ADVERTISEMENT

2ಎ ಸೇರಿಸುವಂತೆ ಹೋರಾಟ, ಸರ್ಕಾರ ಇಕ್ಕಟ್ಟಿಗೆ: ಸುಧಾಕರ್‌

ಮುಂದಿನ ಸರ್ಕಾರದಲ್ಲಿ ಬಲಿಜಿಗರಿಗೆ ‘2ಎ’ ಸೌಲಭ್ಯ: ಸಚಿವರ ಭರವಸೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2023, 19:45 IST
Last Updated 7 ಮಾರ್ಚ್ 2023, 19:45 IST
ಡಾ.ಕೆ.ಸುಧಾಕರ್
ಡಾ.ಕೆ.ಸುಧಾಕರ್   

ಚಿಕ್ಕಬಳ್ಳಾಪುರ: ಕೆಲವು ದೊಡ್ಡ ಸಮುದಾಯಗಳು ತಮ್ಮನ್ನು ‘ಪ್ರವರ್ಗ 2ಎ’ಗೆ ಸೇರಿಸುವಂತೆ ಹೋರಾಟ ಮಾಡುತ್ತಿವೆ. ದೊಡ್ಡ ಸಮುದಾಯಗಳ ಹೋರಾಟದಿಂದ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

‘ಬಲಿಜ ಸಮಯದಾಯಕ್ಕೆ ಪೂರ್ಣ ಪ್ರಮಾಣದಲ್ಲಿ ‘2ಎ’ಮೀಸಲಾತಿ ಸೌಲಭ್ಯ ಕೊಡಬೇಕು ಎಂದು ಸರ್ಕಾರ ದೃಢ ಸಂಕಲ್ಪ ಮಾಡಿತ್ತು. ಆದರೆ, ದೊಡ್ಡ ಸಮುದಾಯಗಳ ಬೇಡಿಕೆಯಿಂದ ಇದು ಸಾಧ್ಯವಾಗಲಿಲ್ಲ. ಮುಂದಿನ ಅವಧಿಯಲ್ಲಿ ನಮ್ಮದೇ ಸರ್ಕಾರ ಬರುತ್ತದೆ. ಆಗ ಬಲಿಜಿಗ ಸಮುದಾಯಕ್ಕೆ ಉದ್ಯೋಗದಲ್ಲೂ ನಾವು ‘2ಎ’ ಸೌಲಭ್ಯ ಕೊಡುತ್ತೇವೆ’ ಎಂದು ಅವರು ಭರವಸೆ ನೀಡಿದರು.

ನಗರದಲ್ಲಿ ಮಂಗಳವಾರ ನಡೆದ ಕೈವಾರ ತಾತಯ್ಯ (ಯೋಗಿ ನಾರೇಯಣ ಯತೀಂದ್ರರ) ಅವರ ರಾಜ್ಯ ಮಟ್ಟದ ಜಯಂತಿಯಲ್ಲಿ ಅವರು ಮಾತನಾಡಿದರು.

ADVERTISEMENT

ಅನೇಕ ವರ್ಷಗಳಿಂದ ಅಭಿವೃದ್ಧಿ ನಿಗಮ ರಚಿಸುವಂತೆ ಬಲಿಜ ಸಮುದಾಯವು ಆಗ್ರಹಿಸುತ್ತಿದೆ. ವಾರದ ಒಳಗೆ ಬಲಿಜ ಅಭಿವೃದ್ಧಿ ನಿಗಮ ರಚನೆಯ ಆದೇಶ ಮಾಡಿಸಿಕೊಡುತ್ತೇವೆ ಎಂದು ಭರವಸೆ ನೀಡಿದರು.

