ADVERTISEMENT

ಸಂವಿಧಾನ ಉಲ್ಲಂಘಿಸಿದ ಪ್ರಭುತ್ವಕ್ಕೆ ಶಿಕ್ಷೆ ಯಾವಾಗ? ಡಾ. ಅಪ್ಪಗೆರೆ ಸೋಮಶೇಖರ

ಕರ್ನಾಟಕ  ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2020, 20:16 IST
Last Updated 6 ಫೆಬ್ರುವರಿ 2020, 20:16 IST
ಕಲಬುರ್ಗಿಯಲ್ಲಿ ನಡೆಯುತ್ತಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾನಾಂತರ ವೇದಿಕೆಯಲ್ಲಿ ಗುರುವಾರ 'ಕನ್ನಡನಾಡು –ನುಡಿ ಮತ್ತು ಯುವ ಕರ್ನಾಟಕ' ಕುರಿತು ನಡೆದ ಗೋಷ್ಠಿಯಲ್ಲಿ ಮಾತನಾಡಿದ ಅಪ್ಪುಗೆರೆ ಸೋಮಶೇಖರ್‌ ಮಾತನಾಡಿದರು
ಕಲಬುರ್ಗಿಯಲ್ಲಿ ನಡೆಯುತ್ತಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾನಾಂತರ ವೇದಿಕೆಯಲ್ಲಿ ಗುರುವಾರ 'ಕನ್ನಡನಾಡು –ನುಡಿ ಮತ್ತು ಯುವ ಕರ್ನಾಟಕ' ಕುರಿತು ನಡೆದ ಗೋಷ್ಠಿಯಲ್ಲಿ ಮಾತನಾಡಿದ ಅಪ್ಪುಗೆರೆ ಸೋಮಶೇಖರ್‌ ಮಾತನಾಡಿದರು   

ಕಲಬುರ್ಗಿ: ಕಾನೂನು ಉಲ್ಲಂಘಿಸುವ ಅಪರಾಧಿಯನ್ನು ಕಠಿಣ ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಆದರೆ, 70 ವರ್ಷಗಳಿಂದ ಸಂವಿಧಾನದ ಆಶಯಗಳನ್ನು ವ್ಯವಸ್ಥಿತವಾಗಿ ಉಲ್ಲಂಘಿಸುತ್ತಿರುವ ಪ್ರಭುತ್ವಕ್ಕೆ ಯಾಕೆ ಶಿಕ್ಷೆ ವಿಧಿಸಲಾಗುತ್ತಿಲ್ಲ' ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಅಪ್ಪಗೆರೆ ಸೋಮಶೇಖರ ಪ್ರಶ್ನಿಸಿದರು.

ಸಮ್ಮೇಳನದ ಸಮಾನಾಂತರ ವೇದಿಕೆಯಲ್ಲಿ ಗುರುವಾರ 'ಕನ್ನಡನಾಡು –ನುಡಿ ಮತ್ತು ಯುವ ಕರ್ನಾಟಕ' ಕುರಿತು ನಡೆದ ಗೋಷ್ಠಿಯಲ್ಲಿ ಮಾತನಾಡಿದರು.

‘ಇದು ಪ್ರಭುತ್ವವನ್ನು ಪ್ರಶ್ನಿಸುವುದೇ ಅಪರಾಧವಾಗಿದೆ. ಪ್ರಶ್ನಿಸುವವರೇ ಅಪರಾಧಿ ಆಗಿದ್ದಾರೆ. ‘ವ್ಯವಸ್ಥೆಯನ್ನು ಪ್ರಶ್ನಿಸಿದರೆ ದೇಶದ್ರೋಹ ಪಟ್ಟ, ಕವನ ವಾಚಿಸಿದರೆ ಎಫ್ಐಆರ್‌ ದಾಖಲಿಸುವ ಪ್ರಸ್ತುತ ವರ್ತಮಾನವು ಅಘೋಷಿತ ತುರ್ತುಪರಿಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಹೊರತು ಜನಪರ ವಾತಾವರಣ ಕಂಡು ಬರುತ್ತಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

