
ಉಪ್ಪಿನಂಗಡಿ: ಐರ್ಲೆಂಡ್‌ನಲ್ಲಿ ಉದ್ಯೋಗದಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಯುವಕರೊಬ್ಬರು ಅಲ್ಲಿ ತನ್ನ ಮನೆಯಲ್ಲಿ ನಿಗೂಢವಾಗಿ ಮೃತಪಟ್ಟಿದ್ದಾರೆ.
ಕಡಬ ತಾಲ್ಲೂಕಿನ ಕುಟ್ರುಪಾಡಿ ವಿಮಲಗಿರಿ ನಿವಾಸಿ ಸಾಂಜೊ ಸುನಿಲ್ (31) ಮೃತ ಯುವಕ.
‘ಐರ್ಲೆಂಡ್‌ನ ಡಬ್ಲಿನ್ ನಗರದ ಫಿಂಗ್ಲಾಸ್ ಚಾರ್ಲ್ಸ್‌ಟೌನ್ ಪ್ರದೇಶದಲ್ಲಿ ಅವರು ವಾಸವಾಗಿದ್ದರು. ಸಾಂಜೊ ಸುನಿಲ್ ವಾಸವಿದ್ದ ಮನೆಯಲ್ಲಿ ಗುರುವಾರ ಬೆಳಿಗ್ಗೆ ಅವರ ಮೃತದೇಹ ಪತ್ತೆಯಾಗಿದೆ ಎಂಬ ಮಾಹಿತಿ ಸಿಕ್ಕಿದೆ’ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮೊದಲು ಇಸ್ರೇಲ್‌ನಲ್ಲಿ ಉದ್ಯೋಗದಲ್ಲಿದ್ದ ಸಾಂಜೊ ಸುನಿಲ್ ವರ್ಷದ ಹಿಂದಷ್ಟೇ ಲಿಷ್ಮಾ ಅವರನ್ನು ಮದುವೆಯಾಗಿದ್ದರು. ಅವರ ಪತ್ನಿ ಲಿಷ್ಮಾ ಫಿಲಿಫ್ ಅವರು ಐರ್ಲೆಂಡ್‌ನಲ್ಲಿ ನರ್ಸ್ ಆಗಿದ್ದಾರೆ. ಇಸ್ರೇಲ್‌ನಲ್ಲಿ ಕೆಲಸ ತೊರೆದಿದ್ದ ಸಾಂಜೊ ಸುನಿಲ್ ತಿಂಗಳ ಹಿಂದಷ್ಟೇ ಐರ್ಲೆಂಡ್‌ನಲ್ಲಿ ಕೆಲಸಕ್ಕೆ ಸೇರಿದ್ದರು’ ಎಂದು ಅವರ ಬಂಧುವೊಬ್ಬರು ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
ಐರಿಷ್ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಾಥಮಿಕ ತನಿಖೆ ನಡೆಸಿದ್ದಾರೆ. ಮೇಲ್ನೋಟಕ್ಕೆ ಇದು ಆತ್ಮಹತ್ಯೆಯಂತೆ ಕಂಡುಬಂದಿದೆ. ಸಾವಿನ ನಿಖರ ಕಾರಣ ಇನ್ನೂ ಖಚಿತಪಟ್ಟಿಲ್ಲ. ‘ಸಂಶಯಾಸ್ಪದ ಸಾವು ಎಂದು ಪರಿಗಣಿಸಿ ತನಿಖೆ ಆರಂಭಿಸಲಾಗಿದೆ’ ಎಂದು ಅಲ್ಲಿನ ಪೊಲೀಸರು ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ ಎಂದು ಗೊತ್ತಾಗಿದೆ. ಮೃತರಿಗೆ ಪತ್ನಿ, ತಂದೆ, ತಾಯಿ ಮತ್ತು ಇಬ್ಬರು
ಸಹೋದರರು ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.