ADVERTISEMENT

ಕಲಬುರ್ಗಿ: ಮಂತ್ರಿ ಆಸೆಗಾಗಿ ಮಾಜಿಯಾದ ಪ್ರತಾಪಗೌಡ ಪಾಟೀಲ 

​ಪ್ರಜಾವಾಣಿ ವಾರ್ತೆ
Published 2 ಮೇ 2021, 11:06 IST
Last Updated 2 ಮೇ 2021, 11:06 IST
ಪ್ರತಾಪಗೌಡ ಪಾಟೀಲ
ಪ್ರತಾಪಗೌಡ ಪಾಟೀಲ    

ಕಲಬುರ್ಗಿ: ‘ಅತಿ ಆಸೆ ಗತಿಗೇಡು’ ಎಂಬ ನಾಣ್ಣುಡಿ ಪ್ರತಾಪಗೌಡ ಪಾಟೀಲ ಅವರ ವಿಷಯದಲ್ಲಿ ನಿಜವಾಗಿದೆ. ಮಂತ್ರಿಯಾಗಬೇಕು ಎಂಬ ಅತಿ ಆಸೆಯಿಂದಾಗಿ ಅವರು ಇದ್ದ ಶಾಸಕ ಸ್ಥಾನವನ್ನೂ ಕಳೆದುಕೊಂಡು ಮಾಜಿಯಾಗಿದ್ದಾರೆ.

2008ರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆಯ ನಂತರ ಮಸ್ಕಿ ಎಸ್‌ಟಿ ಮೀಸಲು ಕ್ಷೇತ್ರ ಅಸ್ತಿತ್ವಕ್ಕೆ ಬಂದಿದೆ. ಆಗಿನಿಂದ ನಡೆದ ಮೂರು ಚುನಾವಣೆಯಲ್ಲಿ ಪಕ್ಷ ಬದಲಿಸಿದ್ದರೂ ಪ್ರತಾಪಗೌಡ ಪಾಟೀಲ ಸತತ ಗೆಲುವು ಸಾಧಿಸಿ ಹ್ಯಾಟ್ರಿಕ್‌ ಸಾಧನೆ ಮಾಡಿದ್ದರು. ಈಗ ಉಪ ಚುನಾವಣೆಯಲ್ಲಿ ಪರಾಭವಗೊಂಡರು.

2008 ರಲ್ಲಿ ಬಿಜೆಪಿಯಿಂದ, 2013 ಹಾಗೂ 2018 ರಲ್ಲಿ ಕಾಂಗ್ರೆಸ್‌ನಿಂದ ಪ್ರತಾಪಗೌಡ ಪಾಟೀಲ ಆಯ್ಕೆಯಾಗಿದ್ದರು.
ಜೆಡಿಎಸ್‌–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ ತಮಗೆ ಮಂತ್ರಿಸ್ಥಾನ ಸಿಗಲಿಲ್ಲ ಎಂದು ಬೇಸರಗೊಂಡಿದ್ದರು. ಬಿ.ಎಸ್‌. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿಸಲು ವಿವಿಧ ಪಕ್ಷಗಳ 16 ಶಾಸಕರ ಜೊತೆಗೆ ಇವರೂ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ADVERTISEMENT

ಪ್ರತಾಪಗೌಡ ಪಾಟೀಲ ಅವರು ಒಂದೇ ವರ್ಷದಲ್ಲಿ ಶಾಸಕ ಸ್ಥಾನಕ್ಕೆ 2019 ಜೂನ್‌ನಲ್ಲಿ ರಾಜೀನಾಮೆ ನೀಡಿದ್ದರು. ಇವರೊಟ್ಟಿಗೆ ರಾಜೀನಾಮೆ ನೀಡಿದ್ದ ಇತರೆ ಕ್ಷೇತ್ರಗಳಿಗೆ ಚುನಾವಣೆ ನಡೆದರೂ ಹೈಕೋರ್ಟ್‌ನಲ್ಲಿಯ ಚುನಾವಣಾ ತಕರಾರು ಅರ್ಜಿ ಇತ್ಯರ್ಥಗೊಳ್ಳದ ಕಾರಣ ಈ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿಲ್ಲ. ವಿಳಂಬವಾಗಿ ಉಪ ಚುನಾವಣೆ ನಡೆಯಿತು.

‘ಪ್ರತಾಪಗೌಡ ಅವರು ಹಣಕ್ಕಾಗಿ ಬಿಜೆಪಿ ಸೇರಿದ್ದಾರೆ. ಮತದಾರರ ಸ್ವಾಭಿಮಾನ ಮಾರಾಟ ಮಾಡಿದ್ದಾರೆ. ಅಭಿವೃದ್ಧಿ ಕಡೆಗಣಿಸಿದ್ದಾರೆ’’ ಎಂದು ಕಾಂಗ್ರೆಸ್ಸಿಗರು ವ್ಯವಸ್ಥಿತ ಪ್ರಚಾರ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.