸರ್ಕಾರ ಮುಖಭಂಗಕ್ಕೆ ಒಳಗಾಗಬೇಕಾಗುತ್ತದೆ ಎಂದು ನಾರಾಯಣಸ್ವಾಮಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.