1994ರವರೆಗೂ ಬಲಿಜಿಗರು ‘2ಎ’ ಸೌಲಭ್ಯ ಪಡೆಯುತ್ತಿದ್ದರು. ಅಂದಿನ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಬಲಿಜಿಗರನ್ನು ‘2ಎ’ನಿಂದ ತೆಗೆದರು. ಅಂದಿನಿಂದ ಸಮುದಾಯ ಹೋರಾಟ ನಡೆಸಿದೆ. ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಸಮುದಾಯಕ್ಕೆ ಶೈಕ್ಷಣಿಕವಾಗಿ ‘2ಎ’ ಮೀಸಲಾತಿ ನೀಡಿದರು ಎಂದು ಹೇಳಿದರು. ಕೈವಾರ ತಾತಯ್ಯ ಅವರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಮಾಡಿದ್ದು ಬಿಜೆಪಿ ಸರ್ಕಾರ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಸಮುದಾಯಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ತೀರ್ಮಾನಿಸಿದ್ದಾರೆ ಎಂದರು.

ಬಲಿಜಿಗರಿಂದ ರಾಜಕೀಯ ನಿರ್ಣಯ?
ಪೂರ್ಣ ಪ್ರಮಾಣದಲ್ಲಿ ‘2ಎ’ ಮೀಸಲಾತಿಗಾಗಿ ಹಲವು ವರ್ಷಗಳಿಂದ ಬಲಿಜ ಸಮುದಾಯ ಹೋರಾಟ ನಡೆಸಿತ್ತು. ಸೌಲಭ್ಯ ಕಲ್ಪಿಸದಿದ್ದಕ್ಕೆ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಬಲಿಜ ಜಾಗೃತ ವೇದಿಕೆಯು ತಾತಯ್ಯ ಜಯಂತಿ ಸರ್ಕಾರಿ ಕಾರ್ಯಕ್ರಮ ಬಹಿಷ್ಕಾರಕ್ಕೆ ಕರೆ ನೀಡಿತ್ತು.

ಜ.27ರಂದು ಬೆಂಗಳೂರಿನಲ್ಲಿ ಕರ್ನಾಟಕ ಪ್ರದೇಶ ಬಲಿಜ ಸಂಘದ ನೇತೃತ್ವದಲ್ಲಿ ನಡೆದ ಬಲಿಜ ಸಂಕಲ್ಪ ಸಭೆಗೆ ಬಂದು ಸರ್ಕಾರದ ಪರವಾಗಿ ಮನವಿ ಸ್ವೀಕರಿಸಿದ್ದ ಸಚಿವ ಡಾ.ಕೆ.ಸುಧಾಕರ್ ‘2ಎ ಮೀಸಲಾತಿ ವಾಪಸ್ ಕೊಡಿಸುವ ಸಂಬಂಧ 15ರಿಂದ 20 ದಿನಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಸಮುದಾಯದ ಮುಖಂಡರ ಸಭೆ ಕರೆಯಲು ನಾನೇ ನೇತೃತ್ವ ವಹಿಸುತ್ತೇನೆ’ ಎಂದಿದ್ದರು. ಆ ಸಭೆ ಇಂದಿಗೂ ನಡೆದಿಲ್ಲ.

ಈಗ ಕೈವಾರ ತಾತಯ್ಯ ಜಯಂತಿಯಲ್ಲಿಯೇ ಮುಂದಿನ ಸರ್ಕಾರದಲ್ಲಿ ಮೀಸಲಾತಿ ಕಲ್ಪಿಸುತ್ತೇವೆ ಎಂದಿದ್ದಾರೆ. ಸರ್ಕಾರ ‘2ಎ’ ಮೀಸಲಾತಿ ಕಲ್ಪಿಸದಿದ್ದರೆ ರಾಜಕೀಯ ನಿರ್ಣಯ ಕೈಗೊಳ್ಳುತ್ತೇವೆ ಎಂದು ಬಲಿಜ ಸಂಘ ಈ ಹಿಂದಿನಿಂದಲೂ ಹೇಳುತ್ತಿದೆ. ಈಗ ಬಲಿಜ ಸಂಘದ ನಡೆಯ ಬಗ್ಗೆ ಸಮುದಾಯದಲ್ಲಿ ಕುತೂಹಲವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.