‘ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿಯುವ ಪ್ರಭುತ್ವವು ಯುವಜನರ ದಾರಿ ತಪ್ಪಿಸುತ್ತಿದೆ. ಕೋಮುವಾದ, ಜಾತಿವಾದದ ಮದ ಏರಿಸಿ ಅವರ ಬದುಕು, ಭವಿಷ್ಯ ಹಾಳುಮಾಡುತ್ತಿದೆ. ಬದುಕಲು ನೆಮ್ಮದಿಯ ವಾತಾವರಣ ಕಲ್ಪಿಸುವ ಬದಲು ಅವರ ಮನದಲ್ಲಿ ಜಾತಿ, ಮತದ ವಿಷಬೀಜ ಬಿತ್ತಲಾಗು
ತ್ತಿದೆ' ಎಂದು ಬೇಸರ ವ್ಯಕ್ತಪಡಿಸಿದರು.

‘ಜಾತಿ, ಮತ, ಧರ್ಮಗಳ ಎಲ್ಲೆ ಮೀರಿ ಪ್ರತಿಯೊಬ್ಬರೂ ವಿಶ್ವಮಾನವ ರಾಗಿ ರೂಪುಗೊಳ್ಳಬೇಕು ಎಂಬ ಸಂದೇಶ ಸಾರಿದ ರಾಷ್ಟ್ರಕವಿ ಕುವೆಂಪು ಅವರನ್ನೇ ಜಾತಿ ಸಂಕೋಲೆಗಳಲ್ಲಿ ಕಟ್ಟಿ ಹಾಕಲಾಗುತ್ತಿದೆ‘ ಎಂದರು.

‘ಭಯಗ್ರಸ್ಥ, ಸರ್ವಾಧಿಕಾರಿ ಮತ್ತು ದೌರ್ಜನ್ಯದ ವ್ಯವಸ್ಥೆಯಲ್ಲೇ ಬದುಕು ಮುಂದುವರಿದಲ್ಲಿ, ಭವಿಷ್ಯದಲ್ಲಿ ಸಿಸಿಟಿವಿ ಕ್ಯಾಮೆರಾ ಹಾಕಿರುವ ಕೋಣೆಗಳಲ್ಲಿ ಉಪನ್ಯಾಸಕರು ಪಾಠ ಮಾಡಬೇಕಾದ ಪರಿಸ್ಥಿತಿ ಬರುತ್ತದೆ’ ಎಂದು ಅವರು ಎಚ್ಚರಿಸಿದರು.

ಅಧ್ಯಕ್ಷತೆ ವಹಿಸಿ ‘ಯುವ ಕರ್ನಾಟಕ ಒಂದು ಅವಲೋಕನ’ ಕುರಿತು ಉಪನ್ಯಾಸ ನೀಡಿದ ಸಾಹಿತಿ ಎಚ್.ಜಿ.ಶೋಭಾ ಅವರು, ಶಿಕ್ಷಣ ಸಂಸ್ಥೆಗಳು ಇಂದು ಕಾರ್ಖಾನೆಗಳಾಗಿವೆ. ವಿದ್ಯಾರ್ಥಿಗಳೇ ಸರಕು. ಅವರನ್ನು ಉತ್ತಮ ವ್ಯಕ್ತಿಗಳನ್ನಾಗಿಸುವ ಬದಲು ಯಂತ್ರಗಳಾಗಿಸಲಾಗುತ್ತಿದೆ‘ ಎಂದರು.

‘ದೇಶದ ಸತ್ಪ್ರಜೆಗಳನ್ನಾಗಿ ಮಕ್ಕಳನ್ನು ಬೆಳೆಸುವ ಹೊಣೆ ಪೋಷಕರು ಮತ್ತು ಶಿಕ್ಷಕರ ಮೇಲಿದೆ. ಅವರು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಬೇಕೆ ಹೊರತು ನುಣುಚಿಕೊಳ್ಳಬಾರದು